ಸಾಂಕ್ರಾಮಿಕ ರೋಗ: ನಿರ್ಲಕ್ಷ್ಯ ವಹಿಸಿದರೆ ಕ್ರಿಮಿನಲ್‌ ಕೇಸ್‌: ಡಿಸಿ

| Published : Jun 01 2024, 12:46 AM IST

ಸಾಂಕ್ರಾಮಿಕ ರೋಗ: ನಿರ್ಲಕ್ಷ್ಯ ವಹಿಸಿದರೆ ಕ್ರಿಮಿನಲ್‌ ಕೇಸ್‌: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ನಿರ್ಲಕ್ಷ್ಯದಿಂದ ರೋಗ-ರುಜಿನ ಹೆಚ್ಚಿದರೆ ಅಧಿಕಾರಿಯನ್ನೇ ಹೊಣೆ ನಾಡಿ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಜನವರಿಯಿಂದ ಏಪ್ರಿಲ್‌ ವರೆಗೆ 451 ವಾಂತಿಬೇಧಿ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.

ಧಾರವಾಡ:

ಮಳೆಗಾಲ ಆರಂಭವಾಗುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಇತರ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯದಿಂದ ರೋಗ-ರುಜಿನ ಹೆಚ್ಚಿದರೆ ಅಧಿಕಾರಿಯನ್ನೇ ಹೊಣೆ ನಾಡಿ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನವರಿಯಿಂದ ಏಪ್ರಿಲ್‌ ವರೆಗೆ 451 ವಾಂತಿಬೇಧಿ ಪ್ರಕರಣ ವರದಿಯಾಗಿವೆ ಎಂದು ಜಿಲ್ಲಾಧಿಕಾರಿ, ಕುಡಿಯುವ ನೀರು ಕಲುಷಿತ ಆಗದಂತೆ ಎಚ್ಚರ ವಹಿಸಬೇಕು. ಕಾಲಕಾಲಕ್ಕೆ ಕುಡಿಯುವ ನೀರು ಸರಬರಾಜು ಆರಂಭ ಮತ್ತು ಬಳಕೆಯ ಕೊನೆಯ ಸ್ಥಳದಲ್ಲಿ ಪ್ರೋಟೋಕಾಲ್ ಪ್ರಕಾರ ಪರೀಕ್ಷೆ ಮಾಡಬೇಕು. ಇದಕ್ಕೆ ಆರೋಗ್ಯ ಇಲಾಖೆಗೆ ಸ್ಥಳೀಯ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು. ನಗರ ಹಾಗೂ ಗ್ರಾಮಗಳಲ್ಲಿ ಇರುವ ಎಲ್ಲ ನೀರಿನ ಟ್ಯಾಂಕ್‍ಗಳನ್ನು ಮಳೆಗಾಲ ಪೂರ್ವದಲ್ಲಿ ಸ್ವಚ್ಛಗೊಳಿಸಿ. ಸಣ್ಣಪುಟ್ಟ ದುರಸ್ತಿಗಳಿದ್ದರೆ ಮಾಡಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 52 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಇಲ್ಲಿ ಪ್ರೋಟೋಕಾಲ್ ಪ್ರಕಾರ ಕುಡಿಯುವ ನೀರಿನ ಪರೀಕ್ಷೆ ಮಾಡಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲೂ ಕುಡಿಯುವ ನೀರಿನ ಪರೀಕ್ಷಿಸಲಾಗುತ್ತಿದೆ ಎಂದರು.

ಪ್ರವಾಹ ಸಂಭವನೀಯ ಪ್ರದೇಶ ಗುರುತಿಸಿ, ಪಟ್ಟಿ ಮಾಡಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಪ್ರವಾಹ ಕಾಲದಲ್ಲಿ ಮತ್ತು ನಂತರ ಉಂಟಾಗಬಹುದಾದ ಅತಿಸಾರ ಭೇದಿ ಮತ್ತು ಕಾಲರಾ, ಕರಳುಬೇನೆ ಪ್ರಕರಣ ಗುರುತಿಸಲು ಮತ್ತು ನಿಯಂತ್ರಿಸಲು ಕ್ರಮವಹಿಸಬೇಕು ಎಂದು ಹೇಳಿದರು.

ಶುದ್ಧ ಕುಡಿಯುವ ನೀರು ಹಾಗೂ ಸಮರ್ಪಕ ನೈರ್ಮಲ್ಯ ನಿರ್ವಹಣೆಯಲ್ಲಿ ಅಗತ್ಯವಿರುವ ದುರಸ್ತಿ ಕಾರ್ಯಗಳನ್ನು ಪೂರ್ವಭಾವಿಯಾಗಿ ಮಾಡಬೇಕು. ನೀರು ಕಲುಷಿತ ಆಗದಂತೆ ಸೋರುವಿಕೆ ಗುರುತಿಸಿ, ತಕ್ಷಣ ದುರಸ್ತಿಗೊಳಿಸುವುದು ಗ್ರಾಪಂ ಮತ್ತು ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಯ ಕರ್ತವ್ಯ. ಯಾವುದೇ ರೋಗ ಕಂಡುಬಂದಲ್ಲಿ, ಪರಿಸ್ಥಿತಿ ಹತೋಟಿಗೆ ಬರುವವರೆಗೆ ಶುದ್ಧೀಕರಿಸಿದ ನೀರಿನ ಟ್ಯಾಂಕರ್‌ ಮೂಲಕ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ., ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಆರ್‌ಸಿಎಚ್‌ಒ ಅಧಿಕಾರಿ ಡಾ. ಸುಜಾತಾ ಹಸವಿಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ.ಎಸ್., ಸೇರಿದಂತೆ ಹಲವರಿದ್ದರು.ಶ್ವಾನ ದತ್ತು ಯೋಜನೆ ಜಾರಿಗೊಳಿಸಿ

ಮಹಾನಗರದಲ್ಲಿ ಬೀದಿ ನಾಯಿಗಳು ಹೆಚ್ಚಾಗಿವೆ. ಕಚ್ಚಿದ ಪ್ರಕರಣಗಳು ಸಾಕಷ್ಟಿವೆ. ಇದನ್ನು ಪಾಲಿಕೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಬೇಕು. ಶ್ವಾನ ಪಾಲನಾ ಕೇಂದ್ರಗಳಿಗೆ ನೀಡಬೇಕು. ಶ್ವಾನ ದತ್ತು ಯೋಜನೆ ಮೂಲಕ ಅಗತ್ಯವಿರುವ ನಾಗರಿಕರಿಗೆ ನಾಯಿ ಮರಿ ಸಾಕಲು ಉಚಿತವಾಗಿ ನೀಡಬೇಕು. 3 ತಿಂಗಳಲ್ಲಿ ಈ ಕುರಿತು ಕೈಗೊಂಡ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.