ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಆಲತ್ತೂರು ಗ್ರಾಮದ ಬಳಿ ಕಾಡಾನೆ ದಾಳಿ ಮತ್ತೆ ಮುಂದುವರಿದಿದ್ದು, ಸೋಮವಾರ ರಾತ್ರಿ ರೈತರಿಬ್ಬರ ತೆಂಗಿನ ತೋಟಕ್ಕೆ ದಾಳಿ 2 ಕಾಡಾನೆ ೪೦ ತೆಂಗಿನ ಮರಗಳನ್ನು ಮುರಿದು ಹಾಕಿವೆ.ಗ್ರಾಮದ ಸಿದ್ದೇಗೌಡರಿಗೆ ಸೇರಿದ ೩೦ ತೆಂಗಿನ ಮರ, ಶಾಂತೇಶ್‌ಗೆ ಸೇರಿದ ೧೦ ತೆಂಗಿನ ಮರಗಳನ್ನು ಮುರಿದು ಹಾಕಿವೆ ಎಂದು ರೈತರಾದ ಟಿ.ಶಾಂತೇಶ್, ಸಿದ್ದೇಗೌಡರು ಹೇಳಿದ್ದಾರೆ. ಸೋಮವಾರ ರಾತ್ರಿ ಎರಡು ಕಾಡಾನೆಗಳು ಸಿದ್ದೇಗೌಡ ಹಾಗೂ ಟಿ.ಶಾಂತೇಶ್‌ರ ಜಮೀನಿಗೆ ನುಗ್ಗಿ ಫಸಲಿಗೆ ಬಂದಿದ್ದ ತೆಂಗಿನ ಮರಗಳನ್ನು ಕಾಲಿನಿಂದ ಒದ್ದು ಮುರಿದು ಹಾಕಿವೆ. ಅಲ್ಲದೆ ಸೊಂಡಿಲಿನಿಂದ ಗರಿಗಳನ್ನು ಕಿತ್ತು ಬೀಸಾಕಿವೆ ಎಂದಿದ್ದಾರೆ. ಕಾಡಾನೆ ದಾಳಿ ಓಂಕಾರ ವಲಯದಲ್ಲಿ ಮಿತಿ ಮೀರಿದ್ದು, ಪ್ರತಿ ದಿನ ಒಂದಲ್ಲ ಒಂದೂರಲ್ಲಿ ದಾಳಿ ಇಟ್ಟು ಫಸಲನ್ನುನಾಶ ಪಡಿಸುತ್ತಿವೆ. ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಯಲು ವಿಫಲವಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಎಸಿಎಫ್ ಭೇಟಿ:ಆಲತ್ತೂರಿನ ಸಿದ್ದೇಗೌಡ, ಟಿ.ಶಾಂತೇಶ್ ಜಮೀನಿಗೆ ಎಸಿಎಫ್ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಇಲಾಖೆಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಎಸಿಎಫ್ ಸುರೇಶ್ ಭರವಸೆಗೆ ರೈತರು ಒಲ್ಲದ ಮನಸ್ಸಿನಿಂದ ಒಪ್ಪಿ, ಪರಿಹಾರದ ಜೊತೆಗೆ ಕಾಡಾನೆಗಳ ಹಾವಳಿ ತಡೆಗಟ್ಟಿ ಫಸಲು ಉಳಿಸಿಕೊಡಿ ಎಂದು ಒತ್ತಾಯಿಸಿದರು. ಕಳೆದ ಫೆ.೨೨ ರ ರಾತ್ರಿ ಟಿ.ಶಾಂತೇಶ್‌ಗೆ ಸೇರಿದ ೧೦ ತೆಂಗಿನ ಮರ, ಕಲ್ಲು ಕಂಬಗಳನ್ನು ಕಾಡಾನೆ ಮುರಿದು ಹಾಕಿದ್ದನ್ನು ಸ್ಮರಿಸಬಹುದು.