ದ.ಕ.: ಐವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮೂವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ

| Published : Oct 31 2024, 12:50 AM IST

ದ.ಕ.: ಐವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮೂವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ವಿಶ್ವನಾಥ ಸುವರ್ಣ(ಮಾಧ್ಯಮ), ಸದಾಶಿವ ಶೆಟ್ಟಿ(ಹೊರನಾಡು) ಹಾಗೂ ರೀಟಾ ನರೋನ್ಹಾ(ಸಮಾಜಸೇವೆ)ಇವರಿಗೆ ಲಭಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2024ರ ಪಟ್ಟಿಯನ್ನು ಸರ್ಕಾರ ಬುಧವಾರ ಪ್ರಕಟಿಸಿದೆ. ಇದರಲ್ಲಿ ದ.ಕ.ಜಿಲ್ಲೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು ಐದು ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಸಂದರ್ಭ ಪ್ರಕಟಿಸಲಾದ ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ಪ್ರಶಸ್ತಿ-2024ರಲ್ಲಿ ದ.ಕ.ಜಿಲ್ಲೆಯ ಮೂರು ಮಂದಿಗೆ ಲಭಿಸಿದೆ.

ರಾಜ್ಯೋತ್ಸವ ಪ್ರಶಸ್ತಿ ಪೈಕಿ ಜಾನಪದ ಕ್ಷೇತ್ರದಲ್ಲಿ ಲೋಕಯ್ಯ ಶೇರ (ಭೂತಾರಾಧನೆ), ಹೊರನಾಡ ವಿಭಾಗದಲ್ಲಿ ಡಾ.ತುಂಬೆ ಮೊಹಿಯುದ್ದೀನ್‌(ತುಂಬೆ ಗ್ರೂಪ್‌ ಯುಎಇ, ಅಮೆರಿಕ), ಯಕ್ಷಗಾನ ಕ್ಷೇತ್ರದಲ್ಲಿ ಸೀತಾರಾಮ ತೋಳ್ಪಾಡಿತ್ತಾಯ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಪ್ರಶಾಂತ್‌ ಮಾಡ್ತಾ, ಶಿಕ್ಷಣ ಕ್ಷೇತ್ರದಲ್ಲಿ ಡಾ.ರಾಜೇಂದ್ರ ಶೆಟ್ಟಿ ಇವರಿಗೆ ಲಭಿಸಿದೆ.

ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ವಿಶ್ವನಾಥ ಸುವರ್ಣ(ಮಾಧ್ಯಮ), ಸದಾಶಿವ ಶೆಟ್ಟಿ(ಹೊರನಾಡು) ಹಾಗೂ

ರೀಟಾ ನರೋನ್ಹಾ(ಸಮಾಜಸೇವೆ)ಇವರಿಗೆ ಲಭಿಸಿದೆ. ರಾಜ್ಯೋತ್ಸವ ಪ್ರಶಸ್ತಿ ಪಡೆದವರು:

ಬಿ. ಸೀತಾರಾಮ ತೋಳ್ಪಾಡಿತ್ತಾಯ 51 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆಧರ್ಮಸ್ಥಳ ಅಗ್ರಹಾರ ನಿವಾಸಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಕಳೆದ 51 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಬಿ. ರಾಘವೇಂದ್ರ ತೋಳ್ಪಾಡಿತ್ತಾಯರು ಉತ್ತಮ ಭಾಗವತರಾಗಿದ್ದು, ಅವರ ಪ್ರೇರಣೆಯಿಂದ ಪ್ರಾಥಮಿಕ ಶಾಲಾ ಹಂತದಿಂದಲೇ ವೇಷಗಾರಿಕೆ ಹಾಗೂ ಹಿಮ್ಮೇಳವನ್ನು ಕಲಿತರು. 1972ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಆರಂಭವಾಯಿತು. ಈ ಸಂದರ್ಭದಲ್ಲಿ ಕುರಿಯ ವಿಠಲಶಾಸ್ತ್ರೀ, ಮಾಂಬಾಡಿ ನಾರಾಯಣ ಭಾಗವತರಂತಹ ಮಹಾನ್ ಗುರುಗಳಿಂದ ಯಕ್ಷಗಾನ ನಾಟ್ಯ, ಹಾಗೂ ಚಂಡೆ, ಮದ್ದಳೆ ವಾದನದಲ್ಲಿ ಅಭ್ಯಾಸ ನಡೆಸಿದರು. ಕಳೆದ 51 ವರ್ಷಗಳಿಂದ ನಿರಂತರ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆ ಕ್ಷೇತ್ರದಲ್ಲಿ ಹಿಮ್ಮೇಳ ವಾದಕರಾಗಿ ಶ್ರೇಷ್ಠ ಮಟ್ಟದ ಮದ್ದಳೆಗಾರರಾಗಿ ಗುರುತಿಸಲ್ಪಟ್ಟಿದ್ದಾರೆ. ಆಕಾಶವಾಣಿಯಲ್ಲಿ ‘ಎ’ ಗ್ರೇಡ್ ಕಲಾವಿದರಾಗಿರುವ ಇವರು 2016- 17 ನೇ ಸಾಲಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಳೆದ 50 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆ ಸಲ್ಲಿಸುತ್ತಿದ್ದು ಧರ್ಮಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬಸ್ಥರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ. ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಕಾರ್ಯದರ್ಶಿಯಾಗಿ, ಅದರ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಲೋಕಯ್ಯ ಶೇರ (ಜಾನಪದ)

ಲೋಕಯ್ಯ ಶೇರ ಇವರು ಜಾನಪದ ದೈವ ನರ್ತಕರು. ಪರಿಶಿಷ್ಟ ಜಾತಿಯ ನರೆಯದ ಜನಾಂಗಕ್ಕೆ ಸೇರಿದವರು. ಬಂಟ್ವಾಳದ ಬರಿಮಾರ್‌ನ ಶೇರ ಎಂಬಲ್ಲಿ ಪತ್ನಿ ನೀಲಮ್ಮ, ಪುತ್ರ ದಯಾನಂದ, ಸೊಸೆಯಾದ ಪೂರ್ಣಿಮಾ ಇವರೊಂದಿಗೆ ವಾಸವಿದ್ದಾರೆ.

ಸುಮಾರು 52 ವರ್ಷಗಳಿಂದ ಕಲಾವಿದನಾಗಿ ಜನಪದ ದೈವರಾಧನೆ ನರ್ತಕ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುಳುನಾಡಿನ ಕಾರಣಿಕ ದೈವಗಳಾದ ರಕ್ತೇಶ್ವರಿ, ಧೂಮಾವತಿ, ಪಂಜುರ್ಲಿ, ಕಾನಲ್ತಾಯ ಮಹಾಕಾಳಿ, ಶಿರಾಡಿ ದೈವ, ಚಾಮುಂಡೇಶ್ವರಿ, ಕಲ್ಲುರ್ಟಿ-ಕಲ್ಕುಡ ಇತ್ಯಾದಿ ದೈವಗಳ ನೇಮೋತ್ಸವದಲ್ಲಿ ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಕುಲದೈವ ಸೀಮೆದೈವ, ರಾಜನ್ ದೈವ, ಗ್ರಾಮದೈವ ಮುಂತಾದ ದೈವಗಳಿಗೂ ನೇಮವನ್ನು ಕಟ್ಟಿದ್ದಾರೆ. 2002 ನೇ ಸಾಲಿನ ನಲ್ಕೆಯವರ ಬಂಟ್ವಾಳ ಸಮಾಜ ಸೇವಾ ಸಂಘದ ಸ್ಥಾಪಕರಾಗಿದ್ದಾರೆ. ಡಾ.ಪ್ರಶಾಂತ್ ಮಾಡ್ತ (ಸಾಹಿತ್ಯ) ಡಾ.ಪ್ರಶಾಂತ್‌ ಮಾಡ್ತಾ ಇವರು ಮೂಲತಃ ಸುಳ್ಯದವರು. ಮಂಗಳೂರಿನ ಸಂತ ಅಲೋಶಿಸ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಕನ್ನಡದ ಪ್ರಪ್ರಥಮ ಸಮಾನಾರ್ಥಕ ಹಾಗೂ ವಿರುದ್ದಾರ್ಥಕ ಶಬ್ದಕೋಶ ‘ಪದನಿಧಿ’ (ಸುಮಾರು ೧೦೦೦ ಪುಟಗಳು)ಯನ್ನು ಇವರು ಸಂಪಾದಿಸಿ ಪ್ರಕಟಿಸಿದ್ದಾರೆ. ಕೊಂಕಣಿಯಲ್ಲಿ ಎರಡು ಶಬ್ದಕೋಶಗಳನ್ನು ಸಂಪಾದಿಸಿದ್ದಾರೆ. ಮೂರು ಭಾಷೆಗಳಲ್ಲಿ ಸುಮಾರು ೧೪ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ರೆವೆರೆಂಡ್ ಕಿಟ್ಟಲ್ ಹಾಗೂ ರೆವೆರೆಂಡ್ ಮಫೆ- ಅವರಂತೆ ಕನ್ನಡ-ಕೊಂಕಣಿ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿರುತ್ತಾರೆ. ಸಾಹಿತ್ಯ, ಸಂಶೋಧನಾ ಕ್ಷೇತ್ರಗಳಲ್ಲಿ ಇವರ ಮಹತ್ತರ ಸೇವೆಯನ್ನು ಗುರುತಿಸಿ 2008ರಲ್ಲಿ ಆಂಗ್ಲ ಪತ್ರಿಕೆ ‘ಇಂಡಿಯಾ ಟುಡೆ’ ಇವರನ್ನು ‘ಭಾರತದ ೫೦ ಹರಿಕಾರರಲ್ಲಿ ಒಬ್ಬರು’ ಎಂದು ಆಯ್ಕೆಮಾಡಿತ್ತು.

ಡಾ.ತುಂಬೆ ಮೊಯ್ದಿನ್‌ (ಹೊರನಾಡು)

ಯುಎಇ ಯಲ್ಲಿ ಪ್ರತಿಷ್ಠಿತ ಉದ್ಯಮ, ಶಿಕ್ಷಣ ಸಮೂಹ ಕಟ್ಟಿ ಬೆಳೆಸಿದ ಡಾ. ತುಂಬೆ ಮೊಯ್ದಿನ್ ಇವರು 21ನೇ ವಯಸ್ಸಿಗೇ ಉದ್ಯಮ ಜಗತ್ತಿಗೆ ಪ್ರವೇಶಿಸಿದ್ದರು. ಡಾ.ತುಂಬೆ ಮೊಯ್ದಿನ್ ಅವರದ್ದು ಗಲ್ಫ್ ದೇಶಗಳ ಉದ್ಯಮ ವಲಯದಲ್ಲಿ ಇಂದು ಬಹು ದೊಡ್ಡ ಹೆಸರು. ಮಂಗಳೂರಿನ ತುಂಬೆ ಮೂಲದ ಮೊಯ್ದಿನ್ ಅವರು ತಮ್ಮ ತಂದೆ ದಿವಂಗತ ಡಾ. ಬಿ ಅಹಮದ್ ಹಾಜಿ ಮೊಹಿಯುದ್ದೀನ್ ಅವರು ಸ್ಥಾಪಿಸಿದ ದೊಡ್ಡ ಉದ್ಯಮದ ವ್ಯಾಪ್ತಿಯನ್ನು ವಿದೇಶಗಳಲ್ಲೂ ವಿಸ್ತರಿಸಿ ಯಶಸ್ವಿಯಾಗಿ ಮುನ್ನಡೆಸಿದವರು.ಮಾರ್ಚ್ 23, 1957ರಲ್ಲಿ ಮಂಗಳೂರಿನಲ್ಲಿ ಜನಿಸಿದರು ತುಂಬೆ ಮೊಯ್ದಿನ್. 1997 ರಲ್ಲಿ ಡಾ.ತುಂಬೆ ಮೊಯ್ದೀನ್ ಅವರು ಯುಎಇಯಲ್ಲಿ ತುಂಬೆ ಗ್ರೂಪ್ ಸ್ಥಾಪಿಸಿದರು. ೧೯೯೮ ರಲ್ಲಿ ಅಜ್ಮಾನ್ ನ ಆಡಳಿತಗಾರರ ಆಹ್ವಾನದ ಮೇರೆಗೆ ಅವರು ಅಜ್ಮಾನ್ ನಲ್ಲಿ ಪ್ರಾರಂಭಿಸಿದ ಗಲ್ಫ್ ಮೆಡಿಕಲ್ ಕಾಲೇಜು ಇವತ್ತು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಾಗಿ (ಜಿಎಂಯು) ಇಡೀ ಗಲ್ಫ್ ದೇಶಗಳಲ್ಲೇ ಪ್ರತಿಷ್ಠಿತ ವೈದ್ಯಕೀಯ ವಿಶ್ವ ವಿದ್ಯಾಲಯವಾಗಿ ಭಾರೀ ಪ್ರಸಿದ್ಧಿ ಪಡೆದಿದೆ. ಅದು ಇಡೀ ಗಲ್ಫ್ ದೇಶಗಳಲ್ಲೇ ಪ್ರಪ್ರಥಮ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯ. 98 ಕ್ಕೂ ಹೆಚ್ಚು ದೇಶಗಳ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಎಂಯು ನ ಆರು ಕಾಲೇಜುಗಳ 28 ಕೋರ್ಸುಗಳಲ್ಲಿ ಕಲಿಯುತ್ತಿದ್ದಾರೆ. 50 ಕ್ಕೂ ಹೆಚ್ಚು ದೇಶಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ಜಿಎಂಯುನಲ್ಲಿದ್ದಾರೆ.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಡಾ ತುಂಬೆ ಮೊಯ್ದಿನ್, ಅವರ ಸಾಧನೆಗೆ ಮಧ್ಯಪ್ರಾಚ್ಯದ ಫೋರ್ಬ್ಸ್ ನಿಯತಕಾಲಿಕವು ‘ಅರಬ್ ಪ್ರಪಂಚದ ಅಗ್ರ ಭಾರತೀಯ ಉದ್ಯಮ ನಾಯಕ’ ಗೌರವ ನೀಡಿದೆ.ತುಂಬೆ ಮೊಯ್ದಿನ್ ಅವರ ಪತ್ನಿ ಝೋಹ್ರಾ ಮೊಯ್ದಿನ್ ಅವರು ಚಿತ್ರ ಕಲಾವಿದರಾಗಿ ಛಾಪು ಮೂಡಿಸಿದವರು. ಮೊಯ್ದಿನ್ ಅವರ ಇಬ್ಬರು ಪುತ್ರರು ಅಕ್ಬರ್ ಮೊಯ್ದಿನ್ ಹಾಗು ಅಕ್ರಮ್ ಮೊಯ್ದಿನ್. ಇಬ್ಬರೂ ತಂದೆಯ ಜೊತೆ ತುಂಬೆ ಸಮೂಹದಲ್ಲಿ ಸಕ್ರಿಯವಾಗಿದ್ದಾರೆ.ಸುವರ್ಣ ಮಹೋತ್ಸವ ಪ್ರಶಸ್ತಿ ಪಡೆದವರು:

ವಿಶ್ವನಾಥ ಸುವರ್ಣ(ಮಾಧ್ಯಮ)ಮೂಲತಃ ಮಂಗಳೂರು ಬಲ್ಲಾಳ್‌ಬಾಗ್‌ ನವರಾದ ವಿಶ್ವನಾಥ ಸುವರ್ಣ ಅವರು ಪ್ರಜಾವಾಣಿ ದಿನಪತ್ರಿಕೆಯ ಮುಖ್ಯಛಾಯಗ್ರಾಹಕರಾಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬೆಂಗಳೂರು ಅಲ್ಲದೆ ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಪತ್ರಿಕಾ ಛಾಯಗ್ರಾಹಕರಾಗಿ ದುಡಿದ ಅವರು ಬೀದರಿನಿಂದ ಬೇಕಲಕೋಟೆ ತನಕ ರಾಜ್ಯ ಎಲ್ಲ ಜಿಲ್ಲೆಗಳ ಕೋಟೆಕೊತ್ತಲಗಳ ಬೃಹತ್ ಛಾಯಾ ಸಂಪುಟ ಕರುನಾಡಿಮನ ಕೋಟೆಗಳು, ಕನ್ನಡ ನಾಡಿನ ಬಣ್ಣದ ಬಾನಾಡಿಗಳು ಎಂಬ ಪಕ್ಷಿ ಲೋಕದ ಛಾಯಾಕೃತಿಗಳನ್ನು ಪ್ರಕಟಿಸಿದ್ದು, ಸದ್ಯದಲ್ಲೆ ಕರ್ನಾಟಕದ ವಾಸ್ತುಶಿಲ್ಪ ದೇವಾಲಯಗಳ ಬಗ್ಗೆ ಕೃತಿಯೊಂದನ್ನು ಪ್ರಕಟಿಸಲು ಸಿದ್ಧತೆ ನಡೆಸಿದ್ದಾರೆ.ಮಂಗಳೂರಿನ ಕೆನರಾ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಸಹೋದರ ದಿ. ಸುಂದರನಾಥ ಸುವರ್ಣ ಅವರ ಸಹಕಾರದಿಂದ ಬೆಂಗಳೂರಿನಲ್ಲಿ ಛಾಯಗ್ರಾಹಕ ವೃತ್ತಿ ಆರಂಭಿಸಿದರು. ದೊಂಬಿ ಗಲಭೆಗಳಂತಹ ಸಂದರ್ಭದಲ್ಲಿ ದಿಟ್ಟತನದಿಂದ ಛಾಯಾಗ್ರಹಣ ನಡೆಸಿ ಗಮನ ಸೆಳೆದಿದ್ದರು.ಡಾ.ರೀಟಾ ನೊರೊನ್ಹಾ(ಸಮಾಜ ಸೇವೆ)ಮಂಗಳೂರಿನ ಸ್ಕೂಲ್‌ ಆಫ್‌ ಸೋಷಿಯಲ್‌ ವರ್ಕ್ ರೋಶನಿ ನಿಲಯದಲ್ಲಿ 1971-2009ರ ತನಕ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆಯಾಗಿ, ಡೀನ್‌ ಆಗಿ ಕೆಲಸ ನಿರ್ವಹಿಸಿ, ನಿವೃತ್ತರಾಗಿರುವ ಡಾ.ರೀಟಾ ನೊರೊನ್ಹಾ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.ಅನ್ಯಾಯದ ವಿರುದ್ಧದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡವರು. ರೈತರು (ಮಹಿಳಾ ರೈತರನ್ನು ಒಳಗೊಂಡಂತೆ) ಹಕ್ಕುಗಳ ಪ್ರಚಾರ ಮತ್ತು ಸುಸ್ಥಿರ/ಸಾವಯವ ಕೃಷಿ, ತಮ್ಮ ಸಹಕಾರಿ ಸಂಘಗಳ ಮೂಲಕ ತರಕಾರಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಬೆಂಬಲ, ಬೀದಿ ಬದಿ ವ್ಯಾಪಾರಿಗಳ ಜೀವನಾಧಾರ ಹಕ್ಕುಗಳ ಉತ್ತೇಜನ, ಸುಸ್ಥಿರ ಅಭಿವೃದ್ಧಿ, ಲಿಂಗ ಸಮಾನತೆ, ಸಾಮಾಜಿಕ ಸಂವೇದನೆ ಮತ್ತು ಮಾನವ ಹಕ್ಕುಗಳು ಮೊದಲಾದ ಹೋರಾಟಗಳಲ್ಲಿ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ.ಮಾನವ ಅಭಿವೃದ್ಧಿಯಲ್ಲಿನ ಲಿಂಗ ಸಮಸ್ಯೆಗಳ ಕುರಿತು ಕರ್ನಾಟಕದ ವಿವಿಧ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳು ಮತ್ತು ಸಂಬಂಧಪಟ್ಟಸರ್ಕಾರಿ ಇಲಾಖೆಯ ಸಿಬ್ಬಂದಿಗಳ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಗ್ರ ಆರೋಗ್ಯ ಪ್ರಚಾರ ಮತ್ತು ಕ್ಯಾನ್ಸರ್‌ನಂತಹ ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆಗೆ ಸಂಬಂಧಿಸಿದ ಸಮಸ್ಯೆಗಳು. ಸಾಮಾಜಿಕ ತಾರತಮ್ಯ ಮತ್ತು ನಿರ್ದಿಷ್ಟವಾಗಿ ಲಿಂಗ ಸಮಾನತೆ/ಅಸಮಾನತೆ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿ ಸಾಮಾಜಿಕ ಪ್ರಸ್ತುತತೆಯ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸಿದ್ದಾರೆ.ಶೈಕ್ಷಣಿಕ ಮತ್ತು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿ ಬೋರ್ಡ್‌ ಆಫ್‌ ಸ್ಟಡೀಸ್‌ (ಎಂಎಸ್‌ಡಬ್ಲ್ಯೂ) ಅಧ್ಯಯನ ಮಂಡಳಿ ಅಧ್ಯಕ್ಷೆ, ಪಠ್ಯಕ್ರಮ ವಿನ್ಯಾಸ ಮತ್ತು ಮೌಲ್ಯ ಮಾಪನ ಸಂಬಂಧಿತ ವಿಷಯಗಳ ಹೊರತಾಗಿ ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಂಸ್ಥೆಗಳು ಮತ್ತು ಸಮಿತಿಗಳಲ್ಲಿ ಅನುಭವ ಹೊಂದಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಸಚಿವಾಲಯದ ಅಡಿಯಲ್ಲಿ ಒಂದು ಸ್ವಾಯುತ್ತ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆಯಾಗಿ ಕೆಲಸ ಮಾಡಿದ್ದಾರೆ.