ಜಿಲ್ಲೆಯಲ್ಲಿ ಪ್ರವಾಹ; ನೆರವಿನ ನಿರೀಕ್ಷೆಯಲ್ಲಿ ಸಂತ್ರಸ್ತರು !

| Published : Aug 05 2024, 12:43 AM IST

ಸಾರಾಂಶ

ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಗೆ ಆ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನೆರೆ ನಿರ್ವಹಣೆಗೆ ಹೆಚ್ಚಿನ ಅನುದಾನ, ಹೆಚ್ಚಿನ ಸೌಲಭ್ಯಸಿಗಬಹುದೇ ಎಂಬ ನಿರೀಕ್ಷೆ ಗರಿಗೆದರಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಗೆ ಆ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನೆರೆ ನಿರ್ವಹಣೆಗೆ ಹೆಚ್ಚಿನ ಅನುದಾನ, ಹೆಚ್ಚಿನ ಸೌಲಭ್ಯಸಿಗಬಹುದೇ ಎಂಬ ನಿರೀಕ್ಷೆ ಗರಿಗೆದರಿದೆ.

ಮಹಾರಾಷ್ಟ್ರ ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟದಿಂದ ಕೃಷ್ಣಾ, ವೇದಗಂಗಾ, ದೂಧಗಂಗಾ, ಘಟಪ್ರಭಾ ಸೇರಿದಂತೆ ಇತರೆ ನದಿಗಳಿಗೆ ಪ್ರವಾಹ ಬಂದಿದೆ. ನದಿ ತೀರದ ಗ್ರಾಮಸ್ಥರು ಮನೆಗಳನ್ನು ತೊರೆದು, ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆದಿದ್ದಾರೆ. ಅಲ್ಲದೆ, ಜಾನುವಾರು ಶಿಬಿರಗಳಲ್ಲಿ ಬಿಟ್ಟಿದ್ದಾರೆ. ಅತಿವೃಷ್ಟಿ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ನೂರಾರು ಕೋಟಿ ರು. ಆಸ್ತಿಪಾಸ್ತಿ ಹಾನಿಗೀಡಾಗಿದೆ. ನಷ್ಟ ಪರಿಹಾರ ಒದಗಿಸುವುದು, ಮೂಲಸೌಲಭ್ಯ ಕಲ್ಪಿಸುವುದು ಮತ್ತು ಮನೆ ಕಳೆದುಕೊಂಡವರಿಗೆ ಸೂರಿನ ವ್ಯವಸ್ಥೆ ಕಲ್ಪಿಸುವುದೇ ದೊಡ್ಡ ಸವಾಲಾಗಿದೆ.

ಅನುದಾನದ ನಿರೀಕ್ಷೆಯಲ್ಲಿ ನಿರಾಶ್ರಿತರು:

ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ, ವೇದಗಂಗಾ, ದೂಧಗಂಗಾ, ಘಟಪ್ರಭಾ, ಮಾರ್ಕಂಡೇಯ,ಮಲಪ್ರಭಾ, ಹಿರಣ್ಯಕೇಶಿ ನದಿಗಳ ಪ್ರವಾಹದ ಪರಿಣಾಮ ನದಿತೀರದಲ್ಲಿನ ಗ್ರಾಮಸ್ಥರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ತೋಟದ ಮನೆಯಲ್ಲಿದ್ದವರೆಲ್ಲರೂ ಮನೆ ಖಾಲಿ ಮಾಡಿದ್ದಾರೆ. ಕೆಲವರು ಕಾಳಜಿ ಕೇಂದ್ರದಲ್ಲಿದ್ದರೆ, ಮತ್ತೆ ಕೆಲವರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ನೆರೆ ಹಾವಳಿಯಿಂದ ಸಾಕಷ್ಟು ಗ್ರಾಮಗಳು ನಲುಗಿಹೋಗಿವೆ. ನೆರೆಪೀಡಿತ ಗ್ರಾಮಗಳು ಪರಿಹಾರದ ನಿರೀಕ್ಷೆಯಲ್ಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಳಗಾವಿ ಜಿಲ್ಲಾ ಪ್ರವಾಸ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಅಪಾರ ಹಾನಿ:

ಅತಿವೃಷ್ಟಿ ಹಾಗೂ ನೆರೆಹಾವಳಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, 232 ಗ್ರಾಮಗಳು ಜಲಾವೃತಗೊಂಡಿವೆ. ಜೂನ್‌ 1ರಿಂದ ಈವರೆಗೆ 6 ಜನರ ಜೀವಹಾನಿಯಾಗಿದ್ದು, 11 ಜಾನುವಾರುಗಳ ಜೀವ ಹಾನಿಯಾಗಿದೆ. ಒಟ್ಟು 14 ಮನೆಗಳು ಸಂಪೂರ್ಣವಾಗಿ ಬಿದ್ದಿದ್ದು, 925 ಮನೆಗಳು ಭಾಗಶಃ ಬಿದ್ದಿವೆ. 41700 ಹೆಕ್ಟೇರ್‌ ಪ್ರದೇಶದಲ್ಲಿನ ಕೃಷಿ ಬೆಳೆ ಹಾಗೂ 80 ಹೆಕ್ಟೇರ್‌ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ಹಾನಿಗೀಡಾಗಿದೆ. ರಸ್ತೆಗಳು, ಸೇತುವೆಗಳು, ವಿದ್ಯುತ್‌ ಕಂಬಗಳು ಹಾನಿಯಾಗಿವೆ.

ಜಿಲ್ಲೆಯಲ್ಲಿ ಸದ್ಯ 47 ಸೇತುವೆಗಳು ಮುಳುಗಡೆಯಾಗಿದ್ದು, ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಪರ್ಯಾಯಮಾರ್ಗದ ಮೂಲಕ ಸಂಚಾರ ವ್ಯವಸ್ಥೆಯಿದೆ. ಒಟ್ಟು 45 ಕಾಳಜಿ ಕೇಂದ್ರಗಳಲ್ಲಿ 4764ಕ್ಕೂ ಹೆಚ್ಚು ಕುಟುಂಬಗಳ 12455ಕ್ಕೂ ಅಧಿಕ ಸಂತ್ರಸ್ತರು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. 5934 ಜನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಹೀಗೆ ನೆರೆ ಹಾಗೂ ಅತೀವೃಷಿಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಮುಖ್ಯಮಂತ್ರಿಯವರ ಭೇಟಿಯಿಂದ ರಾಜ್ಯಸರ್ಕಾರದಿಂದ ಹೆಚ್ಚಿನ ಅನುದಾನ ಜಿಲ್ಲೆಗೆ ಸಿಗಬಹುದು ಎಂಬ ನಿರೀಕ್ಷೆ ಜಿಲ್ಲೆಯ ಜನರದ್ದು.

29 ಜಾನುವಾರು ಪುನರ್ವಸತಿ ಶಿಬಿರ:

ಅತಿವೃಷ್ಟಿ ಮತ್ತು ನೆರೆಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನದಿ ತೀರದಲ್ಲಿನ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮನೆಗಳನ್ನು ತೊರೆದಿರುವ ಸಂತ್ರಸ್ತರು ಜಾನುವಾರುಗಳನ್ನು ಶಿಬಿರಗಳಲ್ಲಿ ಬಿಟ್ಟಿದ್ದಾರೆ. ಜಿಲ್ಲಾಡಳಿತ ಒಟ್ಟು 29 ಜಾನುವಾರು ಶಿಬಿರವನ್ನು ಸ್ಥಾಪಿಸಿದೆ. 16488 ಜಾನುವಾರು ಆಶ್ರಯಕಲ್ಪಿಸಲಾಗಿದೆ. 4318 ದನ, 10207 ಎಮ್ಮೆ, 255 ಕುರಿ, 1708 ಮೇಕೆ ಶಿಬಿರಗಳಲ್ಲಿವೆ. ಜಾನುವಾರುಗಳಿಗಾಗಿ 444.557 ಟನ್‌ ಮೇವು ಖರೀದಿಸಲಾಗಿದ್ದು, ಈ ಪೈಕಿ ಈವರೆಗೆ 436.462 ಟನ್‌ ಮೇವು ಬಳಸಲಾಗಿದ್ದು, ದಾಸ್ತಾನಿನಲ್ಲಿ 8.095 ಟನ್‌ ಮೇವು ಲಭ್ಯವಿದೆ.

ಕಳೆದ ವರ್ಷ ಬರದಿಂದ ತತ್ತರಿಸಿದ್ದ ಜಿಲ್ಲೆಯ ರೈತರು ಈ ಬಾರಿ ಅತಿವೃಷ್ಟಿ, ನೆರೆ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ, ಆಸ್ತಿಪಾಸ್ತಿ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು.

-ಸಿದಗೌಡ ಮೋದಗಿ ರೈತ ಮುಖಂಡ