ಅಮೃತ ಮಹೋತ್ಸವದ ಹೆಮ್ಮೆಯಲ್ಲಿ ಧಾರವಾಡ ಆಕಾಶವಾಣಿ!

| Published : Jan 06 2025, 01:01 AM IST

ಸಾರಾಂಶ

ಉತ್ತರ ಕರ್ನಾಟಕದ ಮೌಖಿಕ ಪರಂಪರೆಯ ಅಸ್ಮಿತೆ, ಈ ಭಾಗದ ಸಾಂಸ್ಕೃತಿಕ ರಾಯಭಾರಿ ಧಾರವಾಡದ ಆಕಾಶವಾಣಿಗೆ ಈಗ ಅಮೃತ ಮಹೋತ್ಸವ ಸಂಭ್ರಮ!

ಬಸವರಾಜ ಹಿರೇಮಠ

ಧಾರವಾಡ: 20ನೇ ಶತಮಾನದ ಅದ್ವಿತೀಯ ನಾಯಕನಾಗಿ ಮಾಧ್ಯಮ ಕ್ಷೇತ್ರ ಆಳಿದ ಶ್ರವ್ಯವಾಹಿನಿ, ಉತ್ತರ ಕರ್ನಾಟಕದ ಮೌಖಿಕ ಪರಂಪರೆಯ ಅಸ್ಮಿತೆ, ಈ ಭಾಗದ ಸಾಂಸ್ಕೃತಿಕ ರಾಯಭಾರಿ ಧಾರವಾಡದ ಆಕಾಶವಾಣಿಗೆ ಅಮೃತ ಮಹೋತ್ಸವ ಸಂಭ್ರಮ!

ಆಗಿನ ಕೇಂದ್ರ ಮಂತ್ರಿಯಾಗಿದ್ದ ಆರ್.ಆರ್. ದಿವಾಕರ ಈ ಆಕಾಶವಾಣಿಯನ್ನು 1950ರ ಜ. 8ರಂದು ಉದ್ಘಾಟಿಸಿದ್ದು, ಭಾರತ ರತ್ನ ಭೀಮಸೇನ ಜೋಶಿ ಸಹಚರೊಡನೆ ವಂದೇಮಾತರಂ, ಉದಯವಾಗಲಿ ಚೆಲುವ ಕನ್ನಡ ನಾಡು ಹಾಡಿದ್ದು ಇತಿಹಾಸ. ಖ್ಯಾತನಾಮರಾದ ದ.ರಾ. ಬೇಂದ್ರೆ, ಮಲ್ಲಿಕಾರ್ಜುನ ಮನ್ಸೂರ ಈ ವಾಣಿಯ ಸಲಹಾ ಮಂಡಳಿ ಸದಸ್ಯರಾಗಿದ್ದು ಮತ್ತೊಂದು ಇತಿಹಾಸ.

ಮಾಂತ್ರಿಕ ಪೆಟ್ಟಿಗೆ

ಬೇಂದ್ರೆ ಅಜ್ಜ ಸಾಧನಕೇರಿಯ ಓಣಿಯಲ್ಲಿ ರಾತ್ರಿ ಊಟದ ನಂತರ ಬುಧವಾರ ವಾಕ್ ಮಾಡುತ್ತಲೇ ಎಲ್ಲರ ಮನೆಯಲ್ಲಿ ದೊಡ್ಡದಾಗಿ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ನಾಟಕ ಕೇಳಿಯೇ ಮನೆ ತಲುಪುತ್ತಿದ್ದರು. ವಂದನಾ ಚಿಂತನ ಕೇಳುವ ಜನರು ಇನ್ನೂ ಇದ್ದಾರೆ. ಅಂತಹ ಮಾಂತ್ರಿಕ ಪೆಟ್ಟಿಗೆಗೀಗ 75ರ ಹರೆಯ. ದ.ರಾ. ಬೇಂದ್ರೆ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಚೆನ್ನವೀರ ಕಣವಿ, ವಿ.ಕೃ. ಗೋಕಾಕ್, ಗಿರೀಶ್ ಕಾರ್ನಾಡ, ಬಾಳಪ್ಪ ಏಣಗಿ, ಗಂಗೂಬಾಯಿ ಹಾನಗಲ್‌ ಮೊದಲಾದವರ ನೆಚ್ಚಿನ ಮಾಧ್ಯಮ ಆಗಿ ಮೆರೆದದ್ದು ಇತಿಹಾಸ. ರೇಡಿಯೋ ಕಾಕಾ, ನಾನಿ ಕಾಕಾ, ಅಕ್ಕಮ್ಮ... ಒಂದೇ ಎರಡೇ, ಇನ್ನೂ ಹಲವರು ಹೋದಲ್ಲೆಲ್ಲ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನರ ಸ್ಟಾರ್ ಕಲಾವಿದರಾಗಿದ್ದರು. ರೇಡಿಯೋ ಸೆಲೆಬ್ರಿಟಿಗಳನ್ನು ಹುಟ್ಟು ಹಾಕಿದ ಧೀಮಂತ ವಾಣಿ ಆಕಾಶವಾಣಿ ಎನ್ನಬಹುದು.

ಸೊರಗಿದರೂ ಚಿರಸ್ಥಾಯಿ

ಇದೀಗ 21ನೇ ಶತಮಾನದ ಮಾಧ್ಯಮಗಳ ಅಬ್ಬರ, ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಯು ಟ್ಯೂಬ್‌ಗಳ ಅಬ್ಬರ ಟ್ಯೂನ್ ಮಾಡಲೂ ಕಷ್ಟ ಪಡುವ ರೇಡಿಯೋ ಮಂಕಾದಂತೆ ತೋರುತ್ತಿದೆ. ಗ್ರಾಮೀಣ ಭಾಗದ ಜನರ ಪ್ರೀತಿಯಿಂದ ವಂಚಿತವಾಗುತ್ತಿದೆ. ಜನರ ಕೈಯಲ್ಲಿದೆ ಮಾಯಾವಿ ಮೊಬೈಲ್. ಹೀಗಾಗಿ ಕಾಯಂ ಉದ್ಯೋಗಿಗಳ ಸಂಖ್ಯೆ 10 ದಾಟದು. ಇಷ್ಟಾಗಿಯೂ ಆಕಾಶವಾಣಿ ವಚನಾಮೃತ ಸರಣಿ 175 ವಾರದ ಸರಣಿ ದಾಟಿದೆ. ಸುಬೋಧ ಸಮಾಲೋಚನೆ 115 ವಾರದ ಸರಣಿ ದಾಟಿದೆ. ಕೃಷಿಶೋಧನೆ ಸಾಧನೆ 120ರ ಗಡಿಯಲ್ಲಿದೆ. ಅನೇಕ ವಿಶೇಷ ಸಂದರ್ಶನಗಳ ಜತೆಗೆ ಮಾಹಿತಿ ನೀಡುವ ಸುದ್ದಿ- ಸಮಾಚಾರ, ಚಿತ್ರಗೀತೆಗಳು, ಸಂಗೀತ ಭಕ್ತಿ -ಭಾವ -ಜನಪದ ಗೀತೆ ವಾದ್ಯ ಹೀಗೆ ವೈವಿಧ್ಯಮಯಿ ಕಾರ್ಯಕ್ರಮಗಳು ಧಾರವಾಡ ಆಕಾಶವಾಣಿಯ ಸ್ಥಾನವನ್ನು ಚಿರಸ್ಥಾಯಿಯಾಗಿಸಿವೆ.ಇವರ ಸೇವೆ ಸ್ಮರಣೀಯ:ಆಕಾಶವಾಣಿಗೆ 75 ತುಂಬಿದ್ದು ಉದ್ಯೋಗಿಗಳ ಕೊರತೆ ಕಾಣಲಾರಂಭಿಸಿದರೂ ಆಡಳಿತ ವಿಭಾಗಕ್ಕೆ ಹೊರಗುತ್ತಿಗೆಯ ಜನ ಆಸರೆಯಾಗಿದ್ದಾರೆ. ಕಾರ್ಯಕ್ರಮ ವಿಭಾಗಕ್ಕೆ ಕಾಯಕಲ್ಪ ನೀಡಿದವರು ತಾತ್ಕಾಲಿಕ ಉದ್ಘೋಷಕರು, ಪ್ರಸಾರ ಸಹಾಯಕರು, ಗ್ರಂಥಪಾಲಕ ಅಧಿಕಾರಿಗಳ ಸೇವೆ ಸ್ಮರಣೀಯ. ಲಕ್ಷಾಂತರ ಧ್ವನಿಮುದ್ರಿಕೆ ಡಿಜಿಟಲೀಕರಿಸಿ ಮುಂದಿನ ಪೀಳಿಗೆಗೆ ಅಮೂಲ್ಯ ಧ್ವನಿ ಸಂಪತ್ತು ಮುಟ್ಟಿಸುತ್ತಿರುವ ಕೈಂಕರ್ಯ ತೊಟ್ಟಿದ್ದಾರೆ ಎಂದೇ ಹೇಳಬಹುದು.

21ನೇ ಶತಮಾನದ 24 ವರ್ಷಗಳು ರೇಡಿಯೋಕ್ಕೆ ಸವಾಲಿನವೇ. ಮೊಬೈಲ್, ಸಾಮಾಜಿಕ ಜಾಲತಾಣಗಳು ರೇಡಿಯೋ ಜಾಗವನ್ನು ಅಕ್ರಮಿಸಲು ಮುನ್ನುಗ್ಗುತ್ತಿವೆ. ಆದರೆ ಜ್ಞಾನಸಾಗರದ ಖಣಿ ಆಕಾಶವಾಣಿ ಆ ಸ್ಥಾನ ಬಿಟ್ಟು ಕೊಡಬಲ್ಲುದೆ ಎಂದು ಆಕಾಶವಾಣಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಕೆ. ಅರುಣ ಪ್ರಭಾಕರ ಹೇಳುತ್ತಾರೆ. ಬಾಕ್ಸ್...ಪಾಶ್ಚಾತ್ಯ ದೇಶಗಳಲ್ಲಿ ಮೆಚ್ಚುಗೆರೇಡಿಯೋ ವಿವಿಧ ಭಾರತಿಯೊಂದಿಗೆ ಮಿಳಿತವಾಗಿ ಎಫ್‌ಎಂ ಮೂಲಕ ಮೊಬೈಲ್ ತಲುಪಿದೆ. ನ್ಯೂಸ್ ಆನ್‌ ಏರ್ ಆಪ್ ಮೂಲಕ ಅಂತರ್ಜಾಲ ರೇಡಿಯೋ ಆಗಿ ಸಾಗರದಾಚೆ ತಲುಪಿ ಆಕಾಶವಾಣಿ ಧಾರವಾಡ ಪಾಶ್ಚಾತ್ಯ ದೇಶಗಳ ಕನ್ನಡ ಸಂಘಗಳ ಮೆಚ್ಚುಗೆ ಗಳಿಸಿದೆ. ಮಂಜು ಎಲೆಕ್ಟ್ರಾನಿಕ್ಸ್ ಹೇಳುವಂತೆ ರೇಡಿಯೋ ಕೊಳ್ಳುವವರ ಸಂಖ್ಯೆ ಧಾರವಾಡದಲ್ಲಿ ಮತ್ತೆ ಜಾಸ್ತಿ ಆಗಲಾರಂಭಿಸಿದೆ. ಯೂ ಟ್ಯೂಬ್‌ನಲ್ಲಿ ನೋಡುಗರ ಸಂಖ್ಯೆ 150 ವಿಡಿಯೋಗಳೊಡನೆ, 3 ಲಕ್ಷ ದಾಟಿದೆ.

ಮಲಪ್ರಭೆಯಲ್ಲಿ ನೀರು ಹರಿದಷ್ಟು ಪ್ರಮಾಣದ ಜ್ಞಾನ, ಆಕಾಶವಾಣಿ ಮೂಲಕ ನಮ್ಮೆಲ್ಲರ ಕಿವಿ ತಲುಪಿದೆ. ಜ. 8ರಂದು ಆಕಾಶವಾಣಿ ಮಟ್ಟಿಗೆ ಕಾರ್ಯಕ್ರಮ ಜರುಗಿದರೆ, 75ರ ಸಂಭ್ರಮದ ವೇದಿಕೆ ಕಾರ್ಯಕ್ರಮ ಇದೇ ತಿಂಗಳ 3ನೇ ವಾರ ಸೃಜನಾ ರಂಗಮಂದಿರದಲ್ಲಿ ನಡೆಯಲಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಾ. ಎಲ್‌. ಮುರುಗನ್ ಅತಿಥಿಗಳಾಗಿ ಭಾಗವಹಿಸುವರು. ಅಮೃತ ಮಹೋತ್ಸವ ಅಂಗವಾಗಿ ನೆನಪಿನ ಸುರುಳಿಯಿಂದ ಆಯ್ದ ಸ್ಮೃತಿ ಸಂಗೀತ, ಸ್ಮೃತಿ ಪಟಲದಿಂದ, ನೆನಪಿನಂಗಳ ಕಾರ್ಯಕ್ರಮಗಳು ಹಳೆಯ ಮಧುರ ನೆನಪುಗಳನ್ನು ಹೊತ್ತು ತರುತ್ತಿವೆ ಎನ್ನುತ್ತಾರೆ ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕರಾದ ಶರಣಬಸವ ಚೋಳಿನ.