ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಸತ್ಯದ ಬಲದಿಂದ ಸವಾಲುಗಳನ್ನು ಎದುರಿಸಿ ಎಂದು ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ನಿರ್ಭಯಾನಂದ ಸರಸ್ವತಿ ಅಭಿಪ್ರಾಯಪಟ್ಟರು.ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ನೆರವೇರಿದ ‘ಮೇಕ್ ಮೆನ್ - ಮೇಕ್ ನೇಶನ್’ ಎಂಬ ಎರಡು ದಿನಗಳ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಪ್ರಕೃತಿಯ ರಹಸ್ಯವನ್ನು ಅರಿತವನೇ ಧೀರ. ವಸ್ತುವಿನ ಮೇಲಿನ ಆಕರ್ಷಣೆ ಹೊಟ್ಟೆಪಾಡಿನ ಅವಶ್ಯಕತೆಗೆ ಎಡೆಮಾಡಿಕೊಟ್ಟು ಕೊಳ್ಳುಬಾಕ ಸಂಸ್ಕೃತಿಯತ್ತ ಸಾಗುತ್ತದೆ. ವಸ್ತು ಶ್ರೀಮಂತಿಕೆ ಮಾನವನ ಪ್ರಾರಂಭಿಕ ಅವಶ್ಯಕತೆ ಎಂದೆನಿಸಿದರೂ ಇಂದ್ರಿಯ, ಮನಸ್ಸು ಹಾಗು ಬುದ್ಧಿಯ ನಿಯಂತ್ರಣದಿಂದ ಮಾನವನು ನಿಜಾರ್ಥದಲ್ಲಿ ಪ್ರಕೃತಿಯ ಅರಸನಾಗುತ್ತಾನೆ ಎಂದರು.ಇಂತಹ ಉದಾತ್ತ ಚಿಂತನೆಗಳೇ ಚಂದ್ರಗುಪ್ತ ಮೌರ್ಯ, ಅಶೋಕರಿಗಿಂತ ಬುದ್ಧ, ಚಾಣಕ್ಯ, ವಿದ್ಯಾರಣ್ಯ, ಸ್ವಾಮಿ ವಿವೇಕಾನಂದರನ್ನು ಧೀರರನ್ನಾಗಿಸಿತು. ಸತ್ಯವಚನ ಪರಿಪಾಲನೆಯಿಂದ, ಸತ್ಯದಿಂದಷ್ಟೇ ಜಯವೆಂಬ ಮಹೋನ್ನತ ಧ್ಯೇಯದೊಂದಿಗೆ ಸಾಗಿದ ಭಾರತವು ಒಂದು ವಿಶ್ವವಿದ್ಯಾಲಯವಾಗಿತ್ತು ಎಂದರು.ಬೆಂಗಳೂರಿನ ಶ್ರೀಭವತಾರಿಣಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜಿ ವಿವೇಕಮಯಿಯವರು, ‘ಗುರುವೆಂದರೆ ಲಘುವಲ್ಲ’ ಎಂಬ ವಿಷಯ ಕುರಿತು ಮಾತನಾಡಿ, ರಾಷ್ಟ್ರವೆಂದರೆ ಕೇವಲ ಭೌಗೋಳಿಕವಲ್ಲ, ಅಸಂಖ್ಯಾತ ಭಾವನೆಗಳ ಮೊತ್ತ. ಗುರುವು ತನ್ನ ಶಿಷ್ಯನಿಗೆ ಉದಾತ್ತ ಭಾವನೆಗಳನ್ನು ಮತ್ತು ಆದರ್ಶಗಳನ್ನು ಮನವರಿಕೆ ಮಾಡಿಕೊಡಬೇಕು ಎಂದರು.ಇಂತಹ ಚಿಂತನೆಗಳನ್ನು ಜೀವನಾಡಿಯಾಗಿಸಿ ಮುಗ್ಧ ಮಕ್ಕಳ ಬದುಕಿನಲ್ಲಿಜಾಗೃತಿ ಮೂಡಿಸಿ, ಜೀವನ ಸಾರ್ಥಕ್ಯದ ಕಡೆಗೆ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಕನದ್ದು. ಮಾನವನನ್ನು ಸ್ವಾರ್ಥದಿಂದ ಮುಕ್ತಗೊಳಿಸಿ ಸಮಾಜ, ರಾಷ್ಟ್ರ ಹಾಗು ಮನುಕುಲಕ್ಕೆ ಉಪಯುಕ್ತವಾಗುವ ವ್ಯಕ್ತಿತ್ವ ವೈಶಾಲ್ಯತೆಗೆ ಸನ್ನದ್ಧಗೊಳಿಸುವ ಗುರುವುತನ್ನಕರ್ತವ್ಯವನ್ನು ಲಘುವಾಗಿ ಪರಿಗಣಿಸಬಾರದು ಎಂದು ಕಿವಿಮಾತು ಹೇಳಿದರು.ಮೈಸೂರು ಶ್ರೀರಾಮಕೃಷ್ಣಾಶ್ರಮದ ಪೂಜ್ಯ ಸ್ವಾಮಿ ಮಹಾಮೇಧಾನಂದಜೀ ಮಹಾರಾಜರು ಮಾತನಾಡಿ, ಮಕ್ಕಳ ಬದುಕಿಗೆ ಮಾತಾಪಿತೃಗಳು ಮತ್ತು ಗುರುಗಳೇ ಪಥದರ್ಶಿಗಳು ಹಾಗು ಜೀವನ ಶಿಕ್ಷಣದ ಅರಿವನ್ನು ತಿಳಿಹೇಳುವ ನಿಘಂಟುಗಳು. ಅವರ ಬದುಕು, ನಡೆವಳಿಕೆಗಳೇ ಕಗ್ಗಂಟಾದರೆ ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗೋಪಾಯಎಲ್ಲುಂಟು? ಎಂದು ಪ್ರಶ್ನಿಸಿದರು. ಬೆಂಗಳೂರಿನ ಮಹಾಮಹೋಪಾಧ್ಯಾಯ ಡಾ. ಎಸ್‌ರಂಗನಾಥ್ ‘ಶಿಕ್ಷಕನ ಮುಂದಿರುವ ಸವಾಲುಗಳು ಮತ್ತು ಪರಿಹಾರೋಪಾಯ’ ಎಂಬ ವಿಷಯ ಕುರಿತು ಮಾತನಾಡಿ , ಶಿಕ್ಷಕರೇ, ನಿಮ್ಮಲ್ಲಿ ಪ್ರಾಮಾಣಿಕತೆ, ಜ್ಞಾನದಾಹ, ಹಾಸ್ಯಪ್ರಜ್ಞೆ, ಸನ್ನಡತೆ, ಪರಂಪರೆಯಲ್ಲಿ ಅಚಲವಾದ ನಂಬಿಕೆ, ವಿಷಯ ಪ್ರಸ್ತಾವನೆಯಲ್ಲಿ ನಿಖರತೆ, ನಿರ್ದಿಷ್ಟತೆಗಳು ಅತ್ಯವಶ್ಯಕ. ಬುದ್ಧಿವಂತರನ್ನು ಉಪೇಕ್ಷಿಸದೇ ಸಾಮಾನ್ಯರನ್ನು ಬುದ್ಧಿವಂತರ ಮಟ್ಟಕ್ಕೆ ಏರಿಸುವುದೇ ಶಿಕ್ಷಕನ ಜೀವನ ಹೋರಾಟ ಆಗಬೇಕು ಎಂದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಎರಡು ನೂರೈವತ್ತಕ್ಕೂ ಅಧಿಕ ಪ್ರೌಢಶಾಲಾ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವೇದಘೋಷ, ಭಜನೆ ಮತ್ತು ಪ್ರಶ್ನೋತ್ತರಗಳು ಕಾರ್ಯಾಗಾರದ ಮುಖ್ಯ ಅಂಶಗಳಾಗಿದ್ದವು. ಆಶ್ರಮದಸ್ವಾಮಿ ಧೀರಾನಂದಜಿ, ಸ್ವಾಮಿ ಪರಮಾನಂದ ಓಂ, ಪ್ರಾಧ್ಯಾಪಕಿ ಡಾ. ಕೆ.ವಿಅನಸೂಯ, ನಿವೃತ್ತ ಅಧಿಕಾರಿ ಗೋಪಾಲಕೃಷ್ಣೇಗೌಡ, ಪ್ರಾಂಶುಪಾಲ ಶ್ರೀಮಂಜುನಾಥ್, ಹಿರಿಯ ಶಿಕ್ಷಣ ತಜ್ಞೆ ಪ್ರೊ. ಬಿ.ಜಿ ಲಲಿತಾ, ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಹಾಗು ತುಮಕೂರು ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್‌ರವರು ಉಪಸ್ಥಿತರಿದ್ದರು.ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ಗಂ. ದಯಾನಂದ್ ಸ್ವಾಗತಿಸಿದರೆ ಚಿಂತಕಿ ಸುಷ್ಮಾ ಸುರೇಶ್ ವಂದಿಸಿದರು.
------------------------------ ಕೋಟ್...ವಿಶ್ವವಿಖ್ಯಾತ ತತ್ತ್ವಜ್ಞಾನಿಗಳೆನಿಸಿದ ವಾಲ್ಟೇರ್, ಅರಿಸ್ಟಾಟಲ್, ಪ್ಲಾಟೋ ಮೊದಲಾದವರು ಭಾರತದ ತತ್ವ ಚಿಂತನಗೆ ತಲೆಬಾಗಿದರು. ಆದರೆ ಕಾಲ ಕಳೆದಂತೆ ಮತಿಹೀನ ಜನರು ಚಿಂತಾಕ್ರಾಂತರಾಗಿ ಒಂದೆಡೆ ಸೇರಿ ಜನರನ್ನು ಚಿಂತೆಯ ಸಂತೆಯಲ್ಲಿ ದಾರಿತಪ್ಪಿಸುತ್ತಿದ್ದಾರೆ. ಶಿಕ್ಷಕರು ಗುರುಗಳಾಗಬೇಕು, ಸಂಶೋಧಕರಾದಾಗಷ್ಟೇ ಮಾನವ ಸಂಕುಲ ಮಹೋನ್ನತಿ ಪಡೆಯುವ ಪಥದಲ್ಲಿ ಸಾಗಬಹುದು.
- ಸ್ವಾಮಿ ನಿರ್ಭಯಾನಂದ ಸರಸ್ವತಿ, ರಾಮಕೃಷ್ಣ-ವಿವೇಕಾನಂದ ಆಶ್ರಮ. ಗದಗ-ವಿಜಯಪುರ.