ಅಸ್ವಚ್ಛತೆ, ಶಿಥಿಲಾವಸ್ಥೆಯ ಕಟ್ಟಡಗಳು!

| Published : Apr 13 2024, 01:13 AM IST

ಸಾರಾಂಶ

ಸ್ವಚ್ಛತೆ ಬಗ್ಗೆ ಜನರಿಗೆ ತಿಳಿವಳಿಕೆ ಹೇಳುವ ತಾಲೂಕು ಪಂಚಾಯತಿ ಕಚೇರಿಯಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ಇದರೊಟ್ಟಿಗೆ ತಾಪಂ ಕಚೇರಿ ಶಿಥಿಲಾವಸ್ಥೆ ತಲುಪಿದ್ದರಿಂದ ಅಲ್ಲಿಯ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿನಾದ್ಯಂತ ಸ್ವಚ್ಛತೆ ಬಗ್ಗೆ ಮಾಹಿತಿ ನೀಡುವ ತಾಪಂ ಅಧಿಕಾರಿಗಳು ತಮ್ಮ ಇಲಾಖೆ ಕಚೇರಿಯ ಕೊಠಡಿಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವಲ್ಲಿ ಸಾಧ್ಯವಾಗಿಲ್ಲ ಎಂದರೆ ಗ್ರಾಮಗಳ ಅಭಿವೃದ್ಧಿ ಹಾಗೂ ಸ್ವಚ್ಛತೆ ಸುಧಾರಣೆ ಮಾಡಲು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸ್ವಚ್ಛತೆ ಬಗ್ಗೆ ಜನರಿಗೆ ತಿಳಿವಳಿಕೆ ಹೇಳುವ ತಾಲೂಕು ಪಂಚಾಯತಿ ಕಚೇರಿಯಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ಇದರೊಟ್ಟಿಗೆ ತಾಪಂ ಕಚೇರಿ ಶಿಥಿಲಾವಸ್ಥೆ ತಲುಪಿದ್ದರಿಂದ ಅಲ್ಲಿಯ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿನಾದ್ಯಂತ ಸ್ವಚ್ಛತೆ ಬಗ್ಗೆ ಮಾಹಿತಿ ನೀಡುವ ತಾಪಂ ಅಧಿಕಾರಿಗಳು ತಮ್ಮ ಇಲಾಖೆ ಕಚೇರಿಯ ಕೊಠಡಿಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವಲ್ಲಿ ಸಾಧ್ಯವಾಗಿಲ್ಲ ಎಂದರೆ ಗ್ರಾಮಗಳ ಅಭಿವೃದ್ಧಿ ಹಾಗೂ ಸ್ವಚ್ಛತೆ ಸುಧಾರಣೆ ಮಾಡಲು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸುಮಾರು ೪೦ ವರ್ಷಗಳ ಹಿಂದೆ ನಿರ್ಮಿಸಲಾದ ಪಟ್ಟಣದ ತಾಪಂ ಕಚೇರಿ ಇಂದು ಶಿಥಿಲಾವಸ್ಥೆಗೆ ಬಂದು ನಿಂತಿದೆ. ಜೊತೆಗೆ ವಾಣಿಜ್ಯ ಮಳಿಗೆಗಳು ಕೂಡ ಇದೆ ಹಾದಿಯನ್ನು ಹಿಡಿದಿವೆ. ಮಾತ್ರವಲ್ಲ ಈ ವಾಣಿಜ್ಯ ಮಳಿಗೆಗಳು ಅಂದಿನ ದರದಂತೆ ಪ್ರಸ್ತುತ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಪಂನ ಚುನಾಯಿತ ಅಧ್ಯಕ್ಷರು ಹಾಗೂ ಸದಸ್ಯರು ಇಂದಿಗೂ ಯಥಾಸ್ಥಿತಿಯಲ್ಲಿಯೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಸರ್ಕಾರದ ಆದಾಯಕ್ಕೆ ಕತ್ತರಿ ಬೀಳುತ್ತಿದೆ. ಈ ಮಾಹಿತಿಯ ಅರಿವಿದ್ದರೂ ಸಂಬಂಧಪಟ್ಟ ಅಧಿಕಾರಿಗಳೇಕೆ ಮೌನ ವಹಿಸಿದ್ದಾರೆ? ಸಂಬಂಧಿತ ಇಲಾಖೆಗೆ ಪತ್ರ ಬರೆದು ಏಕೆ ಅದನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ.

ಅಧಿಕಾರವಧಿ ಮುಗಿದು 3 ವರ್ಷ:

ಈಗಂತೂ ತಾಪಂ ಆಡಳಿತ ಮುಗಿದು ೩ ವರ್ಷಗಳೇ ಗತಿಸಿವೆ. ಆದರೂ ಸರ್ಕಾರ ಇಲ್ಲಿಯತನಕ ತಾಪಂ, ಜಿಪಂ ಚುನಾವಣೆ ನಡೆಸಿಲ್ಲ. ಹೀಗಾಗಿ ಸ್ಥಳೀಯ ಚುನಾವಣಾ ಜನಪ್ರತಿನಿಧಿಗಳು ಕೂಡ ಇಲ್ಲ. ಹೀಗಾಗಿ ಅಧಿಕಾರಿಗಳೇ ಈಗ ಕಾರ್ಯಭಾರ ಮಾಡುತ್ತಿದ್ದಾರೆ. ಅವರೇ ಈಗ ಪ್ರತಿಯೊಂದು ಆಗುಹೋಗುಗಳ ಕುರಿತಾಗಿ ಜಾಗೃತಿ ವಹಿಸಬೇಕಿದೆ. ಜನರಿಗೆ ಇದಕ್ಕೆ ಉತ್ತರದಾಯಿ ಆಗಬೇಕಾಗುತ್ತದೆ. ಆದರೆ, ಸುಧಾರಣೆಯ ನಿಟ್ಟಿನಲ್ಲಿ ಅಧಿಕಾರಿಗಳ್ಯಾರೂ ಇದಕ್ಕೆ ಮನಸು ಮಾಡದಿರುವುದು ಆಶ್ಚರ್ಯಕ್ಕೂ ಕಾರಣವಾಗಿದೆ.

ಅದೇನೇ ಆಗಲಿ ತಾಲೂಕಿನ ನೂರಾರು ಗ್ರಾಮಗಳಿಂದ ಸರ್ಕಾರಿ ಕೆಲಸಕ್ಕಾಗಿ ನಿತ್ಯ ಸಾವಿರಾರು ಜನರು ತಾಪಂಗೆ ಬರುತ್ತಾರೆ. ಆದರೆ, ಹೀಗೆ ಬರುವ ನಾಗರಿಕರಿಗೆ ತಾಪಂ ಅಧಿಕಾರಿಗಳು ಮೂಲಭೂತ ಸೌಕರ್ಯಗಳಾದ ಕುಡಿವ ನೀರು, ಶೌಚಾಲಯ, ಕುಳಿತುಕೊಳ್ಳುವ ಆಸನಗಳನ್ನು ಸಹಿತ ಒದಗಿಸದೇ ಇರುವ ಕಾರಣ ಸರ್ಕಾರಿ ಕೆಲಸಕ್ಕೆಂದು ಬರುವ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಹೋಗುತ್ತಿದ್ದಾರೆ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ತಾಪಂ ಕಡೆ ಗಮನ ಹರಿಸಿ ತಾಪಂಗೆ ಸೂಕ್ತ ಚಿಕಿತ್ಸೆ ನೀಡಿ ಸದೃಢ ಮಾಡಬೇಕಾಗಿದೆ. ಇದಷ್ಟೇ ಅಲ್ಲದೇ ತಾಪಂ ವಾಣಿಜ್ಯ ಮಳಿಗೆಗಳನ್ನು ಮರು ಟೆಂಡರ್‌ ಮಾಡಿ ಆದಾಯ ಮೂಲಗಳನ್ನು ಬಲಗೊಳಿಸುವ ಕಾರ್ಯ ಸಹಿತ ಮಾಡುವುದು ಅಗತ್ಯ.

-------------

ಬಾಕ್ಸ್‌

60 ವರ್ಷಗಳಿಂದ ಹೆಚ್ಚಾಗದ ಬಾಡಿಗೆ

೨೦ ಆಗಸ್ಟ್‌ ೧೯೬೦ರಲ್ಲಿ ಒಟ್ಟು ೨೦ ತಾಪಂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ, ಅಂದಿನ ದರವನ್ನೇ ಇಂದಿಗೂ ತಾಪಂ ಅಧಿಕಾರಿಗಳು ನಿಗದಿ ಮಾಡಿದ್ದಾರೆ. ಹೀಗಾಗಿ ತಾಪಂಗೆ ಆದಾಯ ನಷ್ಟವಾಗುತ್ತಿದೆ. ಕಾಲಕಾಲಕ್ಕೆ ಬಾಡಿಗೆ ದರ ಪರಿಷ್ಕರಣೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂಬುವುದರ ಕುರಿತು ಅಧಿಕಾರಿಗಳು ಪರಿಶೀಲನೆ ಕೂಡ ಮಾಡಬೇಕಿತ್ತು. ಆದರೆ, ಇದರತ್ತ ಅವರು ಕೂಡ ಚಿತ್ತ ಹರಿಸಿಲ್ಲವೇಕೆ ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ.

--------------

ಸದ್ಯ ನಾನು ಚುನಾವಣೆ ಕರ್ತವ್ಯದಲ್ಲಿ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಆದರೂ ಮಳಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮೇಲಧಿಕಾರಿಗಳ ಅನುಮತಿ ಪಡೆದ ಪುನಃ ಟೆಂಡೆರ್‌ ಕರೆದು ಬಾಡಿಗೆ ಹೆಚ್ಚು ಮಾಡಲಾಗುವುದು. ಜತೆಗೆ ಕಚೇರಿಯ ಕೊಠಡಿಗಳು ಸೇರಿದಂತೆ ಸುತ್ತಲಿನ ಪ್ರಾಂಗಣವನ್ನೂ ಸ್ವಚ್ಛಗೊಳಿಸುವ ಮೂಲಕ ಸುಂದರ ಕಾಣುವಂತೆ ಮಾಡಲಾಗುವುದು.

-ಎಸ್‌.ಎಸ್‌.ಕಲ್ಮನಿ, ಕಾರ್ಯನಿರ್ವಾಹಕ ಅಧಿಕಾರಿ ತಾಪಂ ಮುದ್ದೇಬಿಹಾಳ

---

ಕೋಟ್

ಯಾವುದೇ ಅಧಿಕಾರಿಗಳಿರಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವುದರ ಜೊತೆಗೆ ಕಚೇರಿಯ ಸ್ವಚ್ಛತೆಯಿಂದ ನೋಡಿಕೊಳ್ಳುವುದು ಮುಖ್ಯ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ತಾಪಂ ಕಚೇರಿಗೆ ಭೇಟಿ ನೀಡಿ ಪರೀಶಿಲಿಸಿ ಎಲ್ಲವನ್ನು ಸರಿಪಡಿಸಬೇಕು.

-ಪ್ರಕಾಶ ಸರೂರ, ಮುದ್ದೇಬಿಹಾಳ.