ಎರ್ಮಾಳು: ಸ್ವಾತಂತ್ರ್ಯ ಯೋಧರ ಮನೆಯ ನಾಮಫಲಕ ಅನಾವರಣ

| Published : Aug 19 2024, 12:55 AM IST

ಸಾರಾಂಶ

ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರ ಎರ್ಮಾಳು ರಾಮಪ್ಪ ಜಿ. ಸಾಲ್ಯಾನ್‌ ಅವರ ಮನೆಯಲ್ಲಿ ಅವರ ಗೌರವಾರ್ಥ ಅವರ ಹೆಸರಿನ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾಪು

ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರ ಎರ್ಮಾಳು ರಾಮಪ್ಪ ಜಿ. ಸಾಲ್ಯಾನ್‌ ಅವರ ಮನೆಯಲ್ಲಿ ಅವರ ಗೌರವಾರ್ಥ ಅವರ ಹೆಸರಿನ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಿತು.ಪತ್ರಕರ್ತ ಚೇತನ್ ಶೆಟ್ಟಿ, ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ ನಾಮಫಲಕ ಅನಾವರಣ ಮಾಡಿದರು.ಅದಮಾರಿನ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹಸ್ತಚಿತ್ರ ಫೌಂಡೇಶನ್ ವಕ್ವಾಡಿ, ಸ್ವರಾಜ್ಯ 75, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕ, ಎರ್ಮಾಳು ಬಡಾ ಮೊಗವೀರ ಸಭಾ ಸಂಘಟನೆಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯರ ಕೊಡುಗೆಯೊಂದಿಗೆ ಎರ್ಮಾಳು ರಾಮಪ್ಪ ಜಿ. ಸಾಲ್ಯಾನ್ ಅವರ ಸ್ವಾತಂತ್ರ್ಯಹೋರಾಟದ ವಿಚಾರದ ಕುರಿತು ಕವಿತಾ ಆಚಾರ್ಯ ಮುದೂರು ಉಪನ್ಯಾಸಗೈದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಚ್ಚಿಲ ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ್ ಮೆಂಡನ್ ವಹಿಸಿದ್ದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಮರಾಠೆ, ಅದಮಾರು ಕಾಲೇಜು ಪ್ರಾಂಶುಪಾಲ ಸಂಜೀವ ನಾಯ್ಕ, ಉಪನ್ಯಾಸಕ ಡಾ. ಜಯಶಂಕರ ಕಂಗಣ್ಣಾರು, ಮೊಗವೀರ ಮುಖಂಡ ಲಕ್ಷ್ಮಣ ಸುವರ್ಣ, ಶಾರದಾ ಎರ್ಮಾಳು, ಸ್ವರಾಜ್ಯ 75 ಸಂಚಾಲಕ ಪ್ರದೀಪ್ ಕುಮಾರ್ ಬಸ್ರೂರು ಉಪಸ್ಥಿತರಿದ್ದರು.ಸ್ವಾತಂತ್ರ್ಯ ಹೋರಾಟಗಾರ ಎರ್ಮಾಳು ರಾಮಪ್ಪ ಜಿ. ಸಾಲ್ಯಾನ್ ಕುಟುಂಬಸ್ಥರು, ಉಪನ್ಯಾಸಕ ದೇವಿಪ್ರಸಾದ್ ಬೆಳ್ಳಿಬೆಟ್ಟು, ಕೇಶವ ಮೊಯ್ಲಿ, ಶಿಕ್ಷಕ ಬಾಬುರಾಯ ಆಚಾರ್ಯ, ಬಡಾ ಗ್ರಾಮ ಪಂಚಾಯಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಮನೀಷ್ ಸ್ವಾಗತಿಸಿದರು. ಪ್ರೀಶ ನಿರೂಪಿಸಿದರು. ಹರ್ಷಿತಾ ವಂದಿಸಿದರು.