ಪರಿಶಿಷ್ಠ ಜಾತಿಗಳಲ್ಲಿ ಅಂತಃಕಲಹ ತಪ್ಪಿಸಲು ಮದ್ಯಂತರ ಆದೇಶದ ಮೂಲಕ ಒಳ ಮೀಸಲಾತಿ ಜಾರಿಗೆ ಆಗ್ರಹ

| N/A | Published : Feb 01 2025, 12:46 AM IST / Updated: Feb 01 2025, 12:38 PM IST

ಪರಿಶಿಷ್ಠ ಜಾತಿಗಳಲ್ಲಿ ಅಂತಃಕಲಹ ತಪ್ಪಿಸಲು ಮದ್ಯಂತರ ಆದೇಶದ ಮೂಲಕ ಒಳ ಮೀಸಲಾತಿ ಜಾರಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ನೃಪತುಂಗ ರಸ್ತೆಯ ಒಳಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗದ ಕಚೇರಿಯಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅವರಿಗೆ ಒಳಮೀಸಲಾತಿ ಜಾರಿಗೆ ಮನವಿ ಸಲ್ಲಿಸಲಾಯಿತು.

 ಹಿರಿಯೂರು : ಪರಿಶಿಷ್ಠ ಜಾತಿಗಳಲ್ಲಿ ಅಂತಃಕಲಹ ತಪ್ಪಿಸಲು ಮಧ್ಯಂತರ ಆದೇಶದ ಮೂಲಕ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅವರು ಏಕಸದಸ್ಯ ವಿಚಾರಣಾ ಆಯೋಗದ ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಅವರನ್ನು ಒತ್ತಾಯಿಸಿದರು.

ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಕಟ್ಟಡದಲ್ಲಿರುವ ಒಳಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗದ ಕಚೇರಿಯಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಪ್ರಾಯೋಗಿಕ ಮಾಹಿತಿ ಲಭ್ಯವಿಲ್ಲವೆಂಬ ಕಾರಣಕ್ಕೆ ಒಳಮೀಸಲಾತಿ ಜಾರಿ ಮಂದೂಡಿದರೆ ಪರಿಶಿಷ್ಠ ಜಾತಿಗಳಲ್ಲಿನ ಐಕ್ಯತೆಗೆ ದಕ್ಕೆಯಾಗುತ್ತದೆ. ವೈಜ್ಞಾನಿಕ ಗಣತಿಯಾಗಿಲ್ಲ, ಪ್ರಾಯೋಗಿಕ ದತ್ತಾಂಶವಿಲ್ಲ, ಎಕೆ-ಎಡಿಗಳ ಸಮಸ್ಯೆಗಳಿವೆ ಎಂಬ ನೂರಾರು ಕುಂಟು ನೆಪಗಳು ಈಗ ಅರ್ಥ ಕಳೆದುಕೊಂಡಿವೆ. ಮಂಡಲ ವರದಿ, ಚೆನ್ನಪ್ಪರೆಡ್ಡಿ ವರದಿ, ಕಾಂತರಾಜ್ ಆಯೋಗ ಇವುಗಳಾವುವು ನೂರಕ್ಕೆ ನೂರರಷ್ಟು ವೈಜ್ಞಾನಿಕವಾಗಿ ನಡೆದಿಲ್ಲ. ಹಿಂದುಳಿದ ವರ್ಗದವರಿಗೆ ಸಿ1, 2ಎ, 2ಬಿ, 3ಎ, 3ಬಿ ವರ್ಗದ ವಿಂಗಡಣೆ ಮಾಡುವಾಗಲೂ ನಿಖರ ದತ್ತಾಂಶಗಳು ಇರಲಿಲ್ಲ.

ಕೆಲವು ಕಡೆ ಎಕೆ-ಎಡಿ ಹಾಗೂ ಎಡಿ-ಎಕೆಗಳಾಗಿದ್ದಾರೆ. ಇದನ್ನು ಸರಿಪಡಿಸುವುದು ತುಂಬಾ ಕಷ್ಟವೆಂದೂ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಇಂದಿನ ವೈಜ್ಞಾನಿಕ ಯುಗದಲ್ಲಿ ನಿಗದಿತ ಅವಧಿಯೊಳಗೆ ಮಾದಿಗ ಸಮಾಜದ ಜಾತಿಗಳು ಒಂದು ಕಡೆ, ಛಲವಾದಿ ಜಾತಿಗಳು ಒಂದು ಕಡೆಯೆಂದು ನಮೂದಿಸುವಂತೆ ಸರ್ಕಾರವು ಸಂಬoಧಪಟ್ಟ ಇಲಾಖೆಗಳ ಮೂಲಕ ಅಧಿಸೂಚನೆ ನೀಡಿದರೆ ಕೆಲವೇ ದಿನಗಳಲ್ಲಿ ಅಂಕಿ ಅoಶಗಳು ಲಭ್ಯವಾಗುವುದರ ಮೂಲಕ ಈ ಸಮಸ್ಯೆ ಬಗೆಹರಿಯುತ್ತದೆ.

ಹಾಲಿ ಲಭ್ಯವಿರುವ 2011ರ ಜಾತಿ ಗಣತಿ, ಸದಾಶಿವ ಆಯೋಗದ ವರದಿ ಹಾಗೂ ಮಾದುಸ್ವಾಮಿ ವರದಿಯ ದತ್ತಾಂಶಗಳನ್ನು ಬಳಸಿಕೊಂಡು ಒಳ ಮೀಸಲಾತಿ ಜಾರಿ ಮಾಡುವುದು. ಅವಶ್ಯವೆನಿಸಿದರೆ 2025ರ ಜಾತಿ ಗಣತಿಯ ನಂತರ ನಡೆಯುವ ಜಾತಿ ಗಣತಿ ದತ್ತಾಂಶಗಳ ಆಧಾರದ ಮೇಲೆ ಸೂಕ್ತ ಬದಲಾವಣೆ ಮಾಡಬಹುದು.

ಯಾವ ಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗಿಡದೇ ಎಲ್ಲರಿಗೂ ನ್ಯಾಯ ದೊರಕಿಸಬೇಕು. ಮಾದಿಗರು ಇಲ್ಲದ ಊರಿಲ್ಲ ಎಂಬುದು ಎಲ್ಲರೂ ತಿಳಿದಿರುವ ಸತ್ಯವಾಗಿದ್ದು ಮಾದಿಗರು ಬಹುಸಂಖ್ಯಾತರು ಎಂಬುದು ತಿಳಿಯುತ್ತದೆ. ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಮಾದಿಗರಿಗೆ ಅನ್ಯಾಯವಾಗಿರುವುದು ಕನ್ನಡಿಯಲ್ಲಿ ಕಾಣುವಷ್ಟೇ ಸತ್ಯವಾಗಿದೆ. ಆದ್ದರಿಂದ ಈ ಆಯೋಗಗಳ ಶಿಫಾರಸ್ಸಿನಂತೆ ಮಾದಿಗರಿಗೆ ಶೇ.6ರಷ್ಟು ಮೀಸಲಾತಿ ನೀಡುವುದು.

ಅಸ್ಪೃಶ್ಯರ ಐಕ್ಯತೆ ಹಾಗೂ ಪರಿಶಿಷ್ಟ ಜಾತಿಗಳ ಅಂತಃಕಲಹಗಳಿಗೆ ತೆರೆ ಎಳೆದು ತಮ್ಮ ಸಮುದಾಯಗಳ ಅಭಿವೃದ್ಧಿ ಕಡೆಗೆ ಚಿಂತನೆ ಮಾಡಲು ನಾಯ್ಯಯುತ ಸಂವಿಧಾನ ಬದ್ಧ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಮನವಿ ಮಾಡಿದರು.