ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಾಜಿ ಸಂಸದ, ರೈತ ಹೋರಾಟಗಾರ ದಿ.ಡಾ.ಜಿ.ಮಾದೇಗೌಡರ 98ನೇ ಹುಟ್ಟುಹಬ್ಬದ ಅಂಗವಾಗಿ ಸಮೀಪದ ಹನುಮಂತನಗರದ ಅವರ ಸಮಾಧಿ ಶಾಂತಿ ವನದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.ದಿ.ಮಾದೇಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಭಿಮಾನಿಗಳು ಹಾಗೂ ಭಾರತೀ ಎಜುಕೇಷನ್ ಟ್ರಸ್ಟ್‌ನ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದಿಂದ ನಡೆದ ಕಾರ್ಯಕ್ರಮದಲ್ಲಿ ಗೌಡರ ಸಮಾಧಿ ಮತ್ತು ಭಾವಚಿತ್ರಕ್ಕೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಈ ವೇಳೆ ಗೌಡರ ಸಮಾಧಿಗೆ ಪೂಜೆ ಸಲ್ಲಿಸಿದ ಮಧು ಜಿ.ಮಾದೇಗೌಡ, ನನ್ನ ತಂದೆ ಹೋರಾಟಗಳ ಮೂಲಕವೇ ಜೀವ ಸವೆಸಿ ಅನ್ಯಾಯದ ವಿರುದ್ಧ ಆಳುವ ಸರ್ಕಾರಗಳ ಬಡಿದೆಬ್ಬಿಸುತ್ತಿದ್ದರು. ರೈತ, ಬಡವರ ಪರ ದ್ವನಿ ಎತ್ತಿ ಹೋರಾಟ ಮಾಡುತ್ತಲೇ ಕೊನೆಯುಸಿರೆಳದಿದ್ದು, ಅವರು ಮಾಡಿರುವ ಸತ್ಕಾರ್ಯಗಳು ಇನ್ನು ಜೀವಂತವಾಗಿ ಉಳಿದಿವೆ ಎಂದರು.ಗಾಂಧಿ ತತ್ವಗಳನ್ನು ಅನುಸರಿಸುತ್ತ ಎಚ್.ಮಲ್ಲಿಗೆರೆ ಗ್ರಾಮದಲ್ಲಿ ಗಾಂಧಿ ಗ್ರಾಮ ಮಾಡಲು ಯೋಜನೆ ರೂಪಿಸಿದ್ದು, ಅವರ ಕನಸೂ ಈಡೇರಿಸುವ ಹೊಣೆ ನನ್ನ ಹೆಗಲ ಮೇಲಿದೆ. ಅದಕ್ಕಾಗಿ ತಂಡ ಕಟ್ಟಿ ಕೊಂಡು ಸಹಜ ಬೇಸಾಯ ಸೇರಿದಂತೆ ಹಲವು ರೈತ ಉಪಯೋಗಿ ಕೆಲಸ ಮಾಡುತಿದ್ದೇನೆ ಎಂದರು.
ಮಾದೇಗೌಡರ ಹೋರಾಟಗಳೇ ನನ್ನ ಕೆಲಸಗಳಿಗೆ ಸ್ಫೂರ್ತಿ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾನು ಮತ್ತು ನನ್ನ ಪುತ್ರ ಆಶಯ್ ನಡೆಯುತಿದ್ದೇವೆ ಎಂದು ಭಾವುಕರಾದರು.ಗೌಡರು ಸಾತ್ವಿಕ ಸ್ವಾಭಾವದ ವ್ಯಕ್ತಿ. ಯಾರನ್ನು ಗದರಿಸಿದರು ಸಹ ಅದರ ಹಿಂದೆ ಪ್ರೀತಿ ಇತ್ತು. ಅನೀತಿ, ಅನ್ಯಾಯ ಮತ್ತು ಅಧರ್ಮಗಳ ವಿರುದ್ದ ಹೋರಾಟ ಮಾಡಿಕೊಂಡು ಬಂದಂತಹ ವ್ಯಕ್ತಿತ್ವ ಯಾವುದೇ ಅಧಿಕಾರದ ಆಸೆಗೆ ಸಿಲುಕದೆ ಹೋರಾಟದ ಕಿಚ್ಚನ್ನು ಇಳಿ ವಯಸ್ಸಿನವರೆಗೂ ರೂಡಿಸಿ ಕೊಂಡು ಬಂದಂತಹ ಎಂದು ಗದ್ಗತಿರಾದರು.
ಹಳ್ಳಿಗಾಡಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸ್ಥಾಪಿಸಿದ ಭಾರತೀ ವಿದ್ಯಾಸಂಸ್ಥೆ ಶರವೇಗದಲ್ಲಿ ಬೆಳೆಯುತ್ತಿದ್ದು, ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದರು. ಸಂಸ್ಥೆಯನ್ನು ಅವರ ಆಶಯದಂತೆ ಸಮರ್ಥವಾಗಿ ಮುನ್ನಡೆಸುವತ್ತ ಮತ್ತಷ್ಟು ಹೊಸ ಕೋರ್ಸ್‌ಗಳನ್ನು ತಂದು ಅವರ ಕನಸು ನನಸು ಮಾಡುತಿದ್ದೇವೆ ಎಂದರು.ಈ ವೇಳೆ ಬಿಇಟಿ ಟ್ರಸ್ಟ್ ಹನುಮಂತನಗರ ಕ್ಯಾಂಪಸ್ ಕಾರ್ಯದರ್ಶಿ ಗುರುದೇವರಹಳ್ಳಿ ಸಿದ್ದೇಗೌಡ, ಮುಖಂಡರಾದ ಕೆ.ಎಸ್.ಗೌಡ, ಮಾಸ್ಟರ್ ಬೋರಯ್ಯ, ಮಾದರಹಳ್ಳಿ ನಾಗಣ್ಣ ಸೇರಿದಂತೆ ಮತ್ತಿತರಿದ್ದರು.