ಸಾರಾಂಶ
ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಡೆಂಘೀ ಜನ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ಕೊಪ್ಪಳ: ಡೆಂಘೀ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ. ಹೇಳಿದರು.
ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಡೆಂಘೀ ಜ್ವರದ ಹರಡುವಿಕೆ, ನಿಯಂತ್ರಣ ಹಾಗೂ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಸಮುದಾಯವನ್ನು ಜಾಗೃತಿಗೊಳಿಸಲು ಶುಕ್ರವಾರ ನಗರದ ಹಳೆಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ಡೆಂಘೀ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಡೆಂಘೀ ಒಂದು ಮಾರಕ ರೋಗವಾಗಿದ್ದು, ಅದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ ಎಂದು ಹೇಳಿದರು.ಆರೋಗ್ಯ ಸಚಿವಾಲಯದ ನಿರ್ದೇಶನದ ಮೇರೆಗೆ ಪ್ರತಿ ವರ್ಷದ ಮೇ 16 ಅನ್ನು ಜಿಲ್ಲೆಯಾದ್ಯಂತ ರಾಷ್ಟ್ರೀಯ ಡೆಂಘೀ ದಿನವಾಗಿ ಆಚರಿಸಿ, ಡೆಂಘೀ ರೋಗ ಪ್ರಸರಣ ಅವಧಿಯ ಮುನ್ನವೇ ಜನಸಮುದಾಯವನ್ನು ಜಾಗೃತಿಗೊಳಿಸಲು ವ್ಯಾಪಕ ಅಭಿಯಾನ, ಜಾಥಾಗಳು, ರ‍್ಯಾಲಿ, ಅಂತರ್ ಇಲಾಖಾ ಸಭೆ ಸಮಾರಂಭಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಎಲ್ಲ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡೆಂಘೀ-ಚಿಕೂನ್‌ಗುನ್ಯಾ ಜ್ವರಗಳಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆಯಾಗಲಿ ಪ್ರಸ್ತುತ ಲಭ್ಯವಿಲ್ಲ. ಅದಾಗ್ಯೂ ಜನರು ಭಯಪಡುವ ಅವಶ್ಯಕತೆ ಇಲ್ಲ, ಡೆಂಘೀ-ಚಿಕೂನ್‌ಗುನ್ಯಾ ಜ್ವರಗಳ ಲಕ್ಷಣಗಳನ್ನಾಧರಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ಯಾವುದೇ ಜ್ವರ ಕಾಣಿಸಿಕೊಂಡರೆ ಜನಸಮುದಾಯ ಶೀಘ್ರವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಮತ್ತು ಉಚಿತ ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ವೆಂಕಟೇಶ್ ಕೆ. ಮಾತನಾಡಿ, ಈಡೀಸ್ ಲಾರ್ವಾ ಸಮೀಕ್ಷೆಗಾಗಿ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ಜನರು ಸಹಕಾರ ನೀಡಿ ಅವರ ಸಲಹೆಗಳನ್ನು ಪಾಲಿಸಲು ಜನಸಮುದಾಯಕ್ಕೆ ಕರೆನೀಡಿದರು. ಈ ವರ್ಷದ ಧ್ಯೇಯವಾಕ್ಯ ‘ಸಮುದಾಯದೊಂದಿಗೆ ಸೇರಿ ಡೆಂಘೀ ಜ್ವರ ನಿಯಂತ್ರಿಸೋಣ’ ಎಂಬುದಾಗಿದ್ದು, ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಅವರು ಹೇಳಿದರು.
ಜಿಲ್ಲಾ ವಿಬಿಡಿ ಸಲಹೆಗಾರ ರಮೇಶ್ ಕೆ. ಮಾತನಾಡಿ, ಪ್ರಸ್ತುತ ಪೂರ್ವ ಮುಂಗಾರು ಮಳೆಗಾಲ ಪ್ರಾರಂಭವಾಗಿದ್ದು ಅಲ್ಲಲ್ಲಿ ನಿಂತ ನೀರಿನ ತಾಣಗಳು ಉತ್ಪತ್ತಿಯಾಗುತ್ತವೆ ಹಾಗೂ ನೀರಿನ ಶೇಖರಣಾ ಸಲಕರಣೆಗಳಲ್ಲಿ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಯಾಗಿ ಸೊಳ್ಳೆಗಳ ಸಾಂದ್ರತೆ ಹೆಚ್ಚಾಗುತ್ತದೆ. ಕಾರಣ, ಸೊಳ್ಳೆಗಳಿಂದ ಹರಡುವ ರೋಗಗಳಾದ ಡೆಂಘೀ, ಚಿಕೂನ್‌ಗುನ್ಯಾ ಹಾಗೂ ಮಲೇರಿಯಾದಂತಹ ಕಾಯಿಲೆಗಳು ಹೆಚ್ಚಾಗುವ ಸಂಭವವಿರುತ್ತದೆ. ಯಾವುದೇ ಜ್ವರವಿರಲಿ ಶೀಘ್ರವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆ ಪಡೆಯಬೇಕು. ಡೆಂಘೀ ನಿಯಂತ್ರಣಕ್ಕೆ ಜನಸಮುದಾಯದ ಸಹಕಾರ, ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಹಾಗೂ ಜನಜಾಗೃತಿಯೊಂದೇ ಪರಿಹಾರ ಮಾರ್ಗ ಎಂದರು.ಜಿಲ್ಲಾ ಆರೋಗ್ಯ ಶಿಕ್ಣಣಾಧಿಕಾರಿ ಶಿವಾನಂದ ಪೂಜಾರ ಮಾತನಾಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳಾದ ಡಾ. ಪ್ರಕಾಶ್ ವಿ., ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ನಂದಕುಮಾರ್, ಜಿಲ್ಲಾ ಕುಷ್ಟರೋಗ ನಿಯತ್ರಣಾಧಿಕಾರಿಗಳಾದ ಡಾ. ಪ್ರಕಾಶ್ ಎಚ್.ಎಸ್., ಕೊಪ್ಪಳ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ರಾಮಾಂಜನೇಯಾ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಭಾಗವಹಿಸಿದ್ದರು.