ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಸರ್ಕಾರಿ ಗೋಮಾಳ ಜಮೀನಿನ ವಿಚಾರ ಹಾಗೂ ಹಳೇ ದ್ವೇಷದ ಹಿನ್ನೆಲೆಯಲ್ಲಿ ಮನೆಯಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅದೇ ಗ್ರಾಮದ 4ಜನ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಗೆ ಗಂಭೀರ ಗಾಯವಾದ ಘಟನೆ ತಾಲೂಕಿನ ವೀರಮ್ಮನಹಳ್ಳಿಯಲ್ಲಿ ನಡೆದಿದೆ. ಪಾಲಾನಾಯ್ಕ (50) ಗಂಭೀರವಾಗಿ ಗಾಯಗೊಂಡ ವ್ಯಕ್ತಿ.ಅದೇ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಪಾಲಾನಾಯ್ಕ ಈ ಮೊದಲೇ ಹುಲ್ಲಿನ ಬಣಿವೆ ಹಾಕಿಕೊಂಡಿದ್ದು ಅದೇ ಸ್ಥಳದಲ್ಲಿ ಬೆಳಿದಿದ್ದ ಜಾಲಿ ಕಂಟಿಗಳನ್ನು ನಾರಾಯಣಪ್ಪ ಸ್ವಚ್ಛಗೊಳಿಸುವಾಗ ಅಲ್ಲಿಗೆ ಬಂದ ಪಾಲಾನಾಯ್ಕ ಇದನ್ನು ಪ್ರಶ್ನಿಸಿದ್ದಾರೆ. ಆಗ ಮಾತಿಗೆ ಮಾತು ಬೆಳಿದಿದೆ ಜಗಳವಾಗಿದೆ. ಆಗ ಗ್ರಾಮಸ್ಥರು ಜಗಳ ಬಿಡಿಸಿ ಕಳುಹಿಸಿದ್ದರು. ನಂತರ ಅಲ್ಲಿಂದ ಮನೆಗೆ ಬಂದ ಪಾಲಾನಾಯ್ಕ ಊಟ ಮಾಡುತ್ತಿದ್ದರು. ಅದೇ ವೇಳೆ ಮನೆಗೆ ನುಗ್ಗಿದ ನಾರಾಯಣಪ್ಪ ಹಾಗೂ ಇತರೇ ಮೂವರು ಪಾಲಾನಾಯ್ಕನ ಮೇಲೆ ಕೊಡಲಿ ಹಾಗೂ ಇತರೇ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ. ಈ ವಿಷಯ ತಿಳಿದು ಗ್ರಾಮಸ್ಥರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಾಲಾನಾಯ್ಕನನ್ನು ತಾಲೂಕು ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿಂದ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಪಾಲಾನಾಯ್ಕ ಸ್ಥಿತಿ ಗಂಭೀರವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗಾಯಾಳುವಿನ ಸಂಬಂಧಿಯಾದ ಹೇಮಂತ್ ನಾಯ್ಕ ನೀಡಿದ ದೂರಿನ ಮೇರೆಗೆ ಹಲ್ಲೆ ಮಾಡಿದ ನಾರಾಯಣಪ್ಪ, ಅಶ್ವತಮ್ಮ , ಬ್ರಹ್ಮೇಶ್, ಮುರಳಿ ಅನ್ನುವರ ವಿರುದ್ಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.