ಸಾರಾಂಶ
‘ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ’ಯನ್ನು(ಪಿಎಂಎಫ್‌ಎಂಇ) ಒಂದು ವರ್ಷ ವಿಸ್ತರಿಸಿದೆ. ಯೋಜನೆಯಡಿ ಈ ವರ್ಷ ರಾಜ್ಯಕ್ಕೆ 5 ಸಾವಿರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆ ಗುರಿ ನೀಡಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರು : ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ’ಯನ್ನು(ಪಿಎಂಎಫ್‌ಎಂಇ) ಒಂದು ವರ್ಷ ವಿಸ್ತರಿಸಿದೆ. ಯೋಜನೆಯಡಿ ಈ ವರ್ಷ ರಾಜ್ಯಕ್ಕೆ 5 ಸಾವಿರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆ ಗುರಿ ನೀಡಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೃಷಿ ಇಲಾಖೆ ಅಂಗಸಂಸ್ಥೆಯಾದ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂರಕ್ಷಣೆ ಹಾಗೂ ರಫ್ತು ನಿಗಮ ನಿಯಮಿತವು(ಕೆಪೆಕ್) ರಾಜ್ಯದ ಕೃಷಿಕರು, ಕೃಷಿಕರ ಮಕ್ಕಳು, ಜನಸಾಮಾನ್ಯರನ್ನು ಕೃಷಿ ಉದ್ಯಮಿಗಳನ್ನಾಗಿ ಪರಿವರ್ತಿಸುವ ಕೆಲಸ ಮಾಡುತ್ತಿದೆ. ಕೇಂದ್ರದ ಪಿಎಂಎಫ್‌ಎಂಇ ಯೋಜನೆಯಡಿ ರಾಜ್ಯದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಸಹಾಯಧನ (ಸಬ್ಸಿಡಿ) ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.
ಈ ಪಿಎಂಎಫ್‌ಎಂಇ ಯೋಜನೆಯಡಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಆರಂಭಿಸಲು ಮತ್ತು ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಶೇ.50 ಅಥವಾ ಗರಿಷ್ಠ 15 ಲಕ್ಷ ರು. ಸಹಾಯಧನ ನೀಡಲಾಗುತ್ತಿದೆ. ಅಂದರೆ, ಕೇಂದ್ರ ಸರ್ಕಾರವು 6 ಲಕ್ಷ ರು. ಹಾಗೂ ರಾಜ್ಯ ಸರ್ಕಾರ 9 ಲಕ್ಷ ರು. (ಶೇ.15ರಷ್ಟು ಟಾಪ್ ಅಪ್ ಸಬ್ಸಿಡಿ ಸೇರಿ) ಸಹಾಯಧನ ನೀಡುತ್ತಿದೆ ಎಂದು ಹೇಳಿದರು.
5 ವರ್ಷದಲ್ಲಿ 6,698 ಫಲಾನುಭವಿಗಳಿಗೆ ಸಾಲ:
ಕೇಂದ್ರ ಸರ್ಕಾರದ ಪಿಎಂಎಫ್‌ಎಂಇ ಯೋಜನೆಯಡಿ ಕಳೆದ ಐದು ವರ್ಷದಲ್ಲಿ ರಾಜ್ಯದಲ್ಲಿ 20,051 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 6,698 ಫಲಾನುಭವಿಗಳಿಗೆ ಸಾಲ ಮಂಜೂರಾಗಿದೆ. ಈ ಮೂಲಕ ರಾಜ್ಯದ ಕಿರು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ 783.48 ಕೋಟಿ ರು. ಹೂಡಿಕೆಯಾಗಿದೆ. ಈ ವರ್ಷ ಕೇಂದ್ರ ಸರ್ಕಾರ ಪಿಎಂಎಫ್‌ಎಂಇ ಯೋಜನೆಯಡಿ ರಾಜ್ಯಕ್ಕೆ 5 ಸಾವಿರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆ ಗುರಿ ನೀಡಿದೆ. ಈ ಗುರಿ ಸಾಧಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.
ಈ ಪಿಎಂಎಫ್‌ಎಂಇ ಯೋಜನೆಯಡಿ ಪ್ರಮುಖವಾಗಿ ಸಿರಿಧಾನ್ಯ ಸಂಸ್ಕರಣೆ, ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರೆಸ್ ಆಯಿಲ್, ಮೆಣಸಿನಪುಡಿ, ಶುಂಠಿ ಸಂಸ್ಕರಣಾ ಘಟಕಗಳು, ಅನಾನಸ್ ಘಟಕಗಳು, ಮಸಾಲಾ ಉತ್ಪನ್ನಗಳ ಘಟಕಗಳು, ತೆಂಗಿನ ಉತ್ಪನ್ನಗಳು, ಕೋಳಿ, ಸಮುದ್ರ ಉತ್ಪನ್ನ ಸಂಸ್ಕರಣಾ ಘಟಕಗಳು, ರೊಟ್ಟಿ, ಉಪ್ಪಿನಕಾಯಿ, ಹಪ್ಪಳ ಘಟಕಗಳ ಸ್ಥಾಪನೆಗೆ ಸಾಲ ಮಂಜೂರು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಐದು ಬ್ರ್ಯಾಂಡಿಂಗ್:
ಯೋಜನೆಯಡಿ 5 ಬ್ರ್ಯಾಂಡಿಂಗ್ ಆರಂಭಿಸಲಾಗಿದೆ. ಭಿಮಾ ಪಲ್ಸಸ್, ಸೀಮಿ, ಸಫಲ್ ಹಾಗೂ ನೆಲಸಿರಿ ಎಂಬ ಐದು ಬ್ರ್ಯಾಂಡಿಂಗ್‌ಗಳಿವೆ. ₹12.79 ಕೋಟಿ ವೆಚ್ಚದಲ್ಲಿ ರಾಜ್ಯದ ಮಂಡ್ಯ, ದಾವಣಗೆರೆ, ಬೆಳಗಾವಿ ಹಾಗೂ ಉತ್ತರ ಕನ್ನಡದಲ್ಲಿ ಮೂಲಸೌಕರ್ಯ ಘಟಕಗಳನ್ನು ಸ್ಥಾಪಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಿ ಸಂಸ್ಥೆಗಳ ಅಡಿ 14 ಇನ್‌ಕ್ಯೂಬೇಶನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಪ್ಯಾಕ್ ಮಾಡಿ ಬ್ರ್ಯಾಂಡ್ ಮಾಡಿ ಕೊಡಲಾಗುತ್ತದೆ. ಇದರಿಂದ ರೈತರು, ಸ್ವಸಹಾಯ ಗುಂಪುಗಳು ಹಾಗೂ ಆಸಕ್ತರಿಗೆ ಅನುಕೂಲವಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಕೆಪೆಕ್ ಅಧ್ಯಕ್ಷ ಹರೀಶ್, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಅರ್ಜಿ ಸಲ್ಲಿಕೆ ಹೇಗೆ?:
ಪಿಎಂಎಫ್‌ಎಂಇ ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು 18 ವರ್ಷ ತುಂಬಿರಬೇಕು. ಕನಿಷ್ಠ ವಿದ್ಯಾರ್ಹತೆ ಅಗತ್ಯವಿಲ್ಲ. ಉದ್ಯಮದ ಯಾವುದೇ ಅನುಭವದ ಅಗತ್ಯವಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಉಚಿತವಾಗಿ ಯೋಜನಾ ಪ್ರಸ್ತಾವನೆಯಿಂದ ಹಿಡಿದು ಸಾಲ ಮಂಜೂರು ಮಾಡಿಸುವವರೆಗೂ ಸಾಥ್ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗಾಗಿ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪಕಿಸಬೇಕು ಅಥವಾ ಕೆಪೆಕ್ ಸಂಸ್ಥೆಯ ಯೋಜನಾ ನಿರ್ವಹಣಾ ಘಟಕಗಳನ್ನು ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 99643 98062/ 97410 08486/ 88676 17858/ 97312 01215ಗೆ ಸಂಪರ್ಕಿಸಬಹುದು.