ಅಕ್ರಮ ಕಲ್ಲು ಗಣಿಗಾರಿಕೆ ಪತ್ತೆಗೆ ದ್ರೋಣ್ ಸರ್ವೆ

| Published : Nov 29 2024, 01:02 AM IST

ಸಾರಾಂಶ

Drone survey to detect illegal stone mining

-ಜಿಲ್ಲಾ ಗಣಿ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

--

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಅಕ್ರಮ ಕಲ್ಲು ಗಣಿಗಾರಿಕೆ ಪತ್ತೆಗೆ ದ್ರೋಣ್ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣಿಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ ಬಗ್ಗೆ ಕೇಳಿ ಬಂದ ದೂರುಗಳನ್ನು ಪರಿಶೀಲಿಸಲು, ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚನೆ ಮಾಡಲಾಗಿದೆ. ದೂರುದಾರ ಸಮ್ಮುಖದಲ್ಲೇ ಕಲ್ಲು ಕ್ವಾರಿಗಳ ದ್ರೋಣ್ ಸರ್ವೆ ನಡೆಸಬೇಕೆಂದರು.

ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಿದ ಅವಧಿಯಲ್ಲಿ, ಎಷ್ಟು ವಿಸ್ತೀರ್ಣ ಪ್ರದೇಶಕ್ಕೆ ಅನುಮತಿ ನೀಡಲಾಗಿತ್ತು. ಎಷ್ಟು ಪ್ರಮಾಣದ ಕಲ್ಲು ಗಣಿಗಾರಿಕೆ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 150ಎ ನಿರ್ಮಾಣಕ್ಕೆ ಎಷ್ಟು ಪ್ರಮಾಣದ ಕಲ್ಲನ್ನು ಪುಡಿ ಮಾಡಿ ಉಪಯೋಗಿಸಲಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಎಲ್ಲಾ ಅಂಶಗಳು ಒಂದಕ್ಕೊಂದು ತಾಳೆಯಾಗಬೇಕು. ಒಂದು ವೇಳೆ ಹೆಚ್ಚುವರಿ ಗಣಿಗಾರಿಕೆ ನಡೆದಿರುವುದು ಕಂಡು ಬಂದರೆ, ಅಂತಹವರ ವಿರುದ್ಧ ಗಣಿ ನಿಯಮಾನುಸಾರ ದೂರು ದಾಖಲಿಸಬೇಕು. ಅಕ್ರಮ ಗಣಿಗಾರಿಕೆ, ಅದಿರು ಹಾಗೂ ಖನಿಜಗಳ ಸಾಗಾಣಿಕೆ ಬಗ್ಗೆ ಸಾರ್ವಜನಿಕರು ಸಲ್ಲಿಸಿದ ದೂರಗಳಿಗೆ ಅಧಿಕಾರಿಗಳು ಕಾಲಮಿತಿಯಲ್ಲಿ ಸೂಕ್ತ ಉತ್ತರ ಅಥವಾ ಹಿಂಬರಹವನ್ನು ನೀಡಬೇಕು. ದೂರುಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಜಮೀನು ಸಮತಟ್ಟುಗೊಳಿಸಿ ಕೃಷಿಯೋಗ್ಯ ಭೂಮಿಯನ್ನಾಗಿಸಲು, ಜಮೀನಿನಲ್ಲಿರುವ ಹೆಚ್ಚುವರಿ ಉಪ ಖನಿಜಗಳನ್ನು ತೆರವುಗೊಳಿಸಿ ಸಾಗಾಣಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ-1994ರ ನಿಯಮ-3ಎ ಅಡಿ ನೀಡಿದ ಅನುಮತಿಯನ್ನು ಉಲ್ಲಂಘಿಸಿ, ಅಕ್ರಮವಾಗಿ ಗಣಿಕಾರಿಕೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಟಿ.ವೆಂಕಟೇಶ್ ಸೂಚನೆ ನೀಡಿದರು.

ನಿಯಮ-3ಎ ಅಡಿಯಲ್ಲಿ ಅನುಮತಿ ನೀಡುವಾಗ, ಜಮೀನು ಮಾಲಿಕರಿಗೆ ಷರತ್ತು ನಿಯಮಗಳನ್ನು ವಿಧಿಸಲಾಗಿರುತ್ತದೆ. ಆದರೆ ಕೆಲವು ಭಾಗದಲ್ಲಿ ನಿಯಮ ಉಲ್ಲಂಘಿಸಿ ಜಮೀನುಗಳಿಂದ ಹೆಚ್ಚುವರಿಯಾಗಿ ಉಪ ಖನಿಜಗಳನ್ನು ಗಣಿಗಾರಿಕೆ ಮಾಡಲಾಗಿದೆ. ಇದರಿಂದ ಕೃಷಿ ಭೂಮಿ ಹಾಳಾಗುವುದರ ಜೊತೆಗೆ ಪರಿಸರಕ್ಕೆ ಮಾರಕವಾಗುತ್ತದೆ. ಜೊತೆಗೆ ಸರ್ಕಾರದ ರಾಜಸ್ವ ಸಂಗ್ರಹಣೆಗೂ ಧಕ್ಕೆ ಉಂಟಾಗುತ್ತದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದರೆ, ಸಂಬಂಧಪಟ್ಟ ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಂದ ವರದಿ ಪಡೆದು ಕ್ರಮ ಕೈಗೊಳ್ಳುವಂತೆ ಹೇಳಿದರು.

ಗ್ರಾಮೀಣ ಭಾಗದಲ್ಲಿ ಅದಿರು ಹಾಗೂ ಖನಿಜಗಳನ್ನು ಸಾಗಣೆ ಮಾಡುವ ವಾಹನಗಳನ್ನು ತಪಾಸಣೆ ಮಾಡಬೇಕು. 20 ವರ್ಷ ಮೇಲ್ಪಟ್ಟ ವಾಹನಗಳ ಎಫ್.ಸಿ ನವೀಕರಣಗೊಳಿಸಬಾರದು, ಅಂತಹ ವಾಹನಗಳು ಕಾರ್ಯಾಚರಣೆ ಮಾಡುತ್ತಿದ್ದಲ್ಲಿ ಅವುಗಳ ಸಂಚಾರಕ್ಕೆ ತಡೆ ಒಡ್ಡಬೇಕು. ಅನುಮತಿಸಿದ ತೂಕಕ್ಕಿಂತ ಹೆಚ್ಚಿನ ಅದಿರು ಸಾಗಾಟ ಮಾಡುವ ವಾಹನಗಳನ್ನು ತಡೆದು, ದಂಡ ವಿಧಿಸಬೇಕು. ಅದಿರನ್ನು ವಶಪಡಿಸಿಕೊಂಡು ವಾಹನ ಜಪ್ತಿ ಮಾಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ 335ಕ್ಕೂ ಹೆಚ್ಚು ಅದಿರು ಸಾಗಾಣಿಕೆಯ ಭಾರಿ ವಾಹನಗಳು ಇದ್ದು, ಇದರಲ್ಲಿ 18 ವಾಹನಗಳು 20 ವರ್ಷ ಪೂರೈಸಿವೆ. 268 ವಾಹನಗಳು 15 ವರ್ಷ ಪೂರೈಸಿವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೆ ಸಿಂಘೆ ಸಭೆಯಲ್ಲಿ ಮಾಹಿತಿ ನೀಡದರು.

ಕಲ್ಲು ಪುಡಿ ಮಾಡುವ ಘಟಕ (ಕ್ರಷರ್)ಗಳು ಪಾಲನೆ ಮಾಡಬೇಕಾದ ನಿಯಮಗಳ ಬಗ್ಗೆ ಕರ್ನಾಟಕ ಕಲ್ಲು ಪುಡಿ ಮಾಡುವ ಘಟಗಳ ನಿಯಂತ್ರಣ ಅಧಿನಿಯ -2011 ಹಾಗೂ ತಿದ್ದುಪಡಿ ಕಾಯ್ದೆ 2013ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೂ ಜಿಲ್ಲೆಯಲ್ಲಿ ಹಲವು ಕ್ರಷರ್‍ಗಳಲ್ಲಿ ಈ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಕಲ್ಲು ದೂಳು, ಬೆಳೆಗಳ ಮೇಲೆ ಬಿದ್ದು, ಇಳುವರಿ ಕಡಿಮೆಯಾಗುತ್ತಿದೆ ಎಂದು ರೈತರು ದೂರು ನೀಡಿದ್ದಾರೆ. ಇದರ ಜೊತೆಗೆ ಕ್ರಷರ್‍ಗಳ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಜನರು ಶ್ವಾಸಕೋಶ ಸಂಬಂಧಿಸಿದ ಖಾಯಿಲೆಗಳಿಗೆ ತುತ್ತಾಗುತಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯಚರಣೆ ನಡೆಸುತ್ತಿರುವ ಎಲ್ಲ 29 ಕ್ರಷರ್‍ಗಳ ಪರಿಶೀಲನೆ ಮಾಡಿ, ಪರಿಸರ ಮಾಲಿನ್ಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಓ ಎಸ್.ಜೆ.ಸೋಮಶೇಖರ್ ಸಭೆಯಲ್ಲಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

-----------------

ಪೋಟೋ: ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗಣಿಗಾರಿಕೆ ಸಂಬಂಧಿಸಿದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

---------

ಫೋಟೋ :28 ಸಿಟಿಡಿ8