ಸಾರಾಂಶ
ಕನ್ನಡಪ್ರಭ ವಾರ್ತೆ, ಬೆಂಗಳೂರು
ಸಿಲಿಕಾನ್ ಸಿಟಿಯಲ್ಲಿ ಚುನಾವಣೆ ಕಾವು ಬಿಸಿಲ ಬೇಗೆ, ನೀರಿನ ಬವಣೆಯನ್ನು ಬದಿಗೆ ಸರಿಸಿದೆ. ಮನೆಯಂಗಳದಿಂದ ಹಿಡಿದು ಮಾರುಕಟ್ಟೆ, ಮೆಟ್ರೋ, ದೇವಸ್ಥಾನ ಸೇರಿ ಕ್ಲಬ್ ಪಬ್‌ಗಳಲ್ಲೂ ಎಲೆಕ್ಷನ್ ಮಾತುಕತೆಗಳೇ ಜೋರಾಗಿವೆ. ಮಾತನಾಡುವವರೆಲ್ಲ ಮತಗಟ್ಟೆವರೆಗೆ ಹೋಗುತ್ತಾರಾ ಎಂಬ ಪ್ರಶ್ನೆಯೂ ಇದೆ.ಮೊದಲ ಹಂತದ ಮತದಾನಕ್ಕೆ ಮೂರು ದಿನ ಮಾತ್ರ ಬಾಕಿಯಿದೆ. 48 ಗಂಟೆ ಮೊದಲೇ ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪ್ರಚಾರ, ತಂತ್ರಗಾರಿಕೆ, ಮನವೊಲಿಕೆಗಳು ಹರಿಬರಿಯಲ್ಲಿ ಸಾಗಿವೆ. ಹಿಂದಿನಂತೆ ಕಂಡಲ್ಲೆಲ್ಲ ಕಟೌಟ್, ಫ್ಲೆಕ್ಸ್, ಪಕ್ಷಗಳ ಚಿಹ್ನೆಗಳ ತೋರಣ ರಾರಾಜಿಸದಿದ್ದರೂ ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ಇನ್ನೊಂದೆಡೆ ಜನತೆಯ ಚಿತ್ತವೂ ಚುನಾವಣೆಯತ್ತಲೇ ಕೇಂದ್ರೀಕೃತವಾಗಿದೆ.
ರಾಜಧಾನಿಯಲ್ಲಿ ವಾರದ ಹಿಂದಿದ್ದ ಚಿತ್ರಣ ಈಗಿಲ್ಲ. ಟ್ಯಾಂಕರ್ ನೀರು ಪೂರೈಸುವವರ, ಕೊಳ್ಳುವವರ ನಡುವೆಯೂ ಮಧ್ಯೆ ‘ನಿಮ್ಮಲ್ಲಿ ಯಾರು ಬರ್ತಾರೆ.?’ ಎಂಬುದೆ ಪ್ರಧಾನ ಚರ್ಚೆಯಾಗಿದೆ. ಸೆಕೆ ಬಗ್ಗೆ ಶುರುವಾಗುವ ಮಾತು ಮುಂದುವರಿದು ಚುನಾವಣೆಯತ್ತಲೇ ಹೊರಳುತ್ತಿದೆ. ಮಾರುಕಟ್ಟೆಗಳಲ್ಲಿ ಕೊಳ್ಳುವವರು, ವರ್ತಕರ ನಡುವೆ, ಮೆಟ್ರೋ, ಬಸ್ ಪ್ರಯಾಣಿಕರ ಮಧ್ಯೆ ಚುನಾವಣೆ ಸರಕೇ ಮಾತಾಗಿದೆ.ಸಾಮಾನ್ಯವಾಗಿ ಬಹುತೇಕ ಅಭ್ಯರ್ಥಿಗಳು ಬೆಳಗ್ಗೆ ದೇವಸ್ಥಾನ, ಪ್ರಾರ್ಥನಾ ಸ್ಥಳಗಳ ಮೂಲಕವೇ ಪ್ರಚಾರ ಆರಂಭಿಸುತ್ತಿದ್ದಾರೆ. ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ಮುಖ್ಯ ರಸ್ತೆಯಿಂದ ಹಿಡಿದು ಗಲ್ಲಿಗಳ ನಿವಾಸಿಗಳನ್ನು ಭೇಟಿಯಾಗಿ ಕರಪತ್ರ ಕೊಟ್ಟು ಮತ ಕೇಳುತ್ತಿದ್ದಾರೆ. ಕಬ್ಬನ್ ಪಾರ್ಕ್, ಲಾಲ್ ಬಾಗ್, ಸ್ಯಾಂಕಿಟ್ಯಾಂಕ್ ಸೇರಿ ಉದ್ಯಾನಗಳಿಗೆ ನಸುಕಿನ, ಸಂಜೆಯ ವಾಯುವಿಹಾರದಲ್ಲಂತೂ ಪ್ರಧಾನಿ ಮೋದಿ, ರಾಹುಲ್ ಗಾಂಧಿಯಿಂದ ಹಿಡಿದು ಮಾಜಿ ಕಾರ್ಪೋರೇಟರ್‌ಗಳ ಕೆಲಸದ ಬಗ್ಗೆಯೂ ಚರ್ಚೆಯಾಗುತ್ತಿದೆ. ಸಂಜೆ ಹೊತ್ತು ಸೇರುವ ನಿವೃತ್ತರು ಮಾತುಗಳಲ್ಲಿ ಅಭ್ಯರ್ಥಿಗಳ ಪರ ವಿರೋಧ ಬ್ಯಾಟಿಂಗ್ ತಾರಕಕ್ಕೇರಿ ಇಳಿಯುತ್ತಿವೆ.
ವಿಶೇಷವೆಂದರೆ ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾ ನಗರ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿಗಳ ಕ್ಲಬ್, ಪಬ್‌ಗಳಲ್ಲಿ, ಐಟಿ ಪಾರ್ಕ್‌ಗಳಲ್ಲಿ ಟೆಕ್ಕಿಗಳಿಂದ ಚುನಾವಣೆ ಬಗ್ಗೆ ಅಭಿಪ್ರಾಯ ಹಂಚಿಕೆಯಾಗುತ್ತಿದೆ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಸೋಶಿಯಲ್ ಮೀಡಿಯಾ ಮೀಮ್ಸ್, ಪೋಸ್ಟ್‌ಗಳಿಂದಲೇ ಚುನಾವಣೆಯಲ್ಲಿ ಏನಾಗ್ತಿದೆ ಎಂದು ತಿಳಿಯುತ್ತಿದೆ ಎಂದು ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಪ್ರಸನ್ನ ಹೇಳುತ್ತಾರೆ. ಅಲ್ಲದೆ ತಮ್ಮ ವಲಯದಲ್ಲಿ ಮತದಾನದ ರಜೆ ಕಳೆಯುವ ಕುರಿತೂ ಈಗಲೇ ಮಾತುಕತೆಯಾಗಿದೆ ಎಂದೂ ಹೇಳಿದರು.ವಿಜಯನಗರದ ಪ್ರೊ. ಎಂ.ಎನ್.ಶ್ರೀಹರಿ ಮಾತನಾಡಿ, ಚುನಾವಣೆ ಬಿಸಿ, ಮಾತುಕತೆಗಳು ಜೋರಾಗಿಯೆ ಇರುತ್ತವೆ. ನಗರದಲ್ಲಿ ಮಳೆನೀರು, ಟ್ರಾಫಿಕ್, ಕುಡಿಯುವ ನೀರಿನ ಸಮಸ್ಯೆ ಆದಾಗ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆವ ಟೆಕ್ಕಿಗಳು ತಮ್ಮ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಾರೆ ಎಂಬುದು ಅಷ್ಟೇ ಮುಖ್ಯ ಎಂದು ಹೇಳುತ್ತಾರೆ.