ಸಮಾನತೆ ತತ್ವ ಸಾರಿದ ಬಸವಣ್ಣ: ವಕೀಲ ಕರುಣಾನಿಧಿ

| Published : May 12 2024, 01:20 AM IST

ಸಾರಾಂಶ

ಸಮಾನತೆಗಾಗಿ ಬಸವಣ್ಣನವರ ಕಾಲದಲ್ಲಿ ದಾಸೋಹ ಎಂದರೆ ಹಂಚಿಕೆ ಅದು ವ್ಯಕ್ತಿಯ ಬದ್ಧತೆಯಾಗಬೇಕೆಂಬುದು ಅವರ ಬಯಕೆಯಾಗಿತ್ತು.

ಹೊಸಪೇಟೆ: ಜಗಜ್ಯೋತಿ ಬಸವಣ್ಣನವರು ಕಾಯಕ ತತ್ವದ ಮೂಲಕ ಸಮಾಜದಲ್ಲಿ ಸಮಾನತೆ ಸಾರಿ, ಜಾತಿ ವ್ಯವಸ್ಥೆ ತೊಡೆದು ಹಾಕಲು ಶ್ರಮಿಸಿದರು ಎಂದು ಸಮುದಾಯ ಸಂಚಾಲಕ ಎ.ಕರುಣಾನಿಧಿ ಹೇಳಿದರು.ಬಸವ ಜಯಂತಿ ಪ್ರಯುಕ್ತ ಸಮುದಾಯ ಕರ್ನಾಟಕ ಹೊಸಪೇಟೆಯಿಂದ ಕಾಯಕ ತತ್ವ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್ ಬಂಡವಾಳದಾರರು ದುಡಿಮೆಯ ದೋಚುವಿಕೆ ಕುರಿತು ತಿಳಿ ಹೇಳಿದರು. ಇದನ್ನು ತಡೆಯಲು ಉತ್ಪಾದನಾ ಸಾಧನಗಳ ಒಡೆತನವನ್ನು ಸಾಮಾಜೀಕರಣ ಮಾಡುವ ಮೂಲಕ ಸಮಾಜವಾದಿ ವ್ಯವಸ್ಥೆಯ ಮೂಲಕ ಸಾಧ್ಯವಾಗಿದೆ ಎಂದರು.

ಸಮಾನತೆಗಾಗಿ ಬಸವಣ್ಣನವರ ಕಾಲದಲ್ಲಿ ದಾಸೋಹ ಎಂದರೆ ಹಂಚಿಕೆ ಅದು ವ್ಯಕ್ತಿಯ ಬದ್ಧತೆಯಾಗಬೇಕೆಂಬುದು ಅವರ ಬಯಕೆಯಾಗಿತ್ತು. ಆದರೆ ಮಾರ್ಕ್ಸ್ ದುಡಿಮೆಯ ಸಮಾನ ಹಂಚಿಕೆಗಾಗಿ ರಾಜಕೀಯ ಪರ್ಯಾಯವನ್ನು ಕಟ್ಟಿಕೊಟ್ಟಿದ್ದಾರೆ. ಸಮಾಜವಾದಿ ಸಮಾಜದ ಪರಿಕಲ್ಪನೆ ಬಸವಣ್ಣನವರ ದಾಸೋಹದ ಮುಂದುವರಿಕೆಯಾಗಿದೆ ಎಂದರು.

ಇತಿಹಾಸದುದ್ದಕ್ಕೂ ಕಾಯಕ ಎನ್ನುವುದು ಉಲ್ಲೇಖಿತವಾಗಿದೆಯಾದರೂ ಕಾಲ ಸಂದರ್ಭಗಳ ಬದಲಾವಣೆಯಲ್ಲಿ ಅದನ್ನು ಬೇರೆ ಬೇರೆ ರೀತಿಯಲ್ಲಿ ನಿರ್ವಚಿಸಲಾಗಿದೆ. ವೇದಗಳ ಕಾಲದಲ್ಲಿ ಕರ್ಮಣ್ಯೇವಾಧಿಕಾರಸ್ಥೆ ಎಂದು ಕಾಯಕವನ್ನು ಮಾಡುವುದಕ್ಕಷ್ಟೇ ಸೀಮಿತಗೊಳಿಸಿ ಅದರ ಪ್ರತಿಫಲವನ್ನು ನಿರಾಕರಿಸಿದ್ದರು ಮತ್ತು ಸಮಾಜವನ್ನು ಶ್ರೇಣೀಕರಿಸಿದ್ದರು. ಆದರೆ ಬಸವಣ್ಣನವರು ಕಾಯಕ ತತ್ತ್ವದ ಮೂಲಕ ಸಮಾನತೆ ಸಾರಿದರು ಎಂದರು.

ಸಾಹಿತಿ ಭಾರತಿ ಮೂಲಿಮನಿ ಮಾತನಾಡಿ, ಬಸವಣ್ಣನವರ ಕಾಯಕ ತತ್ವದಲ್ಲಿ ಗುಡಿ ಕೈಗಾರಿಕೆಗಳು, ಕುಶಲಕರ್ಮಿಗಳಿದ್ದರು, ಅಲ್ಲಿ ಸೃಜನಶೀಲತೆ ಇತ್ತು. ಆದರೆ ತಂತ್ರಜ್ಞಾನದ ಪರಿಣಾಮ ಹಾಗೂ ಆಧುನಿಕತೆಯಿಂದಾಗಿ ಇಂದು ಅವೆಲ್ಲ ಕಳೆದುಕೊಂಡಿದ್ದೇವೆ. ಈಗ ದಾಸೋಹ ಪರಿಕಲ್ಪನೆಯನ್ನು ಯಾರು ಪಾಲಿಸುತ್ತಿಲ್ಲ ಎಂದು ವಿಷಾದಿಸಿದರು.

ವಿಚಾರವಾದಿ ಸೌಭಾಗ್ಯ ಲಕ್ಷ್ಮಿ ಮಾತನಾಡಿ, ಕಾಯವನ್ನು ದಂಡಿಸಿ ದುಡಿಯುವುದೇ ಕಾಯಕ ಎಂದರಲ್ಲದೇ ದಾಸೋಹ ಅಂದಿನ ಕಾಲದಲ್ಲಿ ಜನರ ಬದ್ದತೆಯಾಗಿತ್ತು ಎಂದರು.

ವಕೀಲರ ಸಂಘದ ಖಜಾಂಚಿ ಎ.ಮರಿಯಪ್ಪ ಮಾತನಾಡಿದರು. ವೇದಿಕೆಯಲ್ಲಿ ವಕೀಲ ಬಸವರಾಜ್ ಕೋರವರ, ಕನ್ನಡ ವಿವಿಯ ಚಲುವರಾಜ, ಜಂಬಯ್ಯ ನಾಯಕ, ಎಲ್. ಮಂಜುನಾಥ, ಕಿಚಡಿ ಚೆನ್ನಪ್ಪ, ಸ್ವಪ್ನಾ, ಬಿಸಾಟಿ ಮಹೇಶ್, ಉಮಾಮಹೇಶ್ವರ, ಪವನ್ ಮತ್ತಿತರರಿದ್ದರು.