ವಿಜಯನಗರ ಜಿಲ್ಲೆಯಲ್ಲಿ ಪರಿಣಾಮಕಾರಿ ಮತದಾನ ಜಾಗೃತಿ ಅಭಿಯಾನ: ಜಿಪಂ ಸಿಇಒ

| Published : May 05 2024, 02:00 AM IST

ವಿಜಯನಗರ ಜಿಲ್ಲೆಯಲ್ಲಿ ಪರಿಣಾಮಕಾರಿ ಮತದಾನ ಜಾಗೃತಿ ಅಭಿಯಾನ: ಜಿಪಂ ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದ್ದ ಮತಗಟ್ಟೆಗಳನ್ನು ಗುರುತಿಸಿ, ವಿಶೇಷ ಗಮನ ಹರಿಸಿ ಮನೆ ಮನೆಗೆ ತೆರಳಿ ಮತದಾನ ಮಾಡುವಂತೆ ಮನವರಿಕೆ ಮಾಡಲಾಗಿದೆ.

ಹೊಸಪೇಟೆ: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯಲ್ಲಿ ನಡೆದ ಜಾತ್ರೆ, ಸಂತೆಗಳಲ್ಲಿ ಮತ್ತು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮನೆ, ಮನೆಗೆ ತೆರಳಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾನ ಜಾಗೃತಿ ಅಭಿಯಾನಗಳನ್ನು ನಡೆಸಲಾಗಿದೆ ಎಂದು ಜಿಪಂ ಸಿಇಒ ಸದಾಶಿವ ಪ್ರಭು ಹೇಳಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದ್ದ ಮತಗಟ್ಟೆಗಳನ್ನು ಗುರುತಿಸಿ, ವಿಶೇಷ ಗಮನ ಹರಿಸಿ ಮನೆ ಮನೆಗೆ ತೆರಳಿ ಮತದಾನ ಮಾಡುವಂತೆ ಮನವರಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮನರೇಗಾ ಕಾಮಗಾರಿ ಸ್ಥಳಗಳಲ್ಲಿ ಕೂಲಿ ಕಾರ್ಮಿಕರಿಂದ ಜಾಗೃತಿ ಅಭಿಯಾನ ನಡೆಸಿ, ರಂಗೋಲಿ ಸ್ಪರ್ಧೆ, ಚುನಾವಣಾ ಸಹಾಯವಾಣಿ 1950 ಬಗ್ಗೆ ತಿಳಿಸಲಾಗಿದೆ. ಗ್ರಾಪಂ, ಪಪಂ, ನಗರಸಭೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ಧ್ವನಿ ಸುರುಳಿ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.

ಮತಗಟ್ಟೆಗಳಲ್ಲಿ ಸೌಕರ್ಯ:

ಮತದಾನ ಹೆಚ್ಚಿಸಲು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ನೆರಳಿನ ವ್ಯವಸ್ಥೆಗೆ ಶಾಮಿಯಾನ ಮತ್ತು ವಿಕಲಚೇತನರಿಗಾಗಿ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5ರಂತೆ 25 ಸಖಿ ಮತಗಟ್ಟೆಗಳು, 5 ವಿಶೇಷ ಚೇತನರ ಮತಗಟ್ಟೆ, 5 ಯುವ ಮತದಾರರ ಮತಗಟ್ಟೆ, 5 ಮಾದರಿ ಮತಗಟ್ಟೆ, 5 ಧ್ಯೇಯ ಆಧಾರಿತ ಮತ್ತು 5 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಗುಳೆ ಹೋದವರಲ್ಲೂ ಜಾಗೃತಿ:

ಜಿಲ್ಲೆಯಿಂದ ಗುಳೆ ಹೋದವರ ಮಾಹಿತಿ ಸಂಗ್ರಹಿಸಿ, ಅವರನ್ನು ಸಂಪರ್ಕಿಸಿ ಮತದಾನದಿಂದ ವಂಚಿತರಾಗದಂತೆ ಜಾಗೃತಿ ಮೂಡಿಸಲಾಗಿತ್ತು. ಈಗಾಗಲೇ ಜಿಲ್ಲೆಯಿಂದ ಗುಳೆ ಹೋಗಿದ್ದ 4652 ಮತದಾರರ ಪೈಕಿ ಬಹುತೇಕರು ವಾಪಸಾಗಿದ್ದಾರೆ. ತಾಂಡಾಗಳಿಂದ ಹೆಚ್ಚಿನ ಜನರು ವಾಪಸ್‌ ಹೋಗಿದ್ದರು. ಇನ್ನು ಹೊರ ಜಿಲ್ಲೆಗಳಲ್ಲಿ ಉಳಿದುಕೊಂಡವರಿಗೂ ಆಯಾ ಜಿಲ್ಲಾಡಳಿತದ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕುಡಿಯುವ ನೀರು ಪೋಲು ಮಾಡದೆ, ಮಿತವಾಗಿ ಬಳಸಿ. ಕುಡಿಯುವ ನೀರನ್ನು ಆರ್‌ಒ ಪ್ಲಾಂಟ್ ಗಳಿಂದಲೇ ಬಳಸಬೇಕು. ಜಲಾಶಯಗಳಲ್ಲಿ ಮತ್ತು ನದಿಯಲ್ಲಿ ಕೊನೆ ಹಂತದಲ್ಲಿರುವುದರಿಂದ ನೀರು ಕಲುಷಿತವಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಗಳ ಬರಬಹುದಾಗಿರುವುದರಿಂದ ಎಲ್ಲಾ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹರಪನಹಳ್ಳಿಯಲ್ಲಿ 85, ಕೂಡ್ಲಿಗಿ 33 ಹಳ್ಳಿಗಳಲ್ಲಿ ಅತಿ ಹೆಚ್ಚಿನ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಹಗರಿಬೊಮ್ಮನಹಳ್ಳಿ 32 ಹಳ್ಳಿ, ಹಡಗಲಿ 19, ಹೊಸಪೇಟೆ 13, ಕೊಟ್ಟೂರು 11 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಒಟ್ಟಾರೆ 242 ಖಾಸಗಿ ಬೋರ್‌ವೆಲ್‌ಗಳನ್ನು ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಈ ಬೋರ್‌ವೆಲ್‌ಗಳಲ್ಲಿಯೂ ನೀರು ಸಿಗದೆ ಸಮಸ್ಯೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.