ಸಾರಾಂಶ
ಕೊರೋನಾ ದಾಳಿ, ವೀಸಾ ನಿಯಮದಲ್ಲಿ ಬದಲಾವಣೆ, ರಷ್ಯಾ- ಉಕ್ರೇನ್ ನಡುವಣ ಯುದ್ಧ ಕೂಡ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿತಕ್ಕೆ ಕಾರಣವಾಗಿದೆ.
ವಸಂತಕುಮಾರ್ ಕತಗಾಲ
ಕಾರವಾರ: ಗೋಕರ್ಣದ ಬೀಚುಗಳು ಈಗ ಹಿಪ್ಪಿಗಳ ಸ್ವರ್ಗವಾಗಿ ಉಳಿದಿಲ್ಲ. ದೇಶೀಯ ಪ್ರವಾಸಿಗರ ಭರಾಟೆ ಜೋರಾಗಿದೆ. ಜಾಗತಿಕ ಮಟ್ಟದಲ್ಲಿ ತೆರೆದಿಟ್ಟ ವಿದೇಶಿ ಪ್ರವಾಸಿಗರು ಈಗ ಗೋಕರ್ಣದಲ್ಲಿ ಅಪರೂಪವಾಗುತ್ತಿದ್ದಾರೆ. ಗೋಕರ್ಣದ ಕುಡ್ಲೆ ಬೀಚಿನಲ್ಲಿ ಪ್ರತಿ ಶನಿವಾರ ವಿದೇಶಿಗರ ಮಾರ್ಕೆಟ್ ತೆರೆದುಕೊಳ್ಳುತ್ತಿತ್ತು. ಕಿಲೋಮೀಟರ್ ಉದ್ದಕ್ಕೂ ಗಾಗಲ್, ಬ್ಯಾಗ್, ಪುಸ್ತಕಗಳು, ಬಗೆ ಬಗೆಯ ಮೂರ್ತಿಗಳು, ಗಿಟಾರ್ ಮತ್ತಿತರ ಸಂಗೀತದ ಉಪಕರಣಗಳು ಹೀಗೆ ಬಗೆ ಬಗೆಯ ಸರಕುಗಳನ್ನು ಮಾರಾಟಕ್ಕಿಡುತ್ತಿದ್ದರು. ಇವರಿಗೆ ವಿದೇಶಿ ಗ್ರಾಹಕರೇ ಬಂದು ಈ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಿದ್ದರು. ಅಂದರೆ ವಿದೇಶಿ ಪ್ರವಾಸಿಗರು ಹಿಂದೆ ಇಲ್ಲಿ ಎಷ್ಟು ಸಂಖ್ಯೆಯಲ್ಲಿ ಇರುತ್ತಿದ್ದರು ಎನ್ನುವುದರ ಕಲ್ಪನೆ ಬಂದೀತು.ಗೋಕರ್ಣಕ್ಕೆ 1990ರ ನಂತರ ಬರಲಾರಂಭಿಸಿದ ವಿದೇಶಿಗರು ಅಲ್ಲಿನ ಬೀಚ್ ಓಂ ಆಕಾರದಲ್ಲಿರುವುದನ್ನು ನೋಡಿ ಓಂ ಬೀಚ್ ಎಂದೇ ನಾಮಕರಣ ಮಾಡಿದರು. ಕ್ರಮೇಣ ಓಂ ಬೀಚ್ ಹಿಪ್ಪಿಗಳ ಸ್ವರ್ಗವಾಗಿ ಪರಿಣಮಿಸಿತು. ಸಮುದ್ರದಲ್ಲಿ ಸ್ನಾನ ಮಾಡಿ, ತೀರದಲ್ಲಿ ಅರೆಬೆತ್ತಲೆಯಾಗಿ ಗುಂಪು ಗುಂಪಾಗಿ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಮಲಗಿರುತ್ತಿದ್ದರು. ಹಲವರು ಪುಸ್ತಕಗಳನ್ನು ಓದುತ್ತ ಮೈಮರೆಯುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಗಿಟಾರ್ ಬಾರಿಸುತ್ತ ಹಾಡು ಹೇಳುತ್ತ ಕುಣಿಯುತ್ತಿದ್ದರೆ ಹೊಸದೊಂದು ಲೋಕವೇ ಸೃಷ್ಟಿಯಾಗುತ್ತಿತ್ತು. ವಿದೇಶಿಯರು ಕೇವಲ ಓಂ ಬೀಚ್ ಅಷ್ಟೇ ಅಲ್ಲ, ಪಕ್ಕದ ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್, ಪ್ಯಾರೆಡೈಸ್ ಬೀಚ್, ಮುಖ್ಯ ಬೀಚ್‌ಗಳಿಗೂ ವಿಸ್ತರಿಸಿದರು. 2010ರ ತನಕ ವಿದೇಶಿಯರ ಭರಾಟೆ ಹೆಚ್ಚಿತ್ತು.ತುಂಡು ಬಟ್ಟೆ ಉಟ್ಟು ಮಲಗಿರುವ, ಹಾಡು ಹೇಳುತ್ತ ನರ್ತಿಸುವ ವಿದೇಶಿಗರನ್ನು ನೋಡಲೆಂದು ದೇಶಿ ಪ್ರವಾಸಿಗರು ಬರತೊಡಗಿದರು. ಬೀಚುಗಳಲ್ಲಿ ಜನಜಂಗುಳಿ ಹೆಚ್ಚಾಯಿತು. ಕೆಲವರು ವಿದೇಶಿಗರಿಗೆ ಕೀಟಲೆ, ಕಿರಿಕಿರಿಯನ್ನೂ ಮಾಡಿದರು. ಹೀಗಾಗಿ ವಿದೇಶಿಗರು ಗೋಕರ್ಣದಿಂದ ದೂರವಾಗತೊಡಗಿದರು. ಈಗ ಬೀಚುಗಳಿಗೆ ಹೋದರೆ ಅಲ್ಲೊಬ್ಬರು, ಇಲ್ಲೊಬ್ಬರು ವಿದೇಶಿಗರು ಕಾಣಿಸುತ್ತಾರೆ. ನಮ್ಮ ದೇಶದ ವಿವಿಧ ರಾಜ್ಯಗಳ ಪ್ರವಾಸಿಗರೆ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ. ಕೊರೋನಾ ದಾಳಿ, ವೀಸಾ ನಿಯಮದಲ್ಲಿ ಬದಲಾವಣೆ, ರಷ್ಯಾ- ಉಕ್ರೇನ್ ನಡುವಣ ಯುದ್ಧ ಕೂಡ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿತಕ್ಕೆ ಕಾರಣವಾಗಿದೆ. ವಿದೇಶಿ ಪ್ರವಾಸಿಗರು ಕಡಿಮೆಯಾಗಿದ್ದರಿಂದ ಗೋಕರ್ಣದಲ್ಲಿ ಪ್ರವಾಸೋದ್ಯಮ ನಲುಗಿಹೋಗಿಲ್ಲ. ಈಗ ನಮ್ಮ ದೇಶದ ಪ್ರವಾಸಿಗರೇ ತುಂಬಿರುತ್ತಾರೆ. ಇಲ್ಲಿನ ಹಾಲಕ್ಕಿ ಒಕ್ಕಲಿಗರು ಗುಡಿಸಲುಗಳನ್ನು ನಿರ್ಮಿಸಿ ವಿದೇಶಿಯರಿಗೆ ವಾಸಕ್ಕೆ ಅನುವು ಮಾಡಿಕೊಡುತ್ತಿದ್ದರು. ಅವರಿಗೆ ಸ್ವಲ್ಪ ಲಾಭವೂ ಆಗುತ್ತಿತ್ತು. ವಿದೇಶಿಯರು ಆಯುರ್ವೇದಿಕ್ ಉತ್ಪನ್ನ, ಸ್ಥಳೀಯ ಉತ್ಪನ್ನಗಳನ್ನು ಹೆಚ್ಚು ಕೊಂಡುಕೊಳ್ಳುತ್ತಿದ್ದರು. ಈಗ ಅವರ ವ್ಯಾಪಾರ ವಹಿವಾಟಿನಲ್ಲಿ ಇಳಿಮುಖವಾಗಿದೆ. ವಿದೇಶಿಗರ ಭರಾಟೆ ಇರುವಾಗ ಗಾಂಜಾ, ಅಪೀಮು ಸೇರಿದಂತೆ ಮಾದಕ ದ್ರವ್ಯಗಳೂ ಹರಿದುಬರುತ್ತಿದ್ದವು. ಈಗ ಆ ಪ್ರಮಾಣವೂ ಕಡಿಮೆಯಾಗಿದೆ. ಕೆಲವು ವರ್ಷಗಳ ಅಂಕಿ ಸಂಖ್ಯೆ ಗಮನಿಸಿದರೆ ಕೆಲವೇ ವರ್ಷಗಳಲ್ಲಿ ಗೋಕರ್ಣ ವಿದೇಶಿ ಪ್ರವಾಸಿಗರಿಂದ ಮುಕ್ತವಾದರೂ ಅಚ್ಚರಿ ಇಲ್ಲ.ಪ್ರವಾಸಿಗರ ಗದ್ದಲ: ಗೋಕರ್ಣದ ಬೀಚ್‌ಗಳಲ್ಲಿ ಈಗ ಪ್ರವಾಸಿಗರ ಗದ್ದಲ ಹೆಚ್ಚಿದೆ. ಹಿಂದಿನಷ್ಟು ಶಾಂತವಾಗಿಲ್ಲ. ಮೊದಲು ಪ್ರತಿವರ್ಷ ಇಲ್ಲಿಗೆ ಬಂದು 5- 6 ತಿಂಗಳು ಇರುತ್ತಿದ್ದೆ. ಈಗ ಕೆಲವೇ ದಿನ ಉಳಿದು ಗೋವಾಕ್ಕೆ ತೆರಳುತ್ತೇನೆ ಎಂದು ಫ್ರಾನ್ಸ್ ಪ್ರವಾಸಿ ಲೂಯಿಸ್ ತಿಳಿಸಿದರು.
ಪ್ರವಾಸಿಗರ ವಿವರ 2014- 15- 30152015- 16- 28562016- 17- 25992017- 18- 22002018- 19- 10112019- 20- 5282020- 21- 002021- 22- 11002022- 23- 1800