ಸಾರಾಂಶ
ಡಾ.ಸಿ.ಎಂ.ಜೋಶಿ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡಈ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಶೂನ್ಯವಿದೆ. ಆದರೆ, ಶಿಕ್ಷಕರು ಇದ್ದಾರೆ. ಈ ಶಿಕ್ಷಕರು ಪ್ರತಿದಿನ ಬಂದು ಶಾಲೆ ಬಾಗಿಲು ತೆಗೆದು ಕುಳಿತು ಹೋಗುತ್ತಿದ್ದಾರೆ. ಈ ಕೆಲಸಕ್ಕೆ ನಮ್ಮ ಶಿಕ್ಷಣ ಇಲಾಖೆ ಅವರಿಗೆ ಪ್ರತಿ ತಿಂಗಳು ಭರ್ಜರಿ ಸಂಬಳ ಮಾತ್ರ ನೀಡುತ್ತಿದೆ.
ಹೌದು, ತಾಲೂಕಿನ ಕೋಟೆಕಲ್ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೂನ್ಯ ದಾಖಲಾತಿ ಇದೆ. ಆದರೆ, ಇಲ್ಲಿ ಓರ್ವ ಶಿಕ್ಷಕರು ಮಾತ್ರ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಶಿಕ್ಷಕರ ಕೆಲಸ ಮಾತ್ರ ಶೂನ್ಯ. ಆದರೆ, ಪ್ರತಿ ತಿಂಗಳು ಸಂಬಳ ಮಾತ್ರ ಪಡೆಯುತ್ತಿದ್ದಾರೆ. 2022-23ರಲ್ಲಿ 5 ಮಕ್ಕಳು, 2023-24 ರಲ್ಲಿ 2 , 2024-25ನೇ ಸಾಲಿನಲ್ಲಿ ಮಕ್ಕಳೇ ದಾಖಲಾಗಿಲ್ಲ. ಮಕ್ಕಳ ದಾಖಲಾತಿ ಇಲ್ಲದಿದ್ದರೂ ಶಿಕ್ಷಕರಿಗೆ ವೇತನ ನೀಡುತ್ತಾ ಬಂದಿರುವುದು ಇಲಾಖೆಯ ಗಮನಕ್ಕೆ ಬಂದರೂ ಅಧಿಕಾರಿಗಳ ಮೌನಕ್ಕೆ ಕಾರಣ ಹುಡುಕಬೇಕಾಗಿದೆ.ಗ್ರಾಮದಲ್ಲಿ ಅಂಗನವಾಡಿ ಶಾಲೆ ಜಿಲ್ಲೆಯಲ್ಲಿಯೇ ಹೆಸರು ಮಾಡಿವೆ. ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲೂ ಕಲಿಕೆ ಚೆನ್ನಾಗಿದೆ. ಆದರೆ, ಇಲ್ಲಿಯ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮಾತ್ರ ಮಕ್ಕಳನ್ನು ಶಾಲೆಗೆ ಕರೆತರಲು ವಿಫಲವಾಗಿದ್ದಾರೆ. ಹೀಗಾಗಿ ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಈ ವರ್ಷ ಶೂನ್ಯಕ್ಕೆ ತಲುಪಿದೆ.
ನೆಪಮಾತ್ರಕ್ಕೆ ಒಂದು ದಾಖಲಾತಿ:ಆಶ್ರಯ ಕಾಲೋನಿ ಸರ್ಕಾರಿ ಶಾಲೆಯಲ್ಲಿ ಒಂದು ದಾಖಲಾತಿ ಆಗಿದೆ. ಆದರೆ, ಆ ಮಗು ಶಾಲೆಗೆ ಬರುವುದಿಲ್ಲ. ಹೀಗಾಗಿ ಇಲ್ಲಿಯೂ ದಾಖಲಾತಿ ಶೂನ್ಯ ಇದ್ದಂತೆಯೇ. ಆದರೆ, ಈ ಶಾಲೆಯಲ್ಲಿಯೂ ಒಬ್ಬರು ಶಿಕ್ಷಕರು ಇದ್ದಾರೆ. ಇವರೂ ತಿಂಗಳು ಭರ್ಜರಿ ಸಂಬಳ ಪಡೆಯುತ್ತಿದ್ದಾರೆ. ಶೂನ್ಯ ದಾಖಲಾತಿ ಹೊಂದಿದ ಶಾಲೆಗಳ ಮಾಹಿತಿ ಶಿಕ್ಷಣ ಇಲಾಖೆಗೆ ಗೊತ್ತಿದ್ದರೂ ಅವರು ಯಾಕೆ? ಇಲ್ಲಿ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವರ್ಗ ಮಾಡುತ್ತಿಲ್ಲ ಎಂಬ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ.
----ಹೆಚ್ಚು ಮಕ್ಕಳಿರುವ ಶಾಲೆಗೆ ವರ್ಗ ಮಾಡಿ
ಇಂತಹ ಶಾಲೆಗಳನ್ನು ಉಳಿಸಿಕೊಳ್ಳುವುದರಿಂದ ಸರ್ಕಾರಕ್ಕೆ ಸಾಕಷ್ಟು ನಷ್ಟ ಉಂಟಾಗುತ್ತದೆ. ಖಾಸಗಿ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೆ ಶಿಕ್ಷಕರಿಗೆ ತೊಂದರೆ. ಆದರೆ ಸರ್ಕಾರಿ ಶಾಲಾ ಶಿಕ್ಷಕರಿಗೆ ಇಲ್ಲವೇ? ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಪ್ರತಿ ವರ್ಷದ ಆಂದೋಲನಗಳು ಈ ಶಾಲೆಗಳಲ್ಲಿ ನಡೆದಿಲ್ಲವೇ? ಶಿಕ್ಷಣ ಇಲಾಖೆ ಈ ವ್ಯವಸ್ಥೆ ಹೇಗೆ ರಕ್ಷಿಸಿಕೊಂಡು ಬಂದಿದೆ? ಶಾಸಕರ, ಜಿಲ್ಲಾ ಶಿಕ್ಷಣಾಧಿಕಾರಿಗಳ, ಜಿಪಂ ಸಿಇಒಗಳ ಗಮನಕ್ಕೂ ಇದು ಬಾರದಿರುವುದು ಸಾರ್ವಜನಿಕ ವಲಯದಲ್ಲಿ ಅಶ್ಚರ್ಯ ತರಿಸಿದೆ. ಜಿಲ್ಲೆ, ತಾಲೂಕಿನಲ್ಲಿ ಅದೇಷ್ಟೋ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಸರಿಯಾಗಿ ಪಾಠ ಬೋಧನೆ ಮಾಡಲು ಆಗುತ್ತಿಲ್ಲ. ಇಂತಹ ಶಾಲೆಗಳಲ್ಲಿಗೆ ಈ ಶಿಕ್ಷಕರನ್ನು ವರ್ಗ ಮಾಡಿದರೆ ಅಲ್ಲಿ ಮಕ್ಕಳ ಕಲಿಕೆಗೆ ಅನುಕೂವಾದ್ರೂ ಆಗಿತು ಎಂಬ ಮಾತು ಕೇಳಿ ಬರುತ್ತಿದೆ.----
ಈ ಶಾಲೆಗಳಲ್ಲಿ ಮಕ್ಕಳಿಲ್ಲದ ಮಾಹಿತಿ ಬಂದಿದೆ. ಆದಷ್ಟು ಬೇಗ ಈ ವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ.-ಬಿ.ಎಚ್.ಹಳಗೇರಿ, ಬಿಇಒ ಬಾದಾಮಿ
--ಆಶ್ರಯ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಳಕ್ಕೆ ಅಲ್ಲಿರುವ ಶಿಕ್ಷಕರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಈ ಮಾಹಿತಿ ಬಿಇಒ ಅವರ ಗಮನಕ್ಕೂ ತಂದಿರುವೆ.
- ಭಾಗೀರಥಿ ಆಲೂರ, ಸಮೂಹ ಸಂಪನ್ಮೂಲ ವ್ಯಕ್ತಿ, ಗುಳೇದಗುಡ್ಡ.;Resize=(128,128))
;Resize=(128,128))
;Resize=(128,128))