ಸರ್ಕಾರಿ ಐಟಿಐ ಕಾಲೇಜಿಗೆ ₹46 ಲಕ್ಷ ಸಿಎನ್‌ಸಿ ಲ್ಯಾಬ್ ಸ್ಥಾಪನೆ

| Published : Feb 14 2025, 12:31 AM IST

ಸರ್ಕಾರಿ ಐಟಿಐ ಕಾಲೇಜಿಗೆ ₹46 ಲಕ್ಷ ಸಿಎನ್‌ಸಿ ಲ್ಯಾಬ್ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ೪೬ ಲಕ್ಷ ರು. ವೆಚ್ಚದಲ್ಲಿ ಅತ್ಯಾಧುನಿಕ ಸಿ.ಎನ್.ಸಿ. ಲ್ಯಾಬ್ ಸ್ಥಾಪನೆ ಮಾಡುತ್ತಿರುವುದಾಗಿ ಹಂಜಳಿಗೆ ಕಾಳಿಂಗಪ್ಪ ವೆಲ್ವೇರ್ ಅಸೋಸಿಯೇಷನ್ ಸಂಸ್ಥಾಪಕ ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಹಾಸನ

ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ೪೬ ಲಕ್ಷ ರು. ವೆಚ್ಚದಲ್ಲಿ ಅತ್ಯಾಧುನಿಕ ಸಿ.ಎನ್.ಸಿ. ಲ್ಯಾಬ್ ಸ್ಥಾಪನೆ ಮಾಡುತ್ತಿರುವುದಾಗಿ ಹಂಜಳಿಗೆ ಕಾಳಿಂಗಪ್ಪ ವೆಲ್ವೇರ್ ಅಸೋಸಿಯೇಷನ್ ಸಂಸ್ಥಾಪಕ ಮಂಜುನಾಥ್ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತರಬೇತಿ ಪಡೆಯಬೇಕೆಂಬುದು ನಮ್ಮ ಆಶಯವಾಗಿತ್ತು. ಇದಕ್ಕಾಗಿ ನಾವು ಫಂಕ್ ಇಂಡಿಯಾ ಪ್ರೈವೇಟ್ ಬೆಂಗಳೂರು ಇವರ ವತಿಯಿಂದ ಹಾಸನದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಇದೇ ತಿಂಗಳ ಅಂತ್ಯದಲ್ಲಿ ಪ್ರಾರಂಭಿಸುತ್ತಿದ್ದು, ಸುಮಾರು ಆರು ತಿಂಗಳಿಂದ ಫಂಕ್ ಸಂಸ್ಥೆಯೊಂದಿಗೆ ಮಾತನಾಡಿ ಈ ಭಾಗದ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದಲ್ಲಿ ತರಬೇತಿ ನೀಡಬೇಕೆಂದು ಮನವರಿಕೆ ಮಾಡಿಕೊಟ್ಟು ಈ ಲ್ಯಾಬ್ ಮಾಡಿಕೊಡುತ್ತಿದ್ದೇವೆ ಎಂದರು.

ಈ ಲ್ಯಾಬ್ ನಲ್ಲಿ ೨೭ ಲಕ್ಷ ರು. ಸಿ.ಎನ್.ಸಿ. ಮಿಷನ್ ಅದಕ್ಕೆ ಬೇಕಾದ ೧೬ ಸಾಫ್ಟ್ ವೇರ್ ಲೈಸೆನ್ಸ್ ಗಳು, ೧೬ ಕಂಪ್ಯೂಟರ್‌ಗಳು, ಸಿಸಿಟಿವಿ ಕ್ಯಾಮೆರಾ, ಯುಪಿಎಸ್ ಮತ್ತು ಪ್ರಿಂಟರ್‌, ಟಾಬ್ಲಾಸ್, ಬೆಂಚಸ್, ಚೇರ್‌ ಕೂಡ ಒಳಗೊಂಡಿರುತ್ತವೆ ಎಂದರು.ಐಟಿಐ ಕಾಲೇಜು ಪ್ರಾಂಶುಪಾಲ ಎಚ್.ಪಿ. ಮಂಜುನಾಥ್ ಮಾತನಾಡಿ, ಕಾಳಿಂಗಪ್ಪ ನಮ್ಮ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾವು ಅವರೊಂದಿಗೆ ಚರ್ಚಿಸಿ ಈ ಸಂಸ್ಥೆಗೆ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿಯ ಅವಶ್ಯಕತೆ ಇದೆ ಎಂದು ಅವರಿಗೆ ತಿಳಿಸಿದ ಕಾರಣಕ್ಕೆ ಅವರು ಅದನ್ನು ಮನಗಂಡು ಫಾಂಕ್ ಸಂಸ್ಥೆಯೊಂದಿಗೆ ಮಾತನಾಡಿ, ಈ ಅವಕಾಶವನ್ನು ಮಾಡಿಕೊಡುತ್ತಿರುವುದು ನಮ್ಮ ಅದೃಷ್ಟ. ಪ್ರತಿ ವರ್ಷ ಸಾವಿರಾರು ಮಕ್ಕಳಿಗೆ ಹೊಸ ತಂತ್ರಜ್ಞಾನದ ತರಬೇತಿ ಪಡೆಯುವ ಅವಕಾಶ ಸಿಕ್ಕಿದೆ. ಈ ಹೊಸ ಸಿಮ್ಯೂಲೆಶನ್ ಸಾಫ್ಟ್ ವೇರ್ ಮುಖಾಂತರ ಹಲವಾರು ರೀತಿಯ, ಹಲವಾರು ಉತ್ಪನ್ನಗಳಿಗೆ ಸಂಬಂಧಪಟ್ಟಂತಹ ತರಬೇತಿಯನ್ನು ನೀಡಲು ಸಹಾಯವಾಗುತ್ತದೆ ಎಂದರು.

೧೬ ಕಂಪ್ಯೂಟರ್‌ಗಳಲ್ಲಿ ಸಿಮಿಲೇಷನ್ ಸಾಫ್ಟ್‌ವೇರ್ ಅಳವಡಿಸಿ ತರಬೇತಿ ನೀಡುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ತಾಂತ್ರಿಕ ಜ್ಞಾನವನ್ನು ಪಡೆದು ತರಬೇತಿ ನಂತರ ಇಂಡಸ್ಟ್ರೀಗಳಲ್ಲಿ ಹೆಚ್ಚಿನ ವೇತನದೊಂದಿಗೆ ಕೆಲಸವನ್ನು ಗಿಟ್ಟಿಸಿಕೊಳ್ಳಲು ಅವಕಾಶಗಳು ಹೆಚ್ಚಾಗಿರುತ್ತವೆ. ಅಥವಾ ಫಾಂಕ್ ಸಂಸ್ಥೆಯ ಈ ಕೊಡುಗೆಯಿಂದ ಪಡೆಯಲಿರುವ ತರಬೇತಿ ಅನುಭವದ ಮೇಲೆ ಒಂದು ಚಿಕ್ಕ ಉದ್ದಿಮೆಯನ್ನೇ ತೆರೆಯಬಹುದು ಎಂದು ಅಭಿಪ್ರಾಯಪಟ್ಟರು.

ಮಂಜುನಾಥ್ ಕಾಳಿಂಗಪ್ಪ ಅವರು ಕಳೆದ ತಿಂಗಳು ಆಲೂರು ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಯ ಎಲ್ಲಾ ಕೊಠಡಿಗಳಿಗೆ ಗ್ರೀನ್ ಚಾಕ್ ಬೋರ್ಡ್ ಸುಮಾರು ಏಳುವರೆ ಲಕ್ಷ ರು. ವೆಚ್ಚದಲ್ಲಿ ಮಾಡಿಸಿಕೊಟ್ಟಿದ್ದಾರೆ. ಸುಮಾರು ೧೨ ವರ್ಷಗಳಿಂದ ೪೦೦೦ ಮಕ್ಕಳಿಗೆ ನೋಟ್ ಪುಸ್ತಕಗಳು, ಸ್ಕೂಲ್ ಬ್ಯಾಗ್ ಉಚಿತವಾಗಿ ಕೊಡುತ್ತಾ ಬಂದಿದ್ದಾರೆ. ಹಾಗೆ ೧೬ ಸ್ಮಾರ್ಟ್ ಕ್ಲಾಸ್ ಗಳನ್ನು ತೆರೆದು ೧೦೦೦ ವಿದ್ಯಾರ್ಥಿಗಳಿಗೆ ಬೇಸಿಕ್ ಕಂಪ್ಯೂಟರ್ ಲರ್ನಿಂಗ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು. ಐಟಿಐ ತರಬೇತಿ ಅಧಿಕಾರಿ ಉಮ್ಮೆ ಅಸ್ಮಾ, ಆಡಳಿತಾಧಿಕಾರಿ ನವೀನ್ ಚಂದ್ರ, ಕೆ.ಎಂ. ಶ್ರೀನಿವಾಸ್, ಪ್ರದೀಪ್, ಚಂದ್ರಪ್ಪ, ಹಾಗೂ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳು ಹಾಜರಿದ್ದರು.