ವೆಬ್‌ ಕಾಸ್ಟಿಂಗ್‌ ಕಣ್ಗಾವಲಿಗೆ ನಲುಗಿದ ಎಸ್ಸೆಸ್ಸೆಲ್ಸಿ ಫಲಿತಾಂಶ

| Published : May 12 2024, 01:20 AM IST

ವೆಬ್‌ ಕಾಸ್ಟಿಂಗ್‌ ಕಣ್ಗಾವಲಿಗೆ ನಲುಗಿದ ಎಸ್ಸೆಸ್ಸೆಲ್ಸಿ ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷಾ ಕೋಣೆಗಳಲ್ಲಿನ ಸಿಸಿಟೀವಿ ಕೆಮೆರಾ, ವೆಬ್‌ ಕ್ಯಾಸ್ಟಿಂಗ್‌ ಕಾವಲು ಹಾಕಿರೋದರಿಂದ ಕೋಣೆಗಳಲ್ಲಿನ ಆಗು ಹೋಗುಗಳೆಲ್ಲದರ ಮೇಲೆ ಕಾವಲು ಇಡಲಾಗಿತ್ತು. ಫಲಿತಾಂಶದಲ್ಲಿನ ಕುಸಿತಕ್ಕಿರುವ ಕಾರಣಗಳಲ್ಲಿ ಇದೇ ಪ್ರಮುಖವಾದ ಸಂಗತಿ ಎಂದು ಹೇಳಲಾಗುತ್ತಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣದ ಜಿಲ್ಲೆಗಳಲ್ಲಿ ಪ್ರಸಕ್ತ ಎಸ್ಸೆಸ್ಸೆಲ್ಸಿ ಫಲಿತಾಂಶ ದಿಢೀರನೆ ಕುಸಿದು ಉಂಟಾಗಿರುವ ಬೆಳವಣಿಗೆ ಶಾಲಾ ಶಿಕ್ಷಣ ಇಲಾಖೆಗೇ ಸವಾಲಾಗಿ ಪರಿಣಮಿಸಿದೆ.

ಫಲಿತಾಂಶ ಕುಸಿತಕ್ಕೇನು ಕಾರಣವೆಂಬ ಚರ್ಚೆಗಳ ನಡುವೆಯೇ ಈ ಬಾರಿ ನಕಲು ತಡೆ, ಪಾರದರ್ಶಕ ಪರೀಕ್ಷೆಗಾಗಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಫಲ ನೀಡಿದ್ದರಿಂದಲೇ ಫಲಿತಾಂಶ ಹೇರಾಫೇರಿ ಆಗಿರೋದು ಎಂಬಂಶ ಎಲ್ಲರ ಗಮನಕ್ಕೆ ಬಂದಿದೆ.

ಇಲಾಖೆ ಪರೀಕ್ಷಾ ಕೋಣೆಗಳಲ್ಲಿನ ಸಿಸಿಟೀವಿ ಕೆಮೆರಾ, ವೆಬ್‌ ಕ್ಯಾಸ್ಟಿಂಗ್‌ ಕಾವಲು ಹಾಕಿರೋದರಿಂದ ಕೋಣೆಗಳಲ್ಲಿನ ಆಗು ಹೋಗುಗಳೆಲ್ಲದರ ಮೇಲೆ ಕಾವಲು ಇಡಲಾಗಿತ್ತು. ಫಲಿತಾಂಶದಲ್ಲಿನ ಕುಸಿತಕ್ಕಿರುವ ಕಾರಣಗಳಲ್ಲಿ ಇದೇ ಪ್ರಮುಖವಾದ ಸಂಗತಿ ಎಂದು ಹೇಳಲಾಗುತ್ತಿದೆ.

ಹಾಗಾದರೆ ಇಲ್ಲಿಯವರೆಗೂ ಇಲ್ಲಿನ ಪರೀಕ್ಷಾ ಕೋಣೆಗಳಲ್ಲಿ ನಡೆಯುತ್ತಿರುವ ಯಾವ ವಿದ್ಯಮಾನಗಳ ಮೇಲೂ ಇಲಾಖೆಯ ಹಿಡಿತವಿರಲಿಲ್ಲ, ಅಲ್ಲಿನ ಸಾಮೂಹಿಕ ನಕಲೇ ಪರೀಕ್ಷಾ ಫಲಿತಾಂಶ ನಿರ್ಧರಿಸುತ್ತಿತ್ತೆ? ಇದೇ ಕಾರಣಕ್ಕಾಗಿಯೇ ಜಿಲ್ಲೆಯ ಸರಾಸರಿ ಫಲಿತಾಂಶ ನಿರ್ಧಾರವಾಗುತ್ತಿತ್ತೆ? ಕಟ್ಟುನಿಟ್ಟಿನ ಕ್ರಮಗಳು ಕೈಗೊಳ್ಳಲಾಗುತ್ತಿದೆ ಎಂದ ಹೇಳುತ್ತಲೇ ಸಾಮೂಹಿಕ ನಕಲು ನಿಯಂತ್ರಿಸಲು ಇಲಾಖೆ ವಿಫಲವಾಯ್ತೆ? ಹಾಗಾದರೆ ಆಯುಕ್ತಾಲಯ, ಶಿಕ್ಷಣ ಇಲಾಖೆ, ಡಿಡಿಪಿಐ, ಬಿಇಓ ಕಚೇರಿಗಳು ಸೇರಿದಂತಿರುವ ವ್ಯವಸ್ಥೆ ನಕಲು ನಿಯಂತ್ರಿಸುವಲ್ಲಿ ಎಡವಿತೆ? ಎಂಬಿತ್ಯಾದಿ ಸಂಗತಿಗಳು ಉತ್ತರ ಸಿಗದ ಪ್ರಶ್ನೆಗಳಾಗಿ ಕಾಡುತ್ತಿವೆ.

ರಾಜ್ಯ ರ್‍ಯಾಂಕಿಂಗ್‌ನಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣದ ಜಿಲ್ಲೆಗಳು ಕೊನೆ ಸ್ಥಾನಕ್ಕೆ ದೂಡಲ್ಪಟ್ಟಿರೋದು ಆತಂಕ ಮೂಡಿಸಿದೆ, ಜೊತೆಗೇ ಶಿಕ್ಷಣ ರಂಗದಲ್ಲಿ ಏನು ಮಾಡಿದರೆ ಸುಧಾರಣೆ ಸಾಧ್ಯ ವೆಂಬ ಚರ್ಚೆಗೂ ಮುನ್ನುಡಿ ಬರೆದಿವೆ. ಪರೀಕ್ಷೆ ಕೇಂದ್ರ ಪಡೆದುಕೊಂಡಿರುವ ಶಾಲೆಗಳವರು ಯಾವ ಕಾಣಕ್ಕೂ ತಮ್ಮಲ್ಲಿನ ಫಲಿತಾಂಶ ಕಮ್ಮಿಯಾಗಲು ಬಿಡಬಾರದೆಂದು ಪರೀಕ್ಷಾ ಅಕ್ರಮಗಳಿಗೆ ನೀಡುವ ಪ್ರೋತ್ಸಾಹವೂ ಗುಟ್ಟೇನಲ್ಲ. ವೆಬ್‌ ಕಾಸ್ಟಿಂಗ್‌, ಸೀಸಿ ಕ್ಯಾಮೆರಾಗಳಿಂದಾಗಿ ಇವೆಲ್ಲದಕ್ಕೂ ಬ್ರೆಕ್‌ ಬಿದ್ದಿರೋದರಿಂದ ಟೊಳ್ಳು, ಗಟ್ಟಿ ನ್ಯಾಯವಾಗಿದೆ ಎಂದು ಹೇಳಲಾಗುತ್ತಿದೆ.

ಶಾಲಾ ಶಿಕ್ಷಣದಲ್ಲಿ ಹೈಸ್ಕೂಲ್‌ ಶಿಕ್ಷಣ ಮಹತ್ವದ್ದು, ಕಲ್ಯಾಣದಲ್ಲಿ ಈ ಹಂತದಲ್ಲೇ ಜೊಳ್ಳು, ಕಳಪೆತನ ಕಾಡಿದರೆ ಮುಂದೇನು? ಎಂಬ ಪ್ರಶ್ನೆ ಮೂಡಿದೆ. ಅದಕ್ಕಾಗಿಯೋ ಶಾಲಾ ಶಿಕ್ಷಣ ಇಲಾಖೆ ಕುಸಿದ ಫಲಿತಾಂಶವನ್ನ ಎಚ್ಚರಿಕೆ ಗಂಟೆಯಾಗಿ ಸ್ವೀರಿಸಿ ಹೊಸತನದೊಂದಿಗೆ ಅದರ ಪರಿಹಾರಕ್ಕೆ ಮುಂದಾಗಬೇಕಿದೆ.

ಸಾಮೂಹಿಕ ನಕಲು ತಡೆ ಹಾಗೂ ಪಾರದರ್ಶಕ ಪರೀಕ್ಷೆಗಾಗಿ ಇದೇ ಮೊದಲ ಬಾರಿಗೆ ಪರೀಕ್ಷಾ ಕೋಣೆಗಳಲ್ಲಿ ಸಿಸಿಟೀವಿ ಕ್ಯಾಮೆರಾ ಇಡಲಾಗಿತ್ತು, ವೆಬ್ ಕಾಸ್ಟಿಂಗ್‌ ಮೂಲಕ ನಿಗಾ ಇಡಲಾಗಿತ್ತು. ಈ ಉಪಕ್ರಮ ಯಶಸ್ವಿಯಾಗಿರೋದರಿಂದಲೇ ಸಾಮೂಹಿಕ ನಕಲಿಗೆ ಬ್ರೆಕ್‌ ಬಿತ್ತಲ್ಲದೆ ಜೊಳ್ಳು ಹಾರಿಹೋಗಿ ಗಟ್ಟಿಕಾಳುಗಳೇ ಪರೀಕ್ಷೆಯಲ್ಲಿ ಪಾಸಾಗಿರೋದು ಎಂಬ ಮಾತುಗಳು ಕೇಳಿಬರುತ್ತಿವೆ. ಹೈಸ್ಕೂಲ್ ಶಿಕ್ಷಣದಲ್ಲಿ ಸುದಾರಣೆಯಾಗಬೇಕು, ಅದಕ್ಕಾಗಿ ಅಮೂಲಾಗ್ರ ಕ್ರಮಗಳಿಗೆ ಇಲಾಖೆ ಮುಂದಾಗಬೇಕು ಎಂಬ ಅಗತ್ಯವನ್ನ ಈ ಫಲಿತಾಂಶ ಒತ್ತಿ ಹೇಳಿದೆ. 10ನೇ ತರಗತಿಗೆ ಬಂದಾಕ್ಷಣ ಹೆಚ್ಚಿನ ಅಂಕಗಳಿಗಾಗಿ ಮಕ್ಕಳ ಮೇಲೆ ಒತ್ತಡ ಹೇರದೆ, ಅ‍ರನ್ನು ಹೈಸ್ಕೂಲ್‌ ಶಿಕ್ಷಣ ಶುರುವಾಗುವ 8 ನೇ ತರಗತಿಯಿಂದಲೇ ಅವರಲ್ಲಿನ ಕಲಿಕಾ ಕೊರತೆಗಳನ್ನು ಗುರುತಿಸಿ ಪರಿಹರಕ್ಕೆ ಮುಂದಾಗೋ ಜರೂರತ್ತು ಹಿದಿಗಿಂತಲೂ ಇಂದು ಹೆಚ್ಚಾಗಿದೆ. ಅನೇಕ ವಲಯಗಳಲ್ಲಿರುವ ಶಾಲೆಗಳಲ್ಲಿರೋ ಶಿಕ್ಷಕರಂದ ಸರಿಯಾದಂತಹ ಬೋಧನೆ ಇನ್ನು ಗಗನ ಕುಸುಮವಾಗಿದೆ, ಇಂತಹ ಅಪಸವ್ಯಗಳನ್ನೆಲ್ಲ ಗುರುತಿಸಿ ಶಾಲಾ ಶಿಕ್ಷಣ ಇಲಾಖೆ, ಇಲ್ಲಿರುವ ಅಪರ ಆಯುಕ್ತಾಲಯ ಸುಧಾರಣೆಗೆ ಮುಂದಾಗುವುದೆ? ಎಂಬುದನ್ನ ಕಾದು ನೋಡಬೇಕಿದೆ.

ಅಕ್ಷರ ಮಿತ್ರರಿದ್ದರೂ ಅನುಭವಿ ಶಿಕ್ಷಕರ ಬರ ಕಾಡಿತ್ತು!

ಕಲ್ಯಾಣದ ಜಿಲ್ಲೆಗಳಲ್ಲಿನ ಶಿಕ್ಷರ ಕೊರತೆ ನೀಗಿಸಲು ಕೆಕೆಆರ್‌ಡಿಬಿ ಅಕ್ಷರ ಅವಿಷ್ಕಾರ ಯೋಜನೆಯಲ್ಲೇ 18 ಕೋಟಿ ರು. ವೆಚ್ಚ ಮಾಡಿ ನೂರಾರು ಅಕ್ಷರ ಮಿತ್ರ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆಗೆ ಅವಕಾಶ ನೀಡಿತ್ತು. ಅದರಂತೆ ಖಾಲಿ ಶಿಕ್ಷರ ಕೊರತೆ ನೀಗಿದ್ದರೂ ಅನುಭವಿ ಶಿಕ್ಷಕರ ಬರ ಮಾತ್ರ ಹಾಗೇ ಇತ್ತು. ಕಲಬುರಗಿ ವಿಭಾಗದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ 2,504 ಶಿಕ್ಷಕರು ಬೇರೆ ವಿಭಾಗಗಳಿಗೆ ವರ್ಗವಾಗಿ ಹೋದರು. ಅದಕ್ಕೆ ಪ್ರತಿಯಾಗಿ ಮೂರಂಕಿಯಷ್ಟೇ ಶಕಿಕ್ಷಕರು ಮಱಲಿದರು. ಇದರಿಂದಾಗಿ ನುರಿತ ಶಿಕ್ಷಕರ ಪಾಠ ಪ್ರವಚನದಿಂದ ಇಲ್ಲಿನ ಮಕ್ಕಳು ವಂಚಿತರಾಗಿದ್ದು ಕೂಡಾ ಫಲಿತಾಶ ಕುಸಿತಕ್ಕೆ ಕಾರಣವೆನ್ನಲಾಗುತ್ತಿದೆ.

ಕಲ್ಯಾಣ ನಾಡಿನ 7 ಜಿಲ್ಲೆಗಳ ಪೈಕಿ ಪಂಚ ಜಿಲ್ಲೆಗಳ ಫಲಿತಾಂಶ ರಾಜ್ಯ ರ್‍ಯಾಂಕಿಂಗ್‌ನಲ್ಲಿ 30 ರ ಗಡಿ ದಾಟಿ ಗಮನ ಸೆಳೆದಿದೆ. ಯಾದಗಿರಿ, ಕಲಬುರಗಿ, ಬೀದರ್‌, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳು ಎಸ್ಸೆಸ್ಸೆಲ್ಸಿ ರಾಜ್ಯ ರ್‍ಯಾಂಕಿಂಗ್‌ನಲ್ಲಿ ಕ್ರಮವಾಗಿ 35, 34, 33, 32 ಹಾಗೂ 31ನೇ ಸ್ಥಾನಕ್ಕೆ ತೃಪ್ತಿ ಪಟ್ಟಿವೆ. ಸಮಧಾನದ ಸಂಗತಿ ಎಂದರೆ ಕಲ್ಯಾಣದ ಬಳ್ಳಾರಿ ಹಾಗೂ ವಿಜಯ ನಗರ ಜಿಲ್ಲೆಗಳು ಎಸ್ಸೆಸ್ಸೆಲ್ಸಿಯಲ್ಲಿ ಕ್ರಮವಾಗಿ 28 ಹಾಗೂ 27ನೇ ಸ್ಥಾನದಲ್ಲಿ ಕಾಣಿಸಿಕೊಂಡಿವೆ.

ಶೂನ್ಯ ಸಾಧನೆ ಶಾಲೆಗಳಲ್ಲಿಯೂ ಸಿಂಹಪಾಲು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಕಾರ ಕಲಬರಗಿ ವಿಭಾಗದಲ್ಲಿ ಒಟ್ಟು 43 ಶಾಲೆಗಳು ಎಸ್ಸೆಸ್ಸೆಲ್ಸಿಯಲ್ಲಿ ಶೂನ್ಯ ಸಾಧನೆ ಮಾಡಿವೆ.ರಾಜ್ಯದಲ್ಲಿ ಒಟ್ಟು 78 ಶಾಲೆಗಳು ಶೂನ್ಯ ಸಾಧನೆ ಪಟ್ಟಿಯಲ್ಲಿದ್ದರೆ, ಈ ಪೈಕಿ ಕಲಬರಗಿ ಸೇರಿದಂತೆ ಕಲ್ಯಾಣದ ಜಿಲ್ಲೆಗಳದ್ದೇ ಸಿಂಹಪಾಲು, ಕಲಬುರಗಿ ಜಿಲ್ಲೆಯಲ್ಲೇ ಅತ್ಯಧಿಕ 18, ಬೀದರ್‌ನಲ್ಲಿ 9, ಯಾದಗಿರಿಯಲ್ಲಿ 6 , ರಾಯಚೂರಲ್ಲಿ 5, ಕೊಪ್ಪಳ, ವಿಜಯನಗರ ತಲಾ 2 ಹಗೂ ಬಳ್ಳಾರಿಯಲ್ಲಿ 1 ಶಾಲೆಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.