ಕನ್ನಡ ಭಾಷಾ ಅಸ್ತಿತ್ವ ಉಳಿಸಿಕೊಳ್ಳಬೇಕು: ಸೇಡಂ

| Published : Jun 11 2024, 01:41 AM IST

ಸಾರಾಂಶ

ಎರಡು ಸಾವಿರ ವರ್ಷಕ್ಕಿಂತ ಹೆಚ್ಚು ಹಿರಿದಾದ ನಮ್ಮ ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ಮಾಡುತ್ತಿರುವುದಕ್ಕೆ ಹಿರಿಯ ಮುತ್ಸದ್ದಿ ಬಸವರಾಜ ಪಾಟೀಲ ಸೇಡಂ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ/ಸೇಡಂ

ಎರಡು ಸಾವಿರ ವರ್ಷಕ್ಕಿಂತ ಹೆಚ್ಚು ಹಿರಿದಾದ ನಮ್ಮ ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ಮಾಡುತ್ತಿರುವುದಕ್ಕೆ ಹಿರಿಯ ಮುತ್ಸದ್ದಿ ಬಸವರಾಜ ಪಾಟೀಲ ಸೇಡಂ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನೃಪತುಂಗ ಅಧ್ಯಯನ ಸಂಸ್ಥೆ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದಾದ್ಯಂತ ಆಂಗ್ಲಭಾಷೆ ಆವರಿಸಿಕೊಂಡಿದೆ. ಕನ್ನಡ ಮಾತನಾಡುವ ಮಟ್ಟಕ್ಕೇ ಸೀಮಿತವಾಗುವ ಹಂತದಲ್ಲಿದ್ದರೂ ಪ್ರತಿಯೊಬ್ಬರೂ ಕನ್ನಡ ಭಾಷೆಯ ಬಳಕೆ ಹೆಚ್ಚು ಮಾಡುವ ಮೂಲಕ ಭಾಷೆಯ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದರು.

ಡಾ.ವಾಸುದೇವ ಅಗ್ನಿಹೋತ್ರಿ ರಚಿಸಿದ ಕವಿರಾಜಮಾರ್ಗ : ಸಹಸ್ರಮಾನದ ವಿವೇಕ ಕೃತಿಯನ್ನು ಬಿಡುಗಡೆಗೊಳಿಸಿದ ಕಲಬುರಗಿ ಶರಣ ಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಅನೀಲಕುಮಾರ ಜಿ.ಬಿಡವೆ ಮಾತನಾಡಿ, ತಾಂತ್ರಿಕ ಶಿಕ್ಷಣದ ಬೋಧನೆಯಲ್ಲಿ ಕನ್ನಡದ ಪುಸ್ತಕಗಳು ಇಲ್ಲದ ಕಾರಣದಿಂದ ಆಂಗ್ಲ ಭಾಷೆಯ ಮೊರೆ ಹೋಗಬೇಕಾಗಿದೆ. ತಾಂತ್ರಿಕ ಶಿಕ್ಷಣದ ಪಠ್ಯ ಸಾಹಿತ್ಯವನ್ನು ಕನ್ನಡ ಸಾಹಿತಿಗಳು ಅನುವಾದಿಸುವ ಅಥವಾ ಬರೆಯುವ ಕಾರ್ಯಮಾಡಿದರೆ, ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣದಲ್ಲೂ ಮಾತೃಭಾಷೆಗೆ ಸ್ಥಾನ ಸಿಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಕಲ್ಯಾಣರಾವ ಪಾಟೀಲ ಮಾತನಾಡಿ, ಎಲ್ಲ ಜ್ಞಾನ ಶಾಸ್ತ್ರ ಶಿಸ್ತುಗಳನ್ನು ಧಾರಣ ಮಾಡಿಕೊಂಡು ಬೆಳೆದು ಬಂದಿರುವ ಕನ್ನಡದ ಮೊದಲ ಕೃತಿಯಲ್ಲಿಯೇ ಭಾವೈಕ್ಯದ ಬೀಜದ ಮಾತುಗಳಿವೆ. ಇವುಗಳನ್ನು ಮರೆತರೆ ಸಾಮಾಜಿಕ ಸಾಮರಸ್ಯ ಸೊರಗುತ್ತದೆ. ಈ ದಿಸೆಯಲ್ಲಿ ಲೇಖಕರಾದವರು ಗಮನ ಹರಿಸಬೇಕು ಎಂದರು.

ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಲಿಂಗಣ್ಣ ಗೋನಾಳ ಕೃತಿ ಪರಿಚಯಿಸಿ, ಕನ್ನಡ ಭಾಷೆಯ ಮೊದಲ ಲಭ್ಯ ಕೃತಿಯಾದ ಕವಿರಾಜಮಾರ್ಗವನ್ನು ಕನ್ನಡಿಗರ ವಿವೇಕದ ಹಿನ್ನೆಲೆಯಲ್ಲಿ ಲೇಖಕರು ಸೊಗಸಾಗಿ ವಿವರಿಸಿದ್ದಾರೆ ಎಂದರು.

ನೃಪತುಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕ ಡಾ.ವಾಸುದೇವ ಅಗ್ನಿಹೋತ್ರಿ ಅನಿಸಿಕೆ ವ್ಯಕ್ತ ಪಡಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಚಂದ್ರಕಲಾ ಬಿದರಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಹಿರಿಯ ಸಾಹಿತಿಗಳಾದ ಲಿಂಗಾರೆಡ್ಡಿ ಶೇರಿ, ಸಿದ್ದಪ್ಪ ತಳ್ಳಳ್ಳಿ, ಮಹಿಪಾಲರೆಡ್ಡಿ ಮುನ್ನೂರ, ಶ್ರೀಧರ ಇನಾಮದಾರ, ದತ್ತಾತ್ರೇಯ ಐನಾಪುರ, ಪ್ರಕಾಶ ಗೊಣಗಿ, ಪರಿಮಳಾ ಪಾಟೀಲ, ರುಕ್ಮಿಣಿ ಕಾಳಗಿ, ರೂಪಾದೇವಿ ಬಂಗಾರ, ಶಿವಕಾಂತಾ ರೆಮ್ಮಣ್ಣಿ ಉಪಸ್ಥಿತರಿದ್ದರು.

ನೃಪತುಂಗ ಅಧ್ಯಯನ ಸಂಸ್ಥೆಯ ಪ್ರ. ಕಾರ್ಯದರ್ಶಿ ಜಗದೀಶ ಕಡಬಗಾಂವ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಅವಿನಾಶ ಬೋರಂಚಿ ನಿರೂಪಿಸಿದರು. ಪ್ರೊ.ಶೋಭಾದೇವಿ ಚೆಕ್ಕಿ ಪ್ರಾರ್ಥಿಸಿದರು. ಕೋಶಾಧ್ಯಕ್ಷ ಸಂತೋಷ ತೊಟ್ನಳ್ಳಿ ವಂದಿಸಿದರು.