ಅಣ್ಣಿಗೇರಿಯಲ್ಲಿ ದುಬಾರಿಯಾದ ಲಾವಣಿ, 1 ಎಕರೆಗೆ ₹ 25 ಸಾವಿರ!

| Published : Apr 18 2025, 12:34 AM IST

ಸಾರಾಂಶ

ಹಳದಿ ಲೋಹ ಬಂಗಾರದ ಬೆಲೆ ಲಕ್ಷ ರು.ದತ್ತ ದಾಪುಗಾಲಿಡುತ್ತಿದೆ. ಇದಕ್ಕೆ ಸರಿಸಾಟಿ ಎನ್ನುವಂತೆ ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಲಾವಣಿ ಹೊಲದ ದರ ಕೂರಗಿಗೆ (4 ಎಕರೆ) ₹1ಲಕ್ಷ ದಾಟಿದ್ದು, ಮಳೆಯಾಶ್ರಿತ ಹೊಲಗಳಿಗೆ (ಒಣಬೇಸಾಯ) ಇದು ರಾಜ್ಯದಲ್ಲಿಯೇ ದಾಖಲೆ ದರ ಎನಿಸಿದೆ.

ಶಿವಾನಂದ ಅಂಗಡಿ

ಕನ್ನಡಪ್ರಭ ವಾರ್ತೆ ಅಣ್ಣಿಗೇರಿ

ಹಳದಿ ಲೋಹ ಬಂಗಾರದ ಬೆಲೆ ಲಕ್ಷ ರು.ದತ್ತ ದಾಪುಗಾಲಿಡುತ್ತಿದೆ. ಇದಕ್ಕೆ ಸರಿಸಾಟಿ ಎನ್ನುವಂತೆ ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಲಾವಣಿ ಹೊಲದ ದರ ಕೂರಗಿಗೆ (4 ಎಕರೆ) ₹1ಲಕ್ಷ ದಾಟಿದ್ದು, ಮಳೆಯಾಶ್ರಿತ ಹೊಲಗಳಿಗೆ (ಒಣಬೇಸಾಯ) ಇದು ರಾಜ್ಯದಲ್ಲಿಯೇ ದಾಖಲೆ ದರ ಎನಿಸಿದೆ.

ಜಿಲ್ಲೆಯ ಅಣ್ಣಿಗೇರಿ ತಾಲೂಕಿನಲ್ಲಿ ಈ ಬಾರಿ ಜಮೀನುಗಳಿಗೆ ಭಾರೀ ಬೇಡಿಕೆ ಬಂದಿದ್ದು, ಕಳೆದ ಬಾರಿಗಿಂತ ಲಾವಣಿ ಹೊಲದ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ಕೃಷಿಯಲ್ಲಿ ಹಣ ತೊಡಗಿಸುವವರು ಜಿದ್ದಿಗೆ ಬಿದ್ದವರಂತೆ ಲಕ್ಷೋಪ ಲಕ್ಷ ಮೊತ್ತ ನೀಡಿ ಲಾವಣಿ ಹೊಲ ಮಾಡುತ್ತಿದ್ದಾರೆ.

4 ಎಕರೆ ಹೊಲಕ್ಕೆ ಈ ಬಾರಿ ವರ್ಷದ ಲಾವಣಿ ₹80 ಸಾವಿರದಿಂದ ₹1.10 ವರೆಗೆ ನಿಗದಿಯಾಗಿದೆ. ಕರಕಿ ಇಲ್ಲದ ಸಮತಟ್ಟಾದ ಕಪ್ಪು ಭೂಮಿಯ ಹೊಲ ಲಕ್ಷ ರು. ದಾಟಿವೆ. ಕಳೆದ ಬಾರಿ ₹60ರಿಂದ ₹80 ಸಾವಿರ ವರೆಗೆ ದರ ನಿಗದಿಯಾಗಿತ್ತು. ಹೊಲ ಅಡ (ಲೀಸ್‌) ಇಟ್ಟವರು 4 ಎಕರೆಗೆ ₹8 ಲಕ್ಷ ವರೆಗೂ ಪಡೆದಿದ್ದಾರೆ. ಕಳೆದ ಬಾರಿ ₹4ರಿಂದ ₹5 ಲಕ್ಷ ನಿಗದಿಯಾಗಿತ್ತು. ಇನ್ನು ಹೊಲವನ್ನು ಖರೀದಿ ಕೊಡುವವರೇ ಅಪರೂಪವಾಗಿದ್ದು, ಖರೀದಿಗೆ ಹೊಲ ಮಾರಿದವರು ಎಕರೆ ₹18 ಲಕ್ಷ ವರೆಗೆ ಪಡೆದಿದ್ದಾರೆ. ಜನಸಂಖ್ಯೆ ಹೆಚ್ಚಳವಾದಂತೆ ಇರುವಷ್ಟೇ ಭೂಮಿಯಲ್ಲೇ ಕೃಷಿ ಮಾಡಬೇಕಾಗಿರುವುದರಿಂದ ಕೃಷಿ ಮೇಲೆ ಒತ್ತಡ ಜಾಸ್ತಿ ಆಗುತ್ತಿದ್ದು, ರಾಜ್ಯದ ಎಲ್ಲೆಡೆ ಖರೀದಿ ದರ ಸಹಜವಾಗಿಯೇ ಹೆಚ್ಚಾಗಿದೆ.

ಆದರೆ ಲಾವಣಿ ಧಾರಣೆ ಗದಗ ಜಿಲ್ಲೆ ಸೇರಿದಂತೆ ಇನ್ನು ₹50ರಿಂದ ₹60 ಸಾವಿರ ಲೆಕ್ಕದಲ್ಲೇ ಇದ್ದರೂ ಅಣ್ಣಿಗೇರಿ ತಾಲೂಕಿನಲ್ಲಿ ಲಕ್ಷ ರು. ದಾಟಿರುವುದು ಬೇರೆ ಜಿಲ್ಲೆಯ ರೈತರು ಹುಬ್ಬೇರಿಸುವಂತೆ ಮಾಡಿದೆ.

ತಾಲೂಕಿನ ಗ್ರಾಮೀಣ ಪ್ರದೇಶಕ್ಕೂ ಲಾವಣಿ ಹೊಲದ ಬೆಲೆ ಸಮರ ಶುರುವಾಗಿದ್ದು, ಅಡ್ನೂರು, ಹಳ್ಳಿಕೇರಿ, ಇಬ್ರಾಹಿಂಪುರ, ಸೈದಾಪುರದಲ್ಲೂ ಈ ಬಾರಿ ಲಕ್ಷ ರು. ದಾಟಿ ಲಾವಣಿ ಹೊಲ ರೈತರು ಮಾಡಿದ್ದಾರೆ.

ಈ ಹಿಂದೆ ಕಠಿಣವಾಗಿದ್ದ ಒಕ್ಕಲುತನ ಟ್ರ್ಯಾಕ್ಟರ್‌ ಹಾಗೂ ಒಕ್ಕಲು ಯಂತ್ರಗಳು ಬಂದ ಮೇಲೆ ಅತ್ಯಂತ ಸುಲಭವಾಗಿದ್ದು, ಟ್ರ್ಯಾಕ್ಟರ್‌ ಖರೀದಿಸುವ ರೈತರಿಗೆ ಬ್ಯಾಂಕ್‌ಗಳು ಕರೆದು ಸಾಲ ನೀಡುತ್ತಿವೆ. ಹೀಗಾಗಿ ಉತ್ತರ ಕರ್ನಾಟಕದ ಬಹುತೇಕ ಕೃಷಿ ಕುಟುಂಬಗಳಲ್ಲಿ ಟ್ರ್ಯಾಕ್ಟರ್‌ ಇಲ್ಲದ ಕುಟುಂಬಗಳೇ ಇಲ್ಲ. ಹೀಗೆ ಟ್ರ್ಯಾಕ್ಟರ್‌ ಪಡೆದವರು ಹೆಚ್ಚು ಹೆಚ್ಚು ಜಮೀನು ಲಾವಣಿ ಮಾಡುತ್ತಿದ್ದಾರೆ.

ದರ ಏಕೆ ಹೆಚ್ಚಾಯ್ತು?: ಅಣ್ಣಿಗೇರಿ ತಾಲೂಕು ಪ್ರದೇಶ ಸಣ್ಣ ಎರಿಮಣ್ಣು ಹೊಂದಿದೆ. ಸ್ವಲ್ಪ ಮಳೆಯಾಗುತ್ತ ಬಂದರೂ ಸಾಕು ಈ ಮಣ್ಣಿನಲ್ಲಿ ಭರ್ಜರಿ ಬೆಳೆ ಬರುತ್ತದೆ. ಕಳೆದ ಬಾರಿ ಈ ಪ್ರದೇಶದಲ್ಲಿ ಮುಂಗಾರಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಬಿತ್ತನೆಯಾಗಿತ್ತು. ಬಳಿಕ ಹಿಂಗಾರಿಗೆ ಕಡಲೆಯನ್ನು ಬೆಳೆದ ರೈತರು ಭರ್ಜರಿ ಲಾಭ ಮಾಡಿಕೊಂಡಿದ್ದಾರೆ. ಇದನ್ನು ಮನಗಂಡಿರುವ ಹೊಲದ ಮಾಲೀಕರು ಹೆಚ್ಚು ದರ ನೀಡಿದವರಿಗೆ ಲಾವಣಿ ನೀಡುತ್ತಿದ್ದಾರೆ. ಜತೆಗೆ ಈ ಬಾರಿ ಕೃಷಿಯಲ್ಲಿ ಹಣ ತೊಡಗಿಸುವವರ ಸಂಖ್ಯೆ ಹೆಚ್ಚಾಗಿದ್ದು, ಹೊಲ ಹಾಕುವವರು ಕಡಿಮೆ ಇರುವುದರಿಂದ ಭೂಮಿಗೆ ಭಾರೀ ಬೇಡಿಕೆ ಬಂದಿದೆ.

ನಾಲ್ಕು ಎಕರೆ ಲಾವಣಿ ಹೊಲ ಮಾಡಿದರೆ ಲಾವಣಿ ದರ ₹1.10 ಲಕ್ಷ ಸೇರಿ ಮುಂಗಾರಿ ಬಿತ್ತನೆಗೆ ಹರಗುವುದು, ಬಿತ್ತುವುದು, ರಸಾಯನಿಕ ಗೊಬ್ಬರ, ಕೀಟನಾಶಕ, ಕಳೆ ಕೀಳಲು ಕೂಲಿಕಾರರ ಕೂಲಿ ಸೇರಿ ₹40 ಸಾವಿರ ವರೆಗೆ ಖರ್ಚು ಮಾಡುತ್ತಾರೆ. ಮೇಲಾಗಿ ಇಂಥ ಹೊಲಗಳನ್ನು ಮಾಡಿದವರಿಗೆ ವರುಣದೇವ ಕೃಪೆ ತೋರಲೇಬೇಕು ಎಂದು ವ್ಯಾಖ್ಯಾನಿಸುತ್ತಾರೆ ಕೃಷಿ ಪಂಡಿತರು.

ದಶಕಗಳಿಂದ ಲಾವಣಿ ಹೊಲ ಮಾಡುತ್ತ ಬಂದಿದ್ದೇವೆ. ಈ ಬಾರಿಯೂ 20 ಎಕರೆ ಹೊಲ ಮಾಡಿದ್ದು, ಹೊಲದ ಮಾಲೀಕರು ಹೆಚ್ಚು ಹೆಚ್ಚು ಹಣ ಕೇಳುತ್ತಿರುವುದರಿಂದ ಲಾವಣಿ ದರ ಹೆಚ್ಚಾಗಿದೆ. ಈಗ ₹1.10 ಲಕ್ಷ ವರೆಗೆ ದರ ಹೋಗಿದೆ ಎನ್ನುತ್ತಾರೆ ಲಾವಣಿ ಹೊಲ ಮಾಡಿದ ಹಳ್ಳಿಕೇರಿ ರೈತ ಈರಣ್ಣ ಸೊಲಬಣ್ಣವರ.

ಭೂಮಿ ತಾಯಿಯನ್ನೇ ನಂಬಿ ಟ್ರ್ಯಾಕ್ಟರ್‌ ಸೇರಿ ಹಲವಾರು ಕೃಷಿ ಉಪಕರಣ ಮಾಡಿಕೊಂಡಿದ್ದೇವೆ. ದರ ಹೆಚ್ಚಾಗಿದ್ದರೂ ಈ ಬಾರಿ ನಾವು 20 ಎಕರೆ ಲಾವಣಿ ಮಾಡಿದ್ದೇವೆ. ಹೊರಗಿನವರು ಬಂದು ಇಲ್ಲಿ ಹೊಲ ಮಾಡುತ್ತಿರುವುದರಿಂದ ದರ ಹೆಚ್ಚಳಕ್ಕೆ ಕಾರಣವಾಗಿದೆ ಅಣ್ಣಿಗೇರಿ ತಾಲೂಕು ಹಳ್ಳಿಕೇರಿ ರೈತ ಬಸ‍ಣ್ಣೆಪ್ಪ ಚಂದರಗಿ ಹೇಳುತ್ತಾರೆ.