ಭೂರಹಿತರಿಗೆ ಜಮೀನು, ನಿವೇಶನ, ಪಟ್ಟಾ ವಿತರಣೆಗೆ ಒತ್ತಾಯ

| Published : Sep 24 2024, 01:46 AM IST

ಸಾರಾಂಶ

ರೈತರು ಜೀವನೋಪಾಯಕ್ಕಾಗಿ ಮಾಡಿಕೊಂಡಿರುವ ಮೂರು ಎಕರೆವರೆಗಿನ ಒತ್ತುವರಿಯನ್ನು ತೆರವುಗೊಳಿಸದಿರುವ ನಿರ್ಧಾರವನ್ನು ರಾಜ್ಯ ಸರ್ಕಾರ 2015ರಲ್ಲೇ ಕೈಗೊಂಡಿತ್ತು.

ಹೊಸಪೇಟೆ: ಭೂರಹಿತರಿಗೆ ಭೂಮಿ, ನಿವೇಶನ, ವಸತಿ ರಹಿತರಿಗೆ ಮನೆ ಸೌಕರ್ಯ ಮತ್ತು ಸರ್ಕಾರದ ಭೂಮಿ ಸಾಗುವಳಿಗೆ ಪಟ್ಟಾ ವಿತರಣೆ, ಉದ್ಯೋಗ ಖಾತರಿ ಯೋಜನೆಯಲ್ಲಿ 200 ದಿನಗಳ ಕೆಲಸ ಮತ್ತು ₹600 ಕೂಲಿ ಹೆಚ್ಚಿಸಲು ಒತ್ತಾಯಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೋಮವಾರ ಮನವಿ ರವಾನಿಸಲಾಯಿತು.ಭೂಕಬಳಿಕೆ ಹೆಸರಿನಲ್ಲಿ ತಲೆ ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಸರ್ಕಾರದ ನಿರ್ಧಾರ ಸರಿಯಲ್ಲ. ನಗರಗಳಿಗೆ ಹೊಂದಿಕೊಂಡಿರುವ ಸಣ್ಣ ಪಟ್ಟಣಗಳು, ಗ್ರಾಮ ಕೇಂದ್ರಗಳಲ್ಲೂ ಭೂ ಕಬಳಿಕೆ ಬೃಹತ್‌ ಪ್ರಮಾಣದಲ್ಲಿ ನಡೆಯುತ್ತಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಲೆಬಾಳುವ ಸರ್ಕಾರಿ ಜಮೀನುಗಳನ್ನು ಕಬಳಿಸಲಾಗುತ್ತಿದೆ. ಇಂತಹವರನ್ನು ಕಾನೂನಿನ ವ್ಯಾಪ್ತಿಗೆ ತಂದು ಶಿಕ್ಷೆಗೆ ಗುರಿಪಡಿಸುವುದು ಈ ಕಾಯ್ದೆಯ ಪ್ರಮುಖ ಆಶಯವಾಗಿತ್ತು. ಆದರೆ, ಅಂತಹ ಭೂಗಳ್ಳರ ವಿರುದ್ಧ ಈ ಕಾಯ್ದೆಯನ್ನು ಪ್ರಯೋಗಿಸದೇ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ದೂರಿದರು.

ರೈತರು ಜೀವನೋಪಾಯಕ್ಕಾಗಿ ಮಾಡಿಕೊಂಡಿರುವ ಮೂರು ಎಕರೆವರೆಗಿನ ಒತ್ತುವರಿಯನ್ನು ತೆರವುಗೊಳಿಸದಿರುವ ನಿರ್ಧಾರವನ್ನು ರಾಜ್ಯ ಸರ್ಕಾರ 2015ರಲ್ಲೇ ಕೈಗೊಂಡಿತ್ತು. ಅಂತಹ ರೈತರ ವಿರುದ್ಧ ಭೂಕಬಳಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವುದನ್ನು ತಡೆಯುವ ಅವಕಾಶ ಸರ್ಕಾರದ ಕೈಯಲ್ಲೇ ಇತ್ತು. ಈಗಲೂ, ಅಂತಹ ರೈತರ ವಿರುದ್ಧದ ಪ್ರಕರಣಗಳನ್ನಷ್ಟೇ ಕೈಬಿಡುವ ತೀರ್ಮಾನ ಮಾಡುವುದಕ್ಕೂ ಅವಕಾಶ ಇದೆ. ಭೂ ಒತ್ತುವರಿ ತೆರವು ಕಾಯ್ದೆ ತಿದ್ದುಪಡಿಯ ಸಾಧಕ-ಬಾಧಕಗಳ ಕುರಿತು ವಿಸ್ತೃತವಾಗಿ ಚರ್ಚಿಸಿದ ಬಳಿಕವೇ ತೀರ್ಮಾನಕ್ಕೆ ಬರಬೇಕು ಎಂದು ಆಗ್ರಹಿಸಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು 77 ವರ್ಷಗಳು ಕಳೆದರೂ ಇಂದಿಗೂ ಭಾರೀ ಪ್ರಮಾಣದಲ್ಲಿ ಜನರು ಭೂಮಿ, ನಿವೇಶನ ಹಾಗೂ ವಾಸಕ್ಕೆ ಕನಿಷ್ಠ ಮನೆಯಿಲ್ಲದೇ ಜೀವನ ಸಾಗಿಸುತ್ತಿದ್ದಾರೆ. ಆಡಳಿತಾರೂಢ ಸರ್ಕಾರಗಳು ಕಳೆದ ಏಳು ದಶಕಗಳಲ್ಲಿ ನೀಡಿದ ಅಶ್ವಾಸನೆಗಳು, ಭರವಸೆಗಳು ಕಾಗದದ ಮೇಲಷ್ಟೇ ಉಳಿದಿದೆ. ಅನುಷ್ಠಾನ ಮಾತ್ರ ಇಲ್ಲ. ಮನೆ ಇಲ್ಲದ ಬಡ ಕುಟುಂಬಗಳು ಶೆಡ್‌, ಗುಡಿಸಲು ಜೀವನ ನಡೆಸುತ್ತಿವೆ. ಬಡವರು, ಭೂಹೀನರು ನಿಕೃಷ್ಟ ಸ್ಥಿತಿಗೆ ತಲುಪಿದ್ದಾರೆ. ಲಕ್ಷಾಂತರ ಜನರು ಕನಿಷ್ಠ ಮೂಲ ಸೌಕರ್ಯಗಳಿಲ್ಲದೇ ಬದುಕುತ್ತಿರುವುದು ಸರ್ಕಾರಗಳ ಹೊಣೆಗೇಡಿತನದ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.

ಹಕ್ಕೊತ್ತಾಯಗಳು:

ಎಲ್ಲ ಬಗೆಯ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮತ್ತು ಅರಣ್ಯ ಹಕ್ಕು ಅರ್ಜಿಗಳನ್ನು ಹಾಕಿದ ರೈತರಿಗೆ ಶೀಘ್ರವೇ ಭೂ ಮಂಜೂರಾತಿ ಆದೇಶ ಹಾಗೂ ಹಕ್ಕುಪತ್ರ ನೀಡಬೇಕು. ಭೂ ಕಬಳಿಕೆ ತಡೆ ಕಾಯ್ದೆ ಹೆಸರಿನಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಪ್ರತಿ ಗ್ರಾಮವಾರು ಸರ್ವೆ ನಡೆಸಿ, ಮನೆ, ನಿವೇಶನ ಹಾಗೂ ಭೂಮಿ ಇಲ್ಲದವರಿಗೆ ನಿವೇಶನ, ಭೂಮಿ ಹಂಚಬೇಕು. ಫಾರಂ ನಂ.57 ಪುನಃ ಅರ್ಜಿ ಹಾಕಲು ಅವಕಾಶ ಒದಗಿಸಬೇಕು. ಉದ್ಯೋಗ ಖಾತರಿ 200 ದಿನಗಳ ಕೆಲಸ ನೀಡಿ, ₹600 ಕೂಲಿ ಹೆಚ್ಚಿಸಿ, ಉದ್ಯೋಗ ಇಲ್ಲದವರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ವೃದ್ಧಾಪ್ಯ ವೇತನ ₹2000 ಮತ್ತು ಅಂಗವಿಕಲರಿಗೆ ₹3000, ವಿಧವೆಯವರಿಗೆ ₹2000 ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಪರಶುರಾಮ್, ಬಾಲ ಗಂಗಾಧರ್, ಹುಲಿಕಟ್ಟಿ ಮೈಲಪ್ಪ, ಗುಳೇದಹಟ್ಟಿ ಸಂತೋಷ್, ಹ್ಯಾರಡ ಫಕೀರಪ್ಪ, ಹುಲಿಕಟ್ಟಿ ಇಬ್ರಾಹಿಂ ಸಾಬ್, ಫಕೀರಪ್ಪ ಹುಲಿಕಟ್ಟಿ, ನಾಗರಾಜ ಬೂದಿಹಾಳ, ನೀಲಮ್ಮ ಹಾಲಮ್ಮ, ಮಂಜಕ್ಕ, ಮಾಂತೇಶಪ್ಪ, ಹೊನ್ನಪ್ಪ ಹಾರಕನಾಳ, ರಾಮಚಂದ್ರಪ್ಪ,ಎಚ್. ಪರಸಪ್ಪ, ಸಕ್ರ್ಯ ನಾಯ್ಕ, ಸಣ್ಣ ಹೊನ್ನಪ್ಪ ಮತ್ತಿತರರಿದ್ದರು.