ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಡಿಜಿಟಲೀಕರಣದಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಹೊಸ ತಾಂತ್ರಿಕತೆಗಳನ್ನು ದೇಶದ ಅಭಿವೃದ್ಧಿಗೆ ಬಳಸುವಲ್ಲಿ ನಮ್ಮೆಲ್ಲರ ಪಾತ್ರ ಮುಖ್ಯವಾಗಿದೆ ಎಂದು ಬೆಂಗಳೂರಿನ ಕುಶಾಗ್ರಮತಿ ಅನಾಲಿಟಿಕ್ಸ್ ಪ್ರೈ. ಲಿಮಿಟೆಡ್ ಕಂಪನಿಯ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್, ಸ್ಟಾರ್ಟಅಪ್ ಮೆಂಟರ್ ಮತ್ತು ಸಲಹೆಗಾರ ಡಾ.ಅನಂತ ಕೊಪ್ಪರ ಹೇಳಿದರು.ಅವರು ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನಲ್ಲಿ ಶನಿವಾರ ನಡೆದ ಐಇಇಇ ಉತ್ತರ ಕರ್ನಾಟಕ ಉಪ ವಿಭಾಗ ಮತ್ತು ಬೆಂಗಳೂರು ವಿಭಾಗ ಜಂಟಿಯಾಗಿ ಆಯೋಜಿಸಿದ್ದ ಮಾಹಿತಿ ಶಕ್ತಿಯ ಪ್ರಭಾವ ಎಂಬ ದ್ಯೇಯದೊಂದಿಗೆ ಎರಡು ದಿನಗಳ ಅಂತಾರಾಷ್ಟ್ರಿಯ ಸಮ್ಮೇಳನ ಎನ್ಕೆಕಾನ್-2024 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಡಿಜಿಟಲ್ ತಂತ್ರಜ್ಞಾನ ಇಂದು ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ. ಜೀವನದ ಪ್ರತಿ ಹಂತದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಭಾರತ ಅಳವಡಿಸಿಕೊಂಡು ಉತ್ತುಂಗದಲ್ಲಿದೆ. ಕೃತಕ ಬುದ್ದಿಮತ್ತೆ (ಎಐ) ಕುರಿತು ಆತಂಕ ಬೇಡ. ಅದನ್ನು ಸರಿಯಾಗಿ ನಿರ್ವಹಣೆ ಮಾಡುವುದು ಅವಶ್ಯ. ಪ್ರತಿಯೊಬ್ಬರು ಹೊಸ ತಂತ್ರಜ್ಞಾನವನ್ನು ಉನ್ನತೀಕರಿಸಿಕೊಂಡು ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಮುಖ್ಯ ಅತಿಥಿಗಳಾದ ಬೆಂಗಳೂರಿನ ಐಐಎಸ್ಸಿ ಪ್ರಾಧ್ಯಾಪಕ ಮತ್ತು ಬೆಂಗಳೂರು ವಿಭಾಗದ ಮುಖ್ಯಸ್ಥ ಡಾ.ಟಿ.ಶ್ರೀನಿವಾಸ ಅವರು ಇಂತಹ ಸಮ್ಮೇಳನಗಳು ಪ್ರತಿಭಾವಂತರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಉನ್ನತ ತಂತ್ರಜ್ಞಾನಗಳ ಕುರಿತು ಚರ್ಚಿಸಲು ಸಂಪರ್ಕ ಸೇತುವೆಯಾಗುತ್ತವೆ. ಐಇಇಇ ಒಂದು ವಿಶ್ವಮಟ್ಟದ ಪ್ರತಿಷ್ಠಿತ ವೃತ್ತಿಪರ ಸಂಸ್ಥೆ, ವೈಯಕ್ತಿಕ ವೃತ್ತಿ ಮತ್ತು ಸಮುದಾಯ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಲ್ಲಿದೆ ಎಂದು ಹೇಳಿದರು.
ಇನ್ನೊರ್ವ ಅತಿಥಿಗಳಾದ ಬೆಂಗಳೂರಿನ ಟೆಕ್ಕ್ರಾಫ್ಟರ್ ಕಂಪನಿಯ ಸ್ಥಾಪಕರು ಮತ್ತು ಸಿಇಒ ಡಾ ಅಲೋಕನಾಥ ಡೇ ಅವರು ಉನ್ನತ ತಂತ್ರಜ್ಞಾನ ಮತ್ತು ನಾವಿನ್ಯತೆಗಳು ಬೆಂಗಳೂರು ಕೇಂದ್ರಿತ ಪ್ರತಿಷ್ಠಿತ ಕಂಪನಿಗಳಿಗೆ ಸೀಮಿತವಾಗದೆ, ಉತ್ತರ ಕರ್ನಾಟಕ ಭಾಗದ ಜವಳಿ ಉದ್ಯಮದಂತಹ ಸಣ್ಣ ಸಣ್ಣ ಉದ್ಯಮಗಳಿಗೂ ವಿಸ್ತರಿಸಿಕೊಂಡು ಈ ಭಾಗದ ಅಭಿವೃದ್ಧಿಗೆ ಪ್ರಯತ್ನಿಸಬೇಕು. ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿಯೂ ಸ್ಮಾರ್ಟ್‌ವಾಚ್, ಆಧುನಿಕ ಸ್ಕ್ಯಾನಿಂಗ್ ನಂತಹ ಉಪಕರಣಗಳಿಂದ ಸಾಕಷ್ಟು ನೂತನ ತಂತ್ರಜ್ಞಾನದ ಅಳವಡಿಕೆ ನಡೆಯುತ್ತಿದೆ ಎಂದರು.ಮತ್ತೊರ್ವ ಅತಿಥಿಗಳಾದ ಬೆಂಗಳೂರಿನ ಎಸ್ಎಸಿ ವಿಭಾಗದ ಮುಖ್ಯಸ್ಥ ಡಾ.ಪುನೀನಿತಕುಮಾರ ಮಿಶ್ರಾ ಅವರು ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ನೀಡುವ ದಿಸೆಯಲ್ಲಿ ಇಂತಹ ಸಮ್ಮೇಳನಗಳು ಮಾರ್ಗದರ್ಶಿಯಾಗಬೇಕು ಎಂದು ತಿಳಿಸಿದರು.
ಹಾವೇರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಅವರು ಐಇಇಇ ಒಂದು ಶೈಕ್ಷಣಿಕಸಂಸ್ಥೆ ಹಾಗೂ ಉದ್ಯಮಗಳನ್ನು ಜೋಡಿಸುವ ಪ್ರಮುಖ ಜಾಲವಾಗಿದೆ. ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನದ ಪ್ರಾಯೋಗಿಕತೆ ಮತ್ತು ಅಳವಡಿಕೆ ಗುಣಗಳನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.ಬೆಂಗಳೂರಿನ ಇಸ್ರೋ ಸಂಸ್ಥೆಯ ವಿಜ್ಞಾನಿಗಳಾದ ಡಾ. ಚಂದ್ರಕಾಂತ ಕುಮಾರ ಅವರು ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಸೇವಾ ಕ್ಷೇತ್ರ ಮತ್ತು ಔದ್ಯೋಗಿಕ ಕ್ಷೇತ್ರದ ಪಾತ್ರವನ್ನು ವಿವರಿಸುತ್ತಾ ಕೃಷಿ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿ ರೈತರಿಗೆ ಸಹಕಾರಿಯಾಗಬೇಕೆಂದು ನುಡಿದರು.
ಬಿ.ವಿ.ವಿ. ಸಂಘದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಆರ್.ಎನ್.ಹೆರಕಲ್ ಅವರು ಮಾತನಾಡಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಮಾತನಾಡಿ, ಡಿಜಿಟಿಲೀಕರಣ ಇಂದಿನ ಜೀವನಕ್ಕೆ ಅವಶ್ಯವಾಗಿದೆ. ತಂತ್ರಜ್ಞಾನದ ಒಳ್ಳೆಯ ಅಧ್ಯಯನ ಹಾಗೂ ಕೌಶಲ್ಯತೆ ದೇಶದ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನುಡಿದರು.ಬಿ.ವಿ.ವಿ. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಬಿ. ಆರ್.ಹಿರೇಮಠ ಇವರು ಸ್ವಾಗತಿಸಿದರು. ಕಾಲೇಜಿನ ಆರ್ ಮತ್ತು ಡಿ ಡೀನ್ ಆದ ಡಾ.ಮಹಾಬಳೇಶ್ವರ ಎಸ್.ಕೆ.ಅವರು ಅತಿಥಿಗಳನ್ನು ಪರಿಚಯಿಸಿದರು. ಐಇಇಇ ಎನ್ಕೆಕಾನ್ ಸಮ್ಮೇಳದ ಉಸ್ತುವಾರಿ ಡಾ. ರವಿ ಹೊಸಮನಿ ಸಮ್ಮೇಳನದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಪ್ರಾರಂಭದಲ್ಲಿ ಬಿಇಸಿ ಸ್ವರ ತಂಡದವರು ಪ್ರಾರ್ಥಿಸಿದರು. ಡಾ ಸಿ.ಎಲ್.ಛಾಯಾಲಕ್ಷ್ಮಿನಿರೂಪಿಸಿದರು. ಸಮ್ಮೇಳನದ ಉಪ ಉಸ್ತುವಾರಿ ಡಾ.ವಿಜಯಕ್ಷ್ಮಿ ಜಿಗಜಿನ್ನಿ ವಂದಿಸಿದರು.
97 ಸಂಶೋಧನಾ ಪ್ರಬಂದಗಳು ಮಂಡನೆ:ಸಮ್ಮೇಳನದಲ್ಲಿ ಒಟ್ಟು 97 ಸಂಶೋಧನಾ ಲೇಖನಗಳು ಮಂಡನೆಯಾಗಿ ಚರ್ಚೆಯಾಗಲಿವೆ. ಸಮ್ಮೇಳನದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿ ಸಂಶೋಧಕರು ಹಾಗೂ 100ಕ್ಕೂ ಅಧ್ಯಾಪಕ ಸಂಶೋಧಕರು ಭಾಗವಹಿಸಿದ್ದರು.
---ಕೋಟ್
ಉತ್ತರ ಕರ್ನಾಟಕ ಭಾಗದ ಜವಳಿ ಉದ್ಯಮದಂತಹ ಸಣ್ಣ ಸಣ್ಣ ಉದ್ಯಮಗಳಿಗೂ ತಂತ್ರಜ್ಞಾನ ವಿಸ್ತರಿಸಿಕೊಂಡು ಈ ಭಾಗದ ಅಭಿವೃದ್ಧಿಗೆ ಪ್ರಯತ್ನಿಸಬೇಕು.-ಡಾ.ಅಲೋಕನಾಥ ಡೇ, ಸ್ಥಾಪಕರು ಮತ್ತು ಸಿಇಒ ಟೆಕ್ಕ್ರಾಫ್ಟರ್ ಕಂಪನಿ ಬೆಂಗಳೂರ.