ಸಾರಾಂಶ
ಕೊಪ್ಪಳದ ಬೆಂಕಿನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಡೆಂಘೀ ನಿಯಂತ್ರಣದ ಕುರಿತು ಅರಿವು ಕಾರ್ಯಕ್ರಮ ನಡೆಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಡೆಂಘೀ ಲಕ್ಷಣ, ನಿಯಂತ್ರಣ ಕುರಿತು ಮಾಹಿತಿ ನೀಡಿದರು.
ಕೊಪ್ಪಳ: ಡೆಂಘಿ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಹೇಳಿದ್ದಾರೆ.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಕೊಪ್ಪಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬೆಂಕಿನಗರದ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಡೆಂಘೀ ನಿಯಂತ್ರಣದ ಕುರಿತು ಶಾಲೆಯ ಆವರಣದಲ್ಲಿ ನಡೆದ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮುದಾಯದೊಂದಿಗೆ ಸೇರಿ, ಡೆಂಘೀ ನಿಯಂತ್ರಿಸೋಣ ಎಂಬ ಘೋಷವಾಕ್ಯದೊಂದಿಗೆ ಡೆಂಘೀ ನಿಯಂತ್ರಣ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಮಳೆಗಾಲ ಪ್ರಾರಂಭವಾದ ಕಾರಣ ಶುದ್ಧ ನೀರಿನಲ್ಲಿ ಸೋಂಕಿತ ಈಡಿಸ್ ಜಾತಿಯ ಸೊಳ್ಳೆಗಳು ಮೊಟ್ಟೆಗಳನ್ನಿಟ್ಟು ಸಂತಾನಾಭಿವೃದ್ಧಿ ಮಾಡುತ್ತವೆ. ಆನಂತರ ಮನುಷ್ಯರಿಗೆ ಕಚ್ಚುವುದರಿಂದ ಈ ಕಾಯಿಲೆ ಹರಡುತ್ತದೆ. ತಲೆನೋವು, ವಾಂತಿ, ಕಣ್ಣಿನ ಹಿಂಭಾಗದಲ್ಲಿ ನೋವು, ಮೈಮೇಲೆ ಬಿಲ್ಲೆ ಆಕಾರದ ಕಪ್ಪು ಗಂಧೆಗಳು, ಕಪ್ಪು ಮಲವಿಸರ್ಜನೆ, ವಸಡುಗಳಲ್ಲಿ ರಕ್ತಸ್ರಾವ ಇಂತಹ ಲಕ್ಷಣಗಳಿದ್ದರೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ರಕ್ತ ಪರೀಕ್ಷೆ ಮಾಡಿಸಿ, ಖಚಿತಪಟ್ಟರೆ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜ್ವರದ ಬಗ್ಗೆ ನಿರ್ಲಕ್ಷ್ಯತನ ಮಾಡಬಾರದು. ಶಾಲೆಗಳಲ್ಲಿ, ಮನೆಗಳಲ್ಲಿ, ನೀರು ಶೇಖರಿಸುವ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟೆ, ಕಲ್ಲಿನದೋಣಿ ಇನ್ನಿತರ ನೀರು ಸಂಗ್ರಹ ಪರಿಕರಗಳನ್ನು ವಾರದಲ್ಲಿ 2 ಬಾರಿ ಸ್ವಚ್ಛವಾಗಿ ತೊಳೆದು. ಸುಣ್ಣಹಚ್ಚಿ ಒಣಗಿಸಿ ಪುನಃ ನೀರು ತುಂಬಬೇಕು. ನೀರಿನ ಸಲಕರಣೆಗಳಿಗೆ ಭದ್ರವಾಗಿ ಮುಚ್ಚಳದಿಂದ ಮುಚ್ಚಬೇಕು. ಸಾಯಂಕಾಲ ವೇಳೆ ಮನೆಯ ಮುಂದೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಸೊಳ್ಳೆ ಕಡಿತದಿಂದ ದೂರವಿರಲು ವೈಯಕ್ತಿಕ ರಕ್ಷಣೆ ಮಾಡಿಕೊಳ್ಳಬೇಕು. ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳಾದ ಟೈರ್, ಒರಳುಕಲ್ಲು, ತೆಗ್ಗಿನಚಿಪ್ಪು, ಒಡೆದ ಪ್ಲಾಸ್ಟಿಕ್ ಬಕೆಟ್ ಇತ್ಯಾದಿಗಳನ್ನು ಮನೆಯ ಮೇಲೆ ಮತ್ತು ಅಕ್ಕಪಕ್ಕದಲ್ಲಿ ಬಿಸಾಡಬಾರದು. ಈ ಬಗ್ಗೆ ಶಾಲಾ ವಿದ್ಯಾರ್ಥಿಗಳು ನಿಮ್ಮ ಪಾಲಕರಿಗೆ ತಿಳಿ ಹೇಳಬೇಕು. ಪ್ರತಿ ಶುಕ್ರವಾರ ಡೆಂಘೀ ನಿಯಂತ್ರಣ ಅಭಿಯಾನ ಸಮುದಾಯದೊಂದಿಗೆ ಆಚರಿಸಲಾಗುವುದು ಎಂದು ಹೇಳಿದರು.ಎಸ್.ಟಿ.ಎಸ್. ಇಬ್ರಾಹಿಂಸಾಬ್ ಅವರು ಕ್ಷಯರೋಗ ನಿರ್ಮೂಲನೆ ಕುರಿತು ವಿವರವಾಗಿ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯ ಸೋಮರೆಡ್ಡಿ ಡಂಬ್ರಳ್ಳಿ, ಶಿಕ್ಷಕರಾದ ವೀರಯ್ಯ, ಶೇಖರಪ್ಪ ಉಪಸ್ಥಿತರಿದ್ದರು.