ಸಾರಾಂಶ
ಗೋಪಾಲ್ ಯಡಗರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್ ಕೆಜಿ, ಯುಕೆಜಿ) ಆರಂಭಿಸಿರುವ ಬೆನ್ನಲ್ಲೆ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದ್ದು, ಭವಿಷ್ಯದಲ್ಲಿ ಬಹುತೇಕ ಅಂಗನವಾಡಿಗಳು ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 93 ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಇದು ಒಂದು ರೀತಿಯಲ್ಲಿ ವರವಾಗಬಹದು. ಆದರೆ, ಇದುವರೆಗೆ ಸರ್ಕಾರವೇ ನಡೆಸುತ್ತಿದ್ದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಸರ್ಕಾರದ ಹೊಸ ಸುಧಾರಣಾ ನೀತಿ ಅಂಗನವಾಡಿ ಕೇಂದ್ರಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ.ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೂಲಕ ಆರು ವರ್ಷದ ಒಳಗಿನ ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕ ಆಹಾರ ನೀಡುವ ಜತೆಗೆ, ಪೂರ್ವ ಪ್ರಾಥಮಿಕ ಶಿಕ್ಷಣದ ಖಾತ್ರಿಯನ್ನೂ ಅಂಗನವಾಡಿ ದಶಕಗಳ ಕಾಲ ಒದಗಿಸಿದೆ. ಅಂಗನವಾಡಿ ಕಾರ್ಯಕರ್ತೆಯರು ಅತ್ಯಂತ ಕಡಿಮೆ ಗೌರವ ಸಂಭಾವನೆ ಪಡೆದರೂ, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಆದರೆ, ಈಗ ಸರ್ಕಾರಿ ಶಾಲೆಗಳಲ್ಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಿರುವುದರಿಂದ ಮುಂದೆ ಅಂಗನವಾಡಿಗಳು ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಆತಂಕ.
ಇಷ್ಟು ದಿನ ಮಕ್ಕಳ ಶಾಲಾ ಪೂರ್ವ ಶಿಕ್ಷಣ ನಡೆಯುತ್ತಿದ್ದುದು ಅಂಗನವಾಡಿಗಳಲ್ಲಿ, ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಆರಂಭವಾಗಿದ್ದರೂ ಕೂಡ ಅಂಗನ ವಾಡಿಗಳಲ್ಲಿ ಮಕ್ಕಳ ಸಂಖ್ಯೆ ಮಾತ್ರ ಕಡಿಮೆಯಾಗಿರಲಿಲ್ಲ. ಕಾರಣ, ಹೆಚ್ಚಿನ ಬಡ ಮತ್ತು ಕೆಳ ಮಧ್ಯಮ ವರ್ಗದವರು ಖಾಸಗಿ ಶಾಲೆಯಲ್ಲಿರುವ ಎಲ್ ಕೆಜಿ, ಯುಕೆಜಿಗೆ ಮಕ್ಕಳನ್ನು ಸೇರಿಸುವ ಬದಲು, ಅಂಗನವಾಡಿಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದರು. ಒಂದನೇ ತರಗತಿಗೆ ಮಕ್ಕಳು ದಾಖಲಾಗುವ ಮೊದಲು ಅಂದರೆ ಮೂರರಿಂದ ಆರು ವರ್ಷದ ಮಕ್ಕಳನ್ನು ಅಂಗನವಾಡಿಗಳಿಗೆ ದಾಖಲಿಸಲಾಗುತ್ತಿತ್ತು. ಹೀಗಾಗಿ ಎಲ್ಲೆಡೆ ಅಂಗನವಾಡಿಗಳನ್ನು ಆರಂಭಿಸಿದ್ದು, ಅವುಗಳನ್ನು ನೋಡಿ ಕೊಳ್ಳಲು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೇಮಕ ಮಾಡಲಾಗಿದೆ. ಆದರೆ, ಈಗ ಸರ್ಕಾರಿ ಶಾಲೆಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸುವ ಮೂಲಕ ಸರ್ಕಾರ ನಿಧಾನವಾಗಿ ಅಂಗನವಾಡಿಗಳಿಗೆ ಗುಡ್ ಬೈ ಹೇಳಲು ಮುಂದಾಗಿದೆಯಾ? ಎನ್ನುವ ಅನುಮಾನಗಳು ಆರಂಭವಾಗಿವೆ.ಖಾಸಗಿ ವ್ಯವಸ್ಥೆಯಲ್ಲಿ ಅಂಗನವಾಡಿ ಶಬ್ದಗಳಿಲ್ಲ. ಬದಲಾಗಿ ಎಲ್‌ಕೆಜಿ, ಯುಕೆಜಿಗಳಿವೆ. ಇದು ಅಂಗನವಾಡಿ ಮಕ್ಕಳಿಗೆ ತಾರತಮ್ಯದ ಪ್ರತೀಕವಾಗಿ ಕಾಣುತ್ತಿತ್ತು. ಆದರೆ ಇದು ದೂರದ ನಗರಗಳಲ್ಲಿ ಮಾತ್ರವಿತ್ತು. ಆದರೀಗ ಈ ಎಲ್‌ಕೆಜಿ, ಯುಕೆಜಿ ಅಂಗನವಾಡಿ ಪಕ್ಕದಲ್ಲಿಯೇ ಸ್ಥಾಪಿತವಾಗುತ್ತಿದೆ. ಜೊತೆಗೆ ಆಧುನಿಕ ಸ್ಷರ್ಷದೊಂದಿಗೆ ಇದನ್ನು ಆರಂಭಿಸುತ್ತಿದ್ದು, ಸಹಜವಾಗಿಯೇ ಈ ಮಕ್ಕಳ ಮತ್ತು ಪೋಷಕರ ಗಮನ ಅತ್ತ ಹರಿಯುವುದು ಸಹಜವಾಗಿದೆ.
ಸರ್ಕಾರದ ಉದ್ದೇಶ:ಸರ್ಕಾರಿ ಶಾಲೆಯಲ್ಲಿಯೇ ಎಲ್ ಕೆ ಜಿ, ಯುಕೆಜಿ ಆರಂಭಿಸಿದರೆ, ಮುಂದೆ ಒಂದನೇ ತರಗತಿಯಿಂದ ಕೂಡ ಮಕ್ಕಳು ಅಲ್ಲಿಯೇ ಮುಂದುವರಿಯುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗೋದಿಲ್ಲ. ಇನ್ನು ಪೂರ್ವ ಪ್ರಾಥಮಿಕ ಶಿಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿದ್ದು, ಅದನ್ನು ಶಿಕ್ಷಣ ಇಲಾಖೆಗೆ ಸೇರಿಸುವುದರಿಂದ ಒಂದೇ ಇಲಾಖೆಯಡಿ, ಮಕ್ಕಳ ಸಮಗ್ರ ಶಿಕ್ಷಣಕ್ಕೆ ಅನಕೂಲವಾಗುತ್ತದೆ ಎನ್ನುವುದು ಸರ್ಕಾರದ ಚಿಂತನೆ.
ಅಂಗನವಾಡಿ ಕಾರ್ಯಕರ್ತೆಯರ ವಿರೋಧ:ಆದರೆ, ಇದೇ ವಿಷಯ ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಭಯಕ್ಕೆ ಕಾರಣವಾಗಿದೆ. ಸರ್ಕಾರದ ಈ ನಿರ್ಧಾರದಿಂದ ಅಂಗನವಾಡಿ ಗೆ ಬರುವ ಮಕ್ಕಳೇ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿಗೆ ಸೇರಿದರೆ ಅಂಗನವಾಡಿಗೆ ಯಾರೂ ಬರೋದಿಲ್ಲ. ಮಕ್ಕಳು ಇಲ್ಲದೇ ಹೋದರೆ ಅಂಗನವಾಡಿ ಗಳು ಬಂದ್ ಆಗಬಹುದು ಎನ್ನುವ ಆತಂಕ ಈ ಕಾರ್ಯಕರ್ತೆಯರದ್ದು. ಹೀಗಾಗಿ ಸರ್ಕಾರದ ಎಲ್ ಕೆಜಿ, ಯುಕೆಜಿ ಸ್ಥಾಪನೆಯ ನಿರ್ಧಾರವನ್ನು ಅಂಗನವಾಡಿ ಕಾರ್ಯಕರ್ತೆಯರು ಆರಂಭದಿಂದಲೇ ವಿರೋಧಿಸುತ್ತಾ ಬಂದಿದ್ದು, ಸರ್ಕಾರ ನಿರ್ಧಾರದ ಬದಲಾಗಿ ಅಂಗನವಾಡಿ ಗಳಿಗೆ ಎಲ್‌ಕೆಜಿ, ಯುಕೆಜಿ ನಡೆಸಲು ಅವಕಾಶ ನೀಡಬೇಕು ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ.
ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಅದನ್ನು ಮುಚ್ಚುವ ಕುರಿತು ಸರ್ಕಾರ ಚಿಂತಿಸುತ್ತದೆ. ಈ ಸಾಧ್ಯತೆಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಲಯದಲ್ಲಿ ಆತಂಕ ಎದುರಾಗಿದೆ. ನಾವು ಬೀದಿಗೆ ಬರುವುದು ಖಚಿತ ಎಂಬ ಮಾತುಗಳು ಚರ್ಚೆಯಾಗುತ್ತಿದೆ. ಅಂಗನವಾಡಿ ಬಂದ್ ?ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ 2563 ಅಂಗನವಾಡಿಗಳಿದ್ದು, 84,877 ಸಾವಿರ ಮಕ್ಕಳು ಅಂಗನವಾಡಿಗಳಲ್ಲಿ ಓದುತ್ತಿದ್ದಾರೆ. 2389 ಅಂಗನವಾಡಿ ಕಾರ್ಯ ಕರ್ತೆಯರು, 1870 ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಿದರೆ, ಅಂಗನವಾಡಿಗೆ ಮಕ್ಕಳು ಬರೋದಿಲ್ಲ. ನಿಧಾನವಾಗಿ ಅಂಗನವಾಡಿಗಳನ್ನು ಬಂದ್ ಮಾಡುತ್ತಾರೆ. ಮುಂದೆ ನಾವು ಬೀದಿಗೆ ಬೀಳುತ್ತೇವೆ ಎನ್ನುವ ಆತಂಕ ಅಂಗನವಾಡಿ ಕಾರ್ಯಕರ್ತೆ ಯರನ್ನು ಕಾಡಲು ಆರಂಭಿಸಿದೆ.ಅಂಗನವಾಡಿಗಳನ್ನೆ ಮೇಲ್ದರ್ಜೆಗೇರಿಸಿ
ಸರ್ಕಾರದ ಈ ನಿರ್ಧಾರದಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದೆ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಎಲ್ ಕೆಜಿ, ಯುಕೆಜಿ ಪ್ರಾರಂಭ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ. ಹೀಗಾದರೆ ಅಕ್ಕನೋ, ಅಣ್ಣನೋ ಎಲ್ ಕೆಜಿಯಲ್ಲಿ ಓದುತ್ತಿದ್ದರೆ ಅಂಗನವಾಡಿಗೆ ಅವರ ತಂಗಿ ಇಲ್ಲ ತಮ್ಮನೋ ಬರುತ್ತಿದ್ದರೆ ಅವರನ್ನು ಅವರ ಜೊತೆ ಎಲ್‌ಕೆಜಿ ಗೆ ಕಳುಹಿಸುತ್ತಾರೆ. ಹೀಗಾದರೆ ಅಂಗನವಾಡಿಗೆ ಮಕ್ಕಳು ಹೇಗೆ ಬರುತ್ತಾರೆ? ಇದರ ಬದಲು ನಮ್ಮ ಕಾರ್ಯಕರ್ತೆ ಯರಲ್ಲಿ ಬಹಳಷ್ಟು ಮಂದಿ ಪಿಯುಸಿ, ಪದವಿ, ಪಡೆದವರಿದ್ದಾರೆ. ಅವರಿಗೆ ಅಗತ್ಯ ತರಬೇತಿ ಕೊಟ್ಟು ಶಿಕ್ಷಕಿಯರ ಸ್ಥಾನ ನೀಡಬೇಕು. ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಇಲ್ಲಿಯೇ ಎಲ್‌ಕೆಜಿ, ಯುಕೆಜಿಯನ್ನು ಆರಂಭಿಸಬೇಕು. ಜೊತೆಗೆ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಸ್ವತಂತ್ರ ಸಂಘಟನೆಯ ರಾಜ್ಯಾಧ್ಯಕ್ಷೆ ಬಿ.ಪ್ರೇಮಾ ಆಗ್ರಹಿಸಿದರು.