ಸಾರಾಂಶ
ಕುರುಗೋಡು: ಸುಮಾರು ವರ್ಷಗಳಿಂದ ಸರ್ಕಾರಿ ಜಮೀನುಗಳನ್ನು ಪಟ್ಟಣದರೈತರು ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನುಗಳಲ್ಲಿ ರೈತರ ಗಮನಕ್ಕೆ ತರದೇ ತಹಸೀಲ್ದಾರ್ ಹಾಗೂ ಬಳ್ಳಾರಿ ನೀರು ಮತ್ತು ಒಳಚರಂಡಿ ಇಲಾಖೆ ಅಧಿಕಾರಿಗಳ ಆದೇಶದ ಮೇರೆಗೆಕಂದಾಯ ಇಲಾಖೆ ಅಧಿಕಾರಿಗಳು ಮಣ್ಣು ಪರೀಕ್ಷೆಗೆ ಮುಂದಾಗಿದ್ದು ಪರೀಕ್ಷೆಗೆ ಒಳಪಡಿಸದ ಅಧಿಕಾರಿಗಳ ವಿರುದ್ಧ ರೈತರು ಹಾಗೂ ವಿವಿಧ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರಾಂತರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗಾಳಿ ಬಸವರಾಜ್ ಮಾತನಾಡಿ, ಮೇಲಧಿಕಾರಿಗಳ ಒತ್ತಡದಿಂದ ಕಂದಾಯ ಇಲಾಖೆ ಅಧಿಕಾರಿಗಳು ನಮ್ಮ ಗಮನಕ್ಕೆ ತರದೇ ಏಕಾಏಕಿ ಸಾಗುವಳಿ ಮಾಡುವ ಭೂಮಿಗಳಲ್ಲಿ ಮಣ್ಣು ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.ರೈತರು ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿರುವಾಗ ಅಧಿಕಾರಿಗಳು ಮಣ್ಣು ಪರೀಕ್ಷೆಗೆ ಬಂದಿರುವ ವಿಷಯ ಕೇಳಿ ಕೂಡಲೇ ಜಮೀನುಗಳಿಗೆ ಹೋಗಿ ಮಣ್ಣು ಪರೀಕ್ಷೆ ಮಾಡುವುದನ್ನು ತಡೆ ಹಿಡಿದಿದ್ದೇವೆ. ನಮ್ಮ ಒಪ್ಪಿಗೆ ಇಲ್ಲದೇ ಹೇಗೆ ಮಣ್ಣು ಪರೀಕ್ಷೆ ಮಾಡುತ್ತೀರಿ? ಮಣ್ಣು ಪರೀಕ್ಷೆ ಮಾಡಲು ನಾವು ಬಿಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಸ್ಥಳಕ್ಕೆ ಸಿಪಿಐ ವಿಶ್ವನಾಥ್ ಹಿರೇಗೌಡ ಹಾಗೂ ಭೇಟಿ ನೀಡಿ ಮಣ್ಣು ಪರೀಕ್ಷೆಗೆ ಅಡ್ಡವಾಗಿದ್ದ ರೈತರನ್ನು ತಡೆಯಲು ಪ್ರಯತ್ನಿಸಿದಾಗ ಪೊಲೀಸರ ಮತ್ತು ರೈತರ ನಡುವೆ ಕೆಲ ನಿಮಿಷ ಮಾತಿನ ಚಕಮಾಕಿ ನಡೆಯಿತು.ನಂತರ ತಹಸೀಲ್ದಾರ್ ರಾಘವೇಂದ್ರ ರಾವ್ ಸ್ಥಳಕ್ಕೆ ದೌಡಾಯಿಸಿ ನಾವು ನಿಮ್ಮನ್ನು ಒಕ್ಕಲೆಬ್ಬಿಸಲು ಬಂದಿಲ್ಲ. ಕೇವಲ ಮಣ್ಣು ಪರೀಕ್ಷೆ ಮಾತ್ರ ಮಾಡಲು ಬಂದಿದ್ದೇವೆ ಎಂದು ಹೇಳಿಕೊಂಡರು ಪ್ರತಿಭಟನೆ ಹಿಂಪಡಿಯದೇ ಮುಂದುವರಿಸಿದರು. ಕೊನೆಯದಾಗಿ ಮಣ್ಣು ಪರೀಕ್ಷೆ ಮಾಡುವ ಕಾರ್ಯವನ್ನು ಇಲ್ಲಿಗೆ ಕೈ ಬಿಡುತ್ತೇವೆ ಎಂದು ಭರವಸೆ ಕೊಟ್ಟ ಮೇಲೆ ರೈತರು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಸಿಪಿಐ ವಿಶ್ವನಾಥ್ ಹಿರೇಗೌಡ, ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ, ಕುಡತಿನಿ ಪಿಎಸ್ಐ ಶಾಂತ ಮೂರ್ತಿ, ಕ್ರೈಮ್ ಪಿಎಸ್ ಐ ಕರಿಯಮ್ಮ, ಸಿಐಟಿಯು ಮುಖಂಡ ಎನ್.ಸೋಮಪ್ಪ, ಎನ್. ಹುಲೆಪ್ಪ, ಭೀಮಯ್ಯ, ದೊಡ್ಡಕೊಮಾರೆಪ್ಪ, ಗೂಳಪ್ಪ, ರಂಗಪ್ಪ, ಎಚ್. ಕೆ.ಕೆಂಚಪ್ಪ, ಫಕ್ಕೀರಪ್ಪ, ಪ್ರವೀಣ್ ಇದ್ದರು.