ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕಳೆದೆರೆಡು ದಿನಗಳಿಂದ ಮುಂಗಾರು ಮಳೆ ಸುರಿಯುತ್ತಿದ್ದು, ಸೋಮವಾರ ಕೆಲವೆಡೆ ವರ್ಷಧಾರೆ ಬಿಡುವು ನೀಡಿದರೂ ಪ್ರವಾಹ ತಗ್ಗಿಲ್ಲ. ಕೊಡಗಿನಲ್ಲಿ ಹಾರಂಗಿ ಒಳಹರಿವು ಹೆಚ್ಚಿದ್ದು, ವಿಜಯನಗರ ಜಿಲ್ಲೆಯಲ್ಲಿ 50 ಎಕರೆ ಜಮೀನಿಗೆ ತುಂಗಭದ್ರಾ ನದಿ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಅಬ್ಬರಿಸುತ್ತಿದ್ದ ಮಳೆ ಸೋಮವಾರ ಬಿಡುವು ನೀಡಿ 24 ಗಂಟೆ ಅವಧಿಯಲ್ಲಿ ಸರಾಸರಿ 19.52 ಮಿ.ಮೀ. ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ 11645 ಕ್ಯುಸೆಕ್ ನೀರಿನ ಒಳಹರಿವು ಕಂಡುಬಂತು. ಇನ್ನು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಮಳೆ ತಗ್ಗಿದ್ದು, ಜಲಾವೃತ ರಸ್ತೆಗಳು ನೀರಿನಿಂದ ಮುಕ್ತವಾಗಿ ಜನಜೀವನ ಸಹಜ ಸ್ಥಿತಿಯತ್ತ ನಿಧಾನವಾಗಿ ಮರಳುತ್ತಿದೆ. ಆದರೆ, ಸತತ ಸುರಿದ ಮಳೆಯಿಂದ ಗುಡ್ಡ, ಭೂಕುಸಿತ ಮುಂದುವರಿದಿದೆ. ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169ರ ಶೃಂಗೇರಿ ಕೊಪ್ಪ ಸಂಪರ್ಕ ಆನೆ ಗುಂದ ಕಡೆಮನೆ ಬಳಿ ಬೃಹತ ಗುಡ್ಡ ಕುಸಿದು ರಸ್ತೆಗೆ ಬೀಳಲಾರಂಬಿಸಿದೆ. ಪಶ್ಚಿಮಘಟ್ಟ ತಪ್ಪಲಿನ ಕೆರೆಕಟ್ಟೆ ಸುತ್ತಲಿನ ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಮಳೆ ಕಡಿಮೆ ಆಗಿದ್ದರಿಂದ ತುಂಗಾನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಆದರೆ, ಶೃಂಗೇರಿ ಮಠದ ತುಂಗಾನದಿ ದಡದ ಕಪ್ಪೆಶಂಕರ ದೇವಾಲಯ, ತಗ್ಗು ಪ್ರದೇಶಗಳು ಇನ್ನೂ ಮುಳುಗಡೆಯಾಗಿಯೇ ಇದೆ.

ನದಿ ತೀರದ ರೈತರ ಪರದಾಟ:

ರಾಜ್ಯದಲ್ಲಿಯೇ ವಿಜಯನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೇ ಶೇ.67ರಷ್ಟು ಮಳೆ ಕೊರತೆ ಉಂಟಾಗಿದೆ. ಆದರೆ, ಮಳೆ ಇಲ್ಲದಿದ್ದರೂ ಪ್ರವಾಹ ಭೀತಿ ಎದುರಿಸುವಂತಾಗಿದೆ. ಮಲೆನಾಡು ಪ್ರದೇಶದಲ್ಲಿ ಅಪಾರ ಪ್ರಮಾಣದ ಮಳೆಯಾಗಿದ್ದು, ತುಂಗಭದ್ರಾ ನದಿಗೆ ಒಳ ಹರಿವು ಹೆಚ್ಚಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದಂತೆಯೇ ಹೂವಿನಹಡಗಲಿ ತಾಲೂಕಿನ ಬನ್ನಿಮಟ್ಟಿ, ನಂದಿಗಾವಿ ಸೇರಿದಂತೆ ಇತರೆ ಗ್ರಾಮಗಳ ನದಿ ತೀರದದಲ್ಲಿ ಬೆಳೆ ಇದ್ದ 50 ಎಕರೆ ಜಮೀನಿಗೆ ನೀರು ನುಗ್ಗಿ ಹಾನಿಯಾಗಿದೆ. ನದಿ ತೀರದ 30 ಎಕರೆ ಚೆಂಡು ಹೂವು, 25 ಎಕರೆ ಮೆಕ್ಕೆಜೋಳ, 5 ಎಕರೆ ಚೌಳಿ ಬೆಳೆ, 10 ಎಕರೆ ಭತ್ತದ ಬೆಳೆಗಳಿಗೆ ನದಿ ನೀರು ನುಗ್ಗಿದೆ. ನದಿ ನೀರಿಗೆ ಚೆಂಡು ಹೂವು ಹಾಳಾಗುತ್ತದೆ ಎಂಬ ಕಾರಣಕ್ಕಾಗಿ, ರೈತರು ಪ್ರವಾಹ ನೀರಿನಲ್ಲೇ ಹೂವು ಕಟಾವು ಮಾಡುತ್ತಿದ್ದಾರೆ.ದಕ್ಷಿಣ ಕನ್ನಡ, ಉಡುಪಿ


ಜಿಲ್ಲೆ ಶಾಲೆಗೆ ಇಂದು ರಜೆ

ಮಂಗಳೂರು/ಉಡುಪಿ:ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮಂಗಳವಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದ. ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಜಿಲ್ಲಾಧಿಕಾರಿ ಅವರು ರಜೆ ಘೋಷಿಸಿದ್ದು, ಆದೇಶ ಉಲ್ಲಂಘಿಸಿ ತರಗತಿ ನಡೆಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.