ಲೋಕಸಮರದಲ್ಲೂ ಕುಟುಂಬ ರಾಜಕಾರಣದ್ದೇ ಸದ್ದು

| Published : Mar 31 2024, 02:04 AM IST

ಸಾರಾಂಶ

ಗಡಿ ಜಿಲ್ಲೆ ಬೆಳಗಾವಿ ರಾಜಕಾರಣವೇ ಬೇರೆ. ಇಲ್ಲಿ ಪಕ್ಷಗಳೂ ಏನಿದ್ದರೂ ಗೌಣ. ಏನಿದ್ದರೂ ಇಲ್ಲಿ ಘಟಾನುಘಟಿ ನಾಯಕರ ವರ್ಚಸ್ಸೇ ಮೇಲುಗೈ ಸಾಧಿಸುತ್ತ ಬಂದಿವೆ. ಅದರಲ್ಲಿಯೂ ಕುಟುಂಬ ರಾಜಕಾರಣ ಕೂಡ ಪ್ರಾಬಲ್ಯ ಮೆರೆಯುತ್ತಲೇ ಬಂದಿದೆ. ಲೋಕಸಭಾ ಚುನಾವಣೆಯಲ್ಲೂ ಇದೀಗ ಕುಟುಂಬ ರಾಜಕಾರಣವೇ ಹೆಚ್ಚಾಗಿ ಸದ್ದು ಮಾಡುತ್ತಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಡಿ ಜಿಲ್ಲೆ ಬೆಳಗಾವಿ ರಾಜಕಾರಣವೇ ಬೇರೆ. ಇಲ್ಲಿ ಪಕ್ಷಗಳೂ ಏನಿದ್ದರೂ ಗೌಣ. ಏನಿದ್ದರೂ ಇಲ್ಲಿ ಘಟಾನುಘಟಿ ನಾಯಕರ ವರ್ಚಸ್ಸೇ ಮೇಲುಗೈ ಸಾಧಿಸುತ್ತ ಬಂದಿವೆ. ಅದರಲ್ಲಿಯೂ ಕುಟುಂಬ ರಾಜಕಾರಣ ಕೂಡ ಪ್ರಾಬಲ್ಯ ಮೆರೆಯುತ್ತಲೇ ಬಂದಿದೆ. ಲೋಕಸಭಾ ಚುನಾವಣೆಯಲ್ಲೂ ಇದೀಗ ಕುಟುಂಬ ರಾಜಕಾರಣವೇ ಹೆಚ್ಚಾಗಿ ಸದ್ದು ಮಾಡುತ್ತಿದೆ.

ಬೆಳಗಾವಿ ಜಿಲ್ಲೆಯ ಕುಟುಂಬ ರಾಜಕಾರಣಕ್ಕೂ ಹೆಚ್ಚು ನಿಕಟವಾಗಿದೆ. ಮಾತ್ರವಲ್ಲ, ಕುಟುಂಬದವರೇ ಹೆಚ್ಚಾಗಿ ಶಾಸಕರು, ಸಚಿವರು, ಸಂಸದರು ಆಗುತ್ತಲೇ ಬಂದಿದ್ದಾರೆ. ಇದಕ್ಕೆ ಮತದಾರರು ಕೂಡ ಅವರತ್ತ ಒಲವು ತೋರಿಸುತ್ತಲೆ ಬಂದಿದ್ದಾರೆ. ಜಾರಕಿಹೊಳಿ, ಕತ್ತಿ, ಅಂಗಡಿ, ಜೊಲ್ಲೆ, ಹುಕ್ಕೇರಿ ಈಗ ಹೆಬ್ಬಾಳಕರ ಕುಟುಂಬ ಹೆಚ್ಚಾಗಿ ರಾಜಕೀಯದಲ್ಲಿ ಮುನ್ನೆಲೆಯಲ್ಲಿವೆ.ಹುಕ್ಕೇರಿ, ಜಾರಕಿಹೊಳಿ, ಕತ್ತಿ ಕುಟುಂಬ ಮೊದಲಿನಿಂದಲೂ ಕುಟುಂಬ ರಾಜಕಾರಣದಲ್ಲಿ ಹೆಚ್ಚಾಗಿತ್ತು. ಅದರೊಂದಿಗೆ ಜೊಲ್ಲೆ, ಹೆಬ್ಬಾಳಕರ, ಅಂಗಡಿ ಕುಟುಂಬಗಳು ಕೂಡ ಈಗ ರಾಜಕೀಯದಲ್ಲಿ ಪ್ರಾಬಲ್ಯ ಮೆರೆಯುತ್ತಿವೆ. ಇಲ್ಲಿ ಏನಿದ್ದರೂ ಪಕ್ಷದ ಮೇಲೆ ರಾಜಕೀಯ ನಡೆಯಲ್ಲ. ಹೊಂದಾಣಿಕೆ ರಾಜಕಾರಣವೂ ಇಲ್ಲಿ ಕೆಲಸ ಮಾಡುತ್ತಬಂದಿದೆ. ಹಾಗಾಗಿ, ಜಿಲ್ಲೆಯ ಘಟಾನುಘಟಿ ನಾಯಕರ ನಡೆ ರಾಷ್ಟ್ರ, ರಾಜ್ಯದ ನಾಯಕರನ್ನು ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ.

ಗೋಕಾಕದ ಜಾರಕಿಹೊಳಿ ಸಹೋದರರು ರಾಜಕೀಯದಲ್ಲಿ ನಾಲ್ವರು ಈಗಾಗಲೇ ಹುದ್ದೆಯಲ್ಲಿದ್ದಾರೆ. ಈಗ ಎರಡನೇ ಕುಡಿ ಅಂದರೆ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಲೋಕಸಭಾ ಸಮರಕ್ಕೆ ಧುಮುಕಿದ್ದಾರೆ. ಸತೀಶ ಜಾರಕಿಹೊಳಿ ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೆ , ಅ‍ವರ ಇಬ್ಬರು ಸಹೋದರರಾದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ. ಇನ್ನೋರ್ವ ಸಹೋದರ ಲಖನ್‌ ಜಾರಕಿಹೊಳಿ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರ ಕುಟುಂಬ ಸಹ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿದ್ದ ಹೆಬ್ಬಾಳಕರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆಯಾಗಿ ಪಕ್ಷವನ್ನು ಸಂಘಟಿಸುವಲ್ಲಿ ಶ್ರಮಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಟಿಕೆಟ್‌ ಪಡೆದರೂ ಮೊದಲ ಯತ್ನದಲ್ಲೇ ಪರಾಭವಗೊಂಡರು. 2014ರಲ್ಲಿ ಬೆಳಗಾವಿ ಲೋಕಸಭೆಯಿಂದಲೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ , ಸೋಲನುಭವಿಸಿದರು. ಆದರೆ, ಇದರಿಂದ ಧೃತಿಗೆಡದೇ ಮತ್ತೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಎರಡನೇ ಬಾರಿಗೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದರು. ಅಲ್ಲದೆ, ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್‌ ಚುನಾವಣೆಗೆ ತಮ್ಮ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ಕಣಕ್ಕಿಳಿಸಿ, ಗೆಲ್ಲಿಸಿಕೊಂಡು ಬಂದರು. ಈಗ ತಮ್ಮ ಪುತ್ರ ಮೃಣಾಲ್‌ನನ್ನು ಲೋಕಸಭಾ ಚುನಾವಣಾ ಆಖಾಡಕ್ಕಿಳಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಕರೆತರುವ ಯತ್ನ ಮಾಡುತ್ತಿದ್ದಾರೆ.

ಅದರಂತೆ ಕಾಂಗ್ರೆಸ್‌ನ ಹಿರಿಯನಾಯಕ ಪ್ರಕಾಶ ಹುಕ್ಕೇರಿ ವಿಧಾನ ಪರಿಷತ್‌ ಸದಸ್ಯರಾಗಿದ್ದರೆ, ಅವರ ಪುತ್ರ ಗಣೇಶ ಹುಕ್ಕೇರಿ ಮೂರನೇ ಅವಧಿಗೆ ಚಿಕ್ಕೋಡಿ- ಸದಲಗಾ ಕ್ಷೇತ್ರದ ಶಾಸಕರಾಗಿದ್ದಾರೆ. ಹೀಗೆ ಅಪ್ಪ ಮಗ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ್ನು ಏಕಕಾಲಕ್ಕೆ ಪ್ರವೇಶ ಮಾಡಿದ್ದಾರೆ. ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಸಂಸದರಾಗಿದ್ದರೆ, ಅವರ ಪತ್ನಿ ಶಶಿಕಲಾ ಜೊಲ್ಲೆ ನಿಪ್ಪಾಣಿ ಕ್ಷೇತ್ರದ ಶಾಸಕಿ. ಅದರಂತೆ ಹುಕ್ಕೇರಿಯ ಕತ್ತಿ ಕುಟುಂಬ ಕೂಡ ಇಲ್ಲಿ ಪ್ರಾಬಲ್ಯ ಮೆರೆದಿದೆ. ಉಮೇಶ ಕತ್ತಿ ಅವರ ಅಕಾಲಿಕ ನಿಧನದಿಂದ ತೆರವಾದ ಹುಕ್ಕೇರಿ ಕ್ಷೇತ್ರದಿಂದ ಅವರ ಪುತ್ರ ನಿಖಿಲ ಕತ್ತಿ ಆಯ್ಕೆಯಾಗಿದ್ದಾರೆ. ಅವರ ಸಹೋದರ ರಮೇಶ ಕತ್ತಿ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದಾರೆ. ಹೀಗೆ ಬೆಳಗಾವಿ ಜಿಲ್ಲೆಯಲ್ಲಿ ಕುಟುಂಬ ರಾಜಕೀಯ ಪ್ರಾಬಲ್ಯ ಮೆರೆಯುತ್ತ ಬಂದಿದೆ.

ಇನ್ನು ದಿ.ಸುರೇಶ ಅಂಗಡಿ ಅವರ ಕುಟುಂಬ ಕೂಡ ಈಗೀಗ ಮುನ್ನೆಲೆಗೆ ಬಂದಿದೆ. ಸುರೇಶ ಅಂಗಡಿ 4 ಬಾರಿ ಸಂಸದರಾಗಿದ್ದವರು. ಅವರ ಅಕಾಲಿಕ ನಿಧನಾನಂತರ ಅವರ ಪತ್ನಿ ಮಂಗಲ ಅಂಗಡಿ ಅವರು ಸಂಸದೆಯಾದರು. ಈಗ ನಡೆಯುತ್ತಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಸುರೇಶ ಅಂಗಡಿ ಅವರ ಬೀಗರಾದ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರು ಬೆಳಗಾವಿ ಲೋಕಸಭಾದಿಂದ ಸ್ಪರ್ಧೆ ಮಾಡುತ್ತಿದ್ದಾರೆ.