ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಕುಟುಂಬದ ಜನಸಂಖ್ಯೆಯು ಸುಮಾರು 58,765 ಇದ್ದು, ಇವರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಶ್ರಮಿಸಲಾಗುತ್ತಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷರಾದ ಜಿ.ಪಲ್ಲವಿ ತಿಳಿಸಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯಲ್ಲಿ 9,066 ಅಲೆಮಾರಿ ಜನಸಂಖ್ಯೆ ಇದೆ. ಪರಿಶಿಷ್ಟ ವರ್ಗ ಅಲೆಮಾರಿ 32,702 ಜನಸಂಖ್ಯೆ ಇದೆ. ಹಾಗೆಯೇ ಆದಿವಾಸಿ ಬುಡಕಟ್ಟುಗಳಲ್ಲಿ 16,997 ಜನಸಂಖ್ಯೆ ಇದೆ ಎಂದು ಅವರು ವಿವರಿಸಿದರು.
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿ ಅವರು ಕುಶಾಲನಗರ ತಾಲೂಕಿನ ಬಸವನಹಳ್ಳಿ ಬಳಿಯ ಜೇನುಕುರುಬ ಮತ್ತು ಮೇದಾ ಜನಾಂಗದ ಕುಟುಂಬಗಳು ವಾಸಿಸುತ್ತಿರುವ ಪುನರ್ ವಸತಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಕುಂದುಕೊರತೆ ಆಲಿಸಿದರು.ಬಳಿಕ ದಿಡ್ಡಳ್ಳಿ ಆದಿವಾಸಿಗಳು ವಾಸಿಸುವ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಬಳಿಕ ದೊಡ್ಡಬೆಟ್ಟಗೇರಿಯಲ್ಲಿ ಸೋಲಿಗ ಕುಟುಂಬಗಳು ವಾಸಿಸುವ ಪ್ರದೇಶಕ್ಕೆ ಭೇಟಿ ನೀಡಿ ಅಲೆಮಾರಿ ಅಭಿವೃದ್ಧಿ ನಿಗಮದಿಂದ ನಡೆಸಲಾಗುತ್ತಿರುವ ಟೈಲರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಬಸವನಹಳ್ಳಿ ಬಳಿ ಬಿದಿರಿನ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸ್ಥಳೀಯರೊಬ್ಬರು ಮಾಹಿತಿ ನೀಡಿ ಬಹಳ ಹಿಂದಿನಿಂದಲೂ ಬಿದಿರಿನ ಉತ್ಪನ್ನಗಳಿಂದ ಹಲವು ಕರಕುಶಲ ವಸ್ತುಗಳನ್ನು ತಯಾರಿಸಿಕೊಂಡು ಬದುಕು ಕಟ್ಟಿಕೊಳ್ಳಲಾಗುತ್ತಿದೆ. ಇದೊಂದು ವೃತ್ತಿಯಾಗಿದ್ದು, ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಇಲ್ಲಿನ ಕೆಲವರು ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರುವವರು ಇದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿ ಅವರು, ಸರ್ಕಾರ ಮಹಿಳೆಯರ ಸ್ವಾವಲಂಬನೆಗೆ ಹಲವು ಕಾರ್ಯಕ್ರಮ ಜಾರಿಗೊಳಿಸಿದ್ದು, ಅವುಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದರು.
ಸರ್ಕಾರ ಅಲೆಮಾರಿ ಸಮುದಾಯಕ್ಕೆ ಆರ್ಥಿಕ ಬಲ ತುಂಬಲು ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ 1 ಲಕ್ಷ ರು.ವರೆಗೆ ಸಾಲ ಯೋಜನೆ ನೀಡಲಿದ್ದು, ಶೇ.50 ರಷ್ಟು ಸಹಾಯಧನ ಕಲ್ಪಿಸಲಾಗುತ್ತದೆ ಎಂದರು.ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ 2 ಲಕ್ಷ ರು. ವರೆಗೂ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದು ಜಿ.ಪಲ್ಲವಿ ಅವರು ವಿವರಿಸಿದರು.
ಸ್ವಾವಲಂಭಿ ಸಾರಥಿ ಯೋಜನೆಯಡಿ ಸರಕು ಸಾಗಾಣೆ ವಾಹನ, ಪ್ರವಾಸಿ ಟ್ಯಾಕ್ಸಿ ವಾಹನಗಳಿಗೆ ಶೇ.75 ರಷ್ಟು ಮತ್ತು ಅದಕ್ಕಿಂತ 4 ಲಕ್ಷ ರು. ವರೆಗೆ ಸಹಾಯಧನ ಕಲ್ಪಿಸಲಾಗುತ್ತದೆ ಎಂದು ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ನುಡಿದರು.ಅಲೆಮಾರಿ ಸಮುದಾಯದ ಮಹಿಳಾ ಸ್ವಸಹಾಯ ಸಂಘಗಳ ವಿವಿಧ ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಮುಂದಾಗಲಾಗಿದ್ದು, ಈ ಯೋಜನೆಯಡಿ ಸ್ವಸಹಾಯ ಸಂಘಗಳ ವಿವಿಧ ಉದ್ದೇಶದ ಆರ್ಥಿಕ ಚಟುವಟಿಕೆಗೆ ಕನಿಷ್ಠ 10 ಮಹಿಳಾ ಸದಸ್ಯರು ಇರುವ ಸ್ವಸಹಾಯ ಗುಂಪುಗೆ 2.50 ಲಕ್ಷ ರು. ವರೆಗೆ ಸಾಲ ಸಹಾಯಧನ ಕಲ್ಪಿಸಲಾಗುತ್ತಿದೆ ಎಂದು ಜಿ.ಪಲ್ಲವಿ ಅವರು ತಿಳಿಸಿದರು.
ಅಲೆಮಾರಿ ಸಮುದಾಯದವರು ಒಂದು ಕಡೆ ನೆಲೆಯೂರಿ ಜೀವನ ಸಾಗಿಸಲು ಹಾಗೂ ಭೂಮಾಲೀಕರನ್ನಾಗಿ ಮಾಡಲು ಮಹಿಳಾ ಕೃಷಿ ಕಾರ್ಮಿಕ ಅಲೆಮಾರಿ ಸಮುದಾಯದವರಿಗೆ ಕೃಷಿಗೆ ಯೋಗ್ಯವಾದ ಭೂಮಿಯನ್ನು ಖರೀದಿಸಿ ಮಹಿಳಾ ಫಲಾನುಭವಿಗೆ ನೀಡಲಾಗುತ್ತಿದ್ದು, ಶೇ.50 ರಷ್ಟು ಸಹಾಯಧನ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದರು.ಸಣ್ಣ ಮತ್ತು ಅತೀ ಸಣ್ಣ ರೈತರು ಹೊಂದಿರುವ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕೊಳವೆ ಬಾವಿ ಕೊರೆಸಿ ವಿದ್ಯುದ್ಧೀಕರಣಗೊಳಿಸುವ ಯೋಜನೆ ಈಗಾಗಲೇ 6 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ಆ ನಿಟ್ಟಿನಲ್ಲಿ ವಿವಿಧ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬನೆಯತ್ತ ಗಮನಹರಿಸಬೇಕು ಎಂದು ಜಿ.ಪಲ್ಲವಿ ಅವರು ತಿಳಿಸಿದರು.
ಬಳಿಕ ದೊಡ್ಡಬೆಟ್ಟಗೇರಿಯ ಸೋಲಿಗ ಸಮುದಾಯ ಭವನಕ್ಕೆ ಭೇಟಿ ನೀಡಿ ಟೈಲರಿಂಗ್ ವೃತ್ತಿ ಮಾಡುತ್ತಿರುವ ಮಹಿಳೆಯರನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ವೃತ್ತಿ ಕೌಶಲ್ಯ ಬೆಳೆಸಿಕೊಂಡು ಜೀವನ ಮಟ್ಟ ಸುಧಾರಿಸಿಕೊಳ್ಳಲು ಮುಂದಾಗುತ್ತಿರುವುದು ಶ್ಲಾಘನೀಯ. ಆ ನಿಟ್ಟಿನಲ್ಲಿ ಸೋಲಿಗ ಯುವಜನರು ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದಾರೆ. ಪರಿಶ್ರಮ ಇದ್ದಲ್ಲಿ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಮಾಹಿತಿ ಶಿಕ್ಷಣ ಮತ್ತು ಸಂವಹನ ಮೂಲಕ ಟೈಲರಿಂಗ್, ಬ್ಯೂಟಿಷಿಯನ್ ವೃತ್ತಿ ಕೌಶಲ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಬಸವನಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭೂಮಿ ಇಲ್ಲದವರಿಗೆ ಭೂಮಿ ಹಂಚಿಕೆ ಮಾಡಬೇಕು ಎಂದು ಸಾರ್ವಜನಿಕರು ಕೋರಿದರು. ಇಲ್ಲಿನ ಯುವಜನರು ರೆಸಾರ್ಟ್, ದಿನಗೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ ಎಂದು ಅವಲತ್ತುಕೊಂಡರು.ಅಲೆಮಾರಿ ಅಭಿವೃದ್ಧಿ ನಿಗಮದಿಂದ ದೊರೆಯುವ ಸಾಲ ಸೌಲಭ್ಯ, ಸಹಾಯಧನ ಮತ್ತಿತರ ಬಗ್ಗೆ ಅಲೆಮಾರಿ ಸಮುದಾಯಕ್ಕೆ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಪೊನ್ನಂಪೇಟೆ ತಾಲೂಕಿನ ಬೊಂಬುಕಾಡು ಕಾರೆಕಂಡಿ ಜೇನುಕುರುಬ ಹಾಡಿಗೆ ಭೇಟಿ ನೀಡಿ ಮಾಹಿತಿ ಪಡೆದರು. ವಿರಾಜಪೇಟೆ ತಾಲೂಕಿನ ಮಾಲ್ದಾರೆ ಆಸ್ತನಹಾಡಿ ಪರಿಶಿಷ್ಟ ಪಂಗಡದ ಕುರುಬ ಜನಾಂಗ ವಾಸಿಸುವ ಸ್ಥಳ ವೀಕ್ಷಿಸಿ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಲ್ಲವಿ ಅವರು ಆದಿವಾಸಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರುವಂತಾಗಬೇಕು. ಪರಿಶ್ರಮ ಇದ್ದಲ್ಲಿ ಯಶಸ್ಸು ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ ಜೊತೆಗೆ ಸ್ವಾವಲಂಬಿ ಬದುಕಿಗೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಅಲೆಮಾರಿ ಅಭಿವೃದ್ಧಿ ನಿಗಮ ವತಿಯಿಂದ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.ತಹಸೀಲ್ದಾರ್ ಕಿರಣ್ ಗೌರಯ್ಯ(ಕುಶಾಲನಗರ), ಮೋಹನ್ ಕುಮಾರ್(ಪೊನ್ನಂಪೇಟೆ), ಐಟಿಡಿಪಿ ಇಲಾಖೆ ಅಧಿಕಾರಿ ತೇಜಕುಮಾರ್(ವಿರಾಜಪೇಟೆ, ಪೊನ್ನಂಪೇಟೆ), ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಪ್ರೀತಿ ಚಿಕ್ಕಮಾದಯ್ಯ (ವಿರಾಜಪೇಟೆ), ಸಿದ್ದೇಗೌಡ(ಕುಶಾಲನಗರ, ಸೋಮವಾರಪೇಟೆ), ಎಇಇ ಮಹದೇವ, ಸೆಸ್ಕ್ ಎಇಇ ಸುರೇಶ್, ಕುಡಿಯುವ ನೀರು ವಿಭಾಗದ ಎಇಇ ಭಾಸ್ಕರ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿ.ಎಸ್.ಆನಂದ್ ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.