ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಶಿವರಾತ್ರಿಗೆ ಶಿವ ಶಿವ.. ಎನ್ನುವಷ್ಟು ಬಿಸಿಲಿತ್ತು. ಶಿವರಾತ್ರಿ ಮುಗಿದು, ಹೋಳಿ ಹಬ್ಬ ಮುಗಿದು ದಿನಗಳು ಉರುಳಿದಂತೆ ಬಿಸಿಲಿನ ಪ್ರಕರತೆ ಮತ್ತಷ್ಟು ನಿಖರವಾಗುತ್ತಿದೆ. ಸದ್ಯದ ಬಿಸಿಲಿನ ಝಳಕ್ಕೆ ಧಾರವಾಡದ ಜನತೆ ಮಾತ್ರ ಅಕ್ಷರಶಃ ಮೆತ್ತಗಾಗುತ್ತಿದ್ದಾರೆ.ಕಳೆದ ಹತ್ತು-ಹದಿನೈದು ದಿನಗಳಿಂದ ಬಿಸಿಲಿನ ಪ್ರಕರತೆ ಹೆಚ್ಚಾಗಿದ್ದು, ಮಂಗಳವಾರ ಬೆಳಗ್ಗೆ 34 ಡಿಗ್ರಿ ಸೆಲ್ಸಿಯಸ್‌ನಿಂದ ಶುರುವಾದ ಬಿಸಿಲಿನ ವಾತಾವರಣ, ಮಧ್ಯಾಹ್ನ 1ಕ್ಕೆ 36 ಡಿಗ್ರಿ, ಮಧ್ಯಾಹ್ನ 2ರಿಂದ 4ರ ವರೆಗೆ ಶೇ. 38 ಡಿಗ್ರಿ ವರೆಗೂ ಇತ್ತು. ಮಧ್ಯಾಹ್ನ ಮಾತ್ರ ನೆತ್ತಿ ಸುಡುವ ಬಿಸಿಲಿದ್ದು, ಹೀಗಾಗಿ ಬೆಳಗಿನ ಹೊತ್ತು ಹಾಗೂ ಸಂಜೆ ಹೊತ್ತು ಮಾತ್ರ ಹೊರಗೆ ಹೋಗುವ ಸ್ಥಿತಿ ಉಂಟಾಗಿದೆ. ಗಾಳಿಯೂ ಇಲ್ಲದಾಗಿದ್ದು, ಬೀಸಿದ ಗಾಳಿಯು ಬಿಸಿಗಾಳಿಯಾಗಿ ಪರಿವರ್ತನೆಯಾಗುತ್ತಿದ್ದು, ಮನೆಗಳಲ್ಲಿ ನಿರಂತರ ಫ್ಯಾನ್ ತಿರುಗುವಂತಾಗಿದೆ. ಪದೇ ಪದೇ ಗಂಟಲು ಆರುತ್ತಿದ್ದು, ಬರೀ ತಂಪಾದ ಪದಾರ್ಥಗಳ, ಹಣ್ಣುಗಳ ಸೇವನೆ, ಆಗಾಗ ನೀರು ಕುಡಿಯುವ ಸ್ಥಿತಿ ಇದೆ. ಇದೇ ಸಮಯದಲ್ಲಿ ಎಲ್ಲ ತರಗತಿಗಳ ಅದರಲ್ಲೂ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿದ್ದು, ಬಿಸಿಲು ಹಾಗೂ ಪರೀಕ್ಷೆಯ ಭಯ ವಿದ್ಯಾರ್ಥಿಗಳ ನೆತ್ತಿ ಸುಡುತ್ತಿದೆ.
ಕಾಟ ಕೊಡುತ್ತಿರುವ ಝಳಬೇಸಿಗೆ ವಾತಾವರಣದಲ್ಲಿ ಬಹುತೇಕ ಎಲ್ಲ ಜೀವ ಸಂಕಲಕ್ಕೂ ಸಂಕಷ್ಟ ಸಾಮಾನ್ಯ. ಆದರೆ, ಸಾಮಾನ್ಯ ಬಿಸಿಲಿಗಿಂತ ಹೆಚ್ಚಿನ ಉಷ್ಣಾಂಶ ಇದ್ದರೆ, ಒಂದಿಷ್ಟು ಜೀವಗಳು ನರಳಾಡುವಂತಾಗುತ್ತದೆ. ಸಿರಿವಂತರು ಕಾರು, ಮನೆ, ಕಚೇರಿಗಳಲ್ಲಿ ಎಸಿ, ಕೂಲರ್ ಅಂತಹ ವಸ್ತುಗಳಿಂದ ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳುತ್ತಾರೆ. ಸಾಮಾನ್ಯ ಹಾಗೂ ಬಡ ಜನರಿಗೆ ಬಿಸಿಲಿನ ಬೇಗೆ ತೊಂದರೆಗೀಡು ಮಾಡುವಂತಾಗಿದೆ.
ಅದರಲ್ಲಿಯೂ ಶಿಶುಗಳಿಗೆ, ವಯಸ್ಸಾದವರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ, ಬೀದಿಬದಿಯಲ್ಲಿ ವ್ಯಾಪಾರಸ್ಥರಿಗೆ, ಬಿಸಿಲಲ್ಲಿ ಕೂಲಿ ಕೆಲಸ ಮಾಡುವ ಬಡ ಮತ್ತು ಸಾಮಾನ್ಯ ವರ್ಗದವರಿಗೆ, ವಿಶೇಷ ಚೇತನ ವ್ಯಕ್ತಿಗಳಿಗೆ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಬಿಸಿಲಿನ ಝಳ ಈಗ ಸಾಕಷ್ಟು ಕಾಟ ಕೊಡುತ್ತಿದೆ.ಹೀಟ್ ಸ್ಟ್ರೋಕ್ ಸಾಧ್ಯತೆ
ಬಿಸಿಲು, ಅತಿ ಬಿಸಿಲಿನಿಂದಾಗಿ ಶಾಖಾಘಾತ (ಹೀಟ್ ಸ್ಟ್ರೋಕ್) ಉಂಟಾಗಿ ದೇಹದ ಉಷ್ಣಾಂಶ ಅತಿಯಾಗಿ ಹೆಚ್ಚಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಬಿಸಿಲಿನ ಸಮಯದಲ್ಲಿ ತೀವ್ರ ಜಾಗೃತೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಬೇಸಿಗೆಯ ಬಿಸಿಗೆ ಮನಸ್ಸಿನಲ್ಲಿ ಗೊಂದಲ, ಮೂರ್ಛೆ ರೋಗ ಹಾಗೂ ವ್ಯಕ್ತಿಯ ಕೋಮಾ ಸ್ಥಿತಿಗೆ ಹೋಗುವ ಸಾಧ್ಯತೆಗಳಿವೆ. ನಿರಂತರ ಬಿಸಿಲಿನಲ್ಲಿ ಕೆಲಸ ಮಾಡುವುದರಿಂದ ಅತಿಯಾದ ಬೆವರು, ಚರ್ಮ ಸುಡುವುದು ಅಥವಾ ಚರ್ಮ ಕೆಂಪಾಗುವುದು, ತಲೆ ನೋವು, ವಾಕರಿಕೆ ಹಾಗೂ ವಾಂತಿ, ಅತಿಯಾದ ನಾಡಿ ಮಿಡಿತ, ಪ್ರಜ್ಞೆ ತಪ್ಪುವಿಕೆಯೂ ಆಗಬಹುದು.ಹೆಚ್ಚು ಬಿಸಿಲಿನಲ್ಲಿ ಕೆಲಸ ಮಾಡುವವರು ಈ ರೀತಿಯ ಲಕ್ಷಣಗಳು ಕಂಡು ಬಂದರೆ ವೈದ್ಯಕೀಯ ಸಹಾಯ ಪಡೆದುಕೊಳ್ಳಬೇಕು. ಹೆಚ್ಚು ಗಾಳಿಯಾಡುವಂತಹ ಸ್ಥಳದಲ್ಲಿದರೆ ಉತ್ತಮ. ಯಾರಿಗಾದರೂ ಉಸಿರಾಟದ ಶ್ವಾಸನಾಳದ ತೊಂದರೆಗಳಿದ್ದರೆ, ಅಶಕ್ತನಾದರೆ ತಕ್ಷಣ ಕುಡಿಯಲು ನೀರು ನೀಡಬಾರದು. ಮೈ ಮೇಲೆ ತಂಪಾದ, ಒದ್ದೆ ಬಟ್ಟೆಗಳನ್ನು ಹಾಕಿ ದೇಹದ ಉಷ್ಣಾಂಶವನ್ನು ನಿಯಂತ್ರಿಸಬೇಕು ಎಂಬ ಸಲಹೆಗಳನ್ನು ವೈದ್ಯರು ನೀಡುತ್ತಾರೆ.
ಟೋಪಿ ಬಳಸಿಸಾಧ್ಯವಾದಷ್ಟು ತಲೆಗೆ ಟೋಪಿ ಬಳಕೆ, ಧೂಳು, ಹೊಗೆ, ವಾಯು ಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಬಳಸುವುದು ಸಹ ಸೂಕ್ತ. ಕೆಲಸದ ಮಧ್ಯದಲ್ಲಿ ಆಗಾಗ್ಗೆ ಸಣ್ಣ ವಿಶ್ರಾಂತಿ ತೆಗೆದು ಕೊಳ್ಳಬೇಕು. ಕೊಠಡಿಯ ಉಷ್ಣತೆ 35 ಡಿಗ್ರಿಗಿಂತ ಕಡಿಮೆಯಿದ್ದಲ್ಲಿ ಸೀಲಿಂಗ್ ಫ್ಯಾನ್‌ಗಳನ್ನು ಬಳಸಿ, ಒಂದು ವೇಳೆ ಉಷ್ಣಾಂಶ 35 ಡಿಗ್ರಿ ಸೆಂಟಿಗ್ರೇಡ್ ಗಿಂತಲೂ ಹೆಚ್ಚಾಗಿದ್ದರೆ ಮತ್ತು ಒಣಗಾಳಿ ಇದ್ದರೆ ಆರೋಗ್ಯಕ್ಕೆ ಹಾನಿಕರ. ಟೇಬಲ್ ಫ್ಯಾನ್ ಹಾಗೂ ಏರ್ ಕೂಲರ್ಸ್ ಬಳಸಬೇಕು ಎನ್ನುತ್ತಾರೆ ತಜ್ಞ ವೈದ್ಯರು.
ಉಷ್ಣ ನಿರ್ವಹಿಸಲು ಸೂಚನೆಅತಿಯಾದ ಶಾಖ, ಬಿಸಿಲಿನಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಸೂಕ್ತ ನಿರ್ವಹಣೆಗಾಗಿ ಜಿಲ್ಲಾಡಳಿತ ಈಗಾಗಲೇ ವಿಪತ್ತು ನಿರ್ವಹಣಾ ಸಭೆ ನಡೆಸಿ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಜಿಲ್ಲಾಸ್ಪತ್ರೆಗಳಲ್ಲಿ ಐದು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ನಾಲ್ಕು ಫ್ಲ್ಯೂಯಿಡ್ಸ್ ಗಳ ದಾಸ್ತಾನುಗಳನ್ನು ಎಲ್ಲ ಆಸ್ಪತ್ರೆಗಳಲ್ಲೂ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಅತಿಯಾದ ಶಾಖದಿಂದ ಆರೋಗ್ಯ ಸಮಸ್ಯೆಗಳ ಸೂಕ್ತ ನಿರ್ವಹಣೆಗಾಗಿ ಆರೋಗ್ಯ ಶಿಕ್ಷಣ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.