ಆನೆ ದಾಳಿ: ರೈತನಿಗೆ ಗಂಭೀರ ಗಾಯ

| Published : Jul 11 2025, 01:49 AM IST

ಸಾರಾಂಶ

ಕನಕಪುರ: ತಾಲೂಕಿನ ನಾರಾಯಣಪುರ ಗ್ರಾಮದ ಎನ್.ಸಿ.ಶ್ರೀನಿವಾಸ್(42) ಮೇಲೆ ಆನೆ ದಾಳಿ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ 6.30ಕ್ಕೆ ರೇಷ್ಮೆ ಹುಳುಗಳಿಗೆ ಸೊಪ್ಪು ಕೊಯ್ಯಲು ತೋಟಕ್ಕೆ ಹೋದಾಗ, ಶ್ರೀನಿವಾಸ್ ಮೇಲ ಆನೆ ಹಠಾತ್ತನೆ ದಾಳಿ ಮಾಡಿದ ಪರಿಣಾಮ ಆತನ ಎಡ ಭಾಗದ ತೊಡೆ ಮುರಿದಿದೆ.

ಗ್ರಾಮಕ್ಕೆ ಹೊಂದಿಕೊಂಡಂತಿರುವ ರೇಷ್ಮೆ ತೋಟದಲ್ಲಿ ಗುರುವಾರ ಬೆಳಗ್ಗೆ ಘಟನೆ ನಡೆದಿದ್ದು, ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳು ವಿಷಯ ತಿಳಿದ 3 ಗಂಟೆಯಾದರೂ ಘಟನಾ ಸ್ಥಳಕ್ಕೆ ಭೇಟಿ ನೀಡಲಿಲ್ಲವೆಂದು, ರೊಚ್ಚಿಗೆದ್ದ ಗ್ರಾಮಸ್ಥರು ಗಾಯಾಳುವನ್ನು ರಸ್ತೆಯಲ್ಲೇ ಮಲಗಿಸಿ, ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಆಕ್ರೋಶಗೊಂಡ ಪ್ರತಿಭಟನಾಕಾರರು ಆನೆಗಳು ಬರದಂತೆ ತಡೆಯಲು ಹಲವು ವರ್ಷಗಳಿಂದ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಆನೆಗಳು ಬರದಂತೆ ರೈಲ್ವೆ ಬ್ಯಾರಿಕೇಡ್ ಅಳವಡಿಸಿದ್ದು, ಎರಡು ಕಡೆ ಬ್ಯಾರಿಕೇಡ್ ಇಲ್ಲದ ಕಾರಣ ಅಲ್ಲಿಂದ ಆನೆಗಳು ಗ್ರಾಮದೊಳಗೆ ಪ್ರವೇಶ ಮಾಡಿ, ರೈತರ ಸಾವು ನೋವುಗಳು ಹೆಚ್ಚಾಗುತ್ತಿವೆ,ಕೂಡಲೇ ಆನೆಗಳು ಬರದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ಎಸಿಎಫ್‌ ಹಾಗೂ ಆರ್‌ಎಫ್‌ಒ ಮಾತನಾಡಿ, ಗಾಯಾಳು ಶ್ರೀನಿವಾಸ ಗುಣಮುಖರಾಗುವವರೆಗೂ ಚಿಕಿತ್ಸಾ ವೆಚ್ಚವನ್ನು ನಮ್ಮ ಇಲಾಖೆಯಿಂದಲೇ ಭರಿಸುವುದಾಗಿ ಹಾಗೂ ಸರ್ಕಾರದಿಂದ ಸಿಗುವ ಪರಿಹಾರವನ್ನು ಕೂಡಲೇ ನೀಡುವುದಾಗಿ ಭರವಸೆ ನೀಡಿದರು. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಶ್ರೀನಿವಾಸ ಅವರನ್ನು ದಯಾನಂದ ಸಾಗರ್ ಆಸ್ಪತ್ರೆಗೆ ದಾಖಲಿಸಿದ್ದು ಪ್ರತಿಭಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಆಗಮಿಸಿ ಪ್ರತಿಭನಾಕಾರರನ್ನು ಸಮಾಧಾನಪಡಿಸಿದರು. ಘಟನಾ ಸ್ಥಳದಲ್ಲಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.