ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಲೌಕಿಕ ಜಂಜಾಟಗಳಲ್ಲಿ ಮುಳಗಿ ಹೋಗಿರುವ ಮನುಷ್ಯನ ಬದುಕಿನಲ್ಲಿ ಹೊಸ ಬದಲಾವಣೆಯನ್ನು ತರುವಲ್ಲಿ ಶ್ರಾವಣ ಮಾಸ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ತಿಳಿಸಿದರು.ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನ ಸಮಾರೋಪದಲ್ಲಿ ಮಾತನಾಡಿದ ಅವರು, ಸೃಷ್ಟಿಯ ವಿಕಾಸದ ಬಹುದೊಡ್ಡ ಪ್ರಕ್ರಿಯೆ ಶ್ರಾವಣ ಮಾಸದಲ್ಲಿ ನಡೆಯುತ್ತದೆ. ಮಳೆಯಿಂದ ಗಿಡ- ಮರಗಳು ಚಿಗುರಿ ಬಲಿಷ್ಠವಾಗುತ್ತವೆ. ರೈತರು ಬಿತ್ತಿದ ಬೆಳೆಗಳು ತೆನೆ ಬಿಡುವ ಸಂದರ್ಭವಿದು. ಹಾಗೆಯೇ ಮನುಷ್ಯನ ಜೀವನದಲ್ಲೂ ಹೊಸ ಹುಟ್ಟು ಮತ್ತು ಬೆಳವಣಿಗೆಗೆ ಶ್ರಾವಣ ಮಾಸ ಸಕಾಲವಾದುದು ಎಂದು ಹೇಳಿದರು.
ಸಾಕಷ್ಟು ಬದಲಾವಣೆ:ನಿಸರ್ಗದಂತೆ ಮನುಷ್ಯನು ಶಾರೀರಿಕ ಮತ್ತು ಮಾನಸಿಕವಾಗಿ ಸಾಕಷ್ಟು ಬದಲಾವಣೆಯನ್ನು ಈ ಮಾಸದಲ್ಲಿ ಪಡೆದುಕೊಳ್ಳುತ್ತಾನೆ. ಬದುಕಿನ ಬದಲಾವಣೆಗೆ ಇದು ಸುಸಂದರ್ಭವಾದ ಕಾಲ. ನಮ್ಮನ್ನು ನಾವು ಅರಿತುಕೊಂಡು ನಡೆ-ನುಡಿಯಲ್ಲಿ ಸದ್ವಿಚಾರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.ನಿವೃತ್ತ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ಮಾತನಾಡಿ, ಶ್ರಾವಣದಲ್ಲಿ ಭೂಮಿ ಹದವಿರುವಂತೆ ಮನುಷ್ಯನ ಮನಸ್ಸು ಹದವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಭೂಮಿಯಲ್ಲಿ ಉತ್ತಮ ಬೀಜ ಬಿತ್ತಿದಂತೆ ನಮ್ಮ ಮನಸ್ಸಿನಲ್ಲಿಯೂ ಭಕ್ತಿ ಎಂಬ ಬೀಜದ ಸದ್ವಿಚಾರಗಳನ್ನು ಬಿತ್ತಿದರೆ ಉತ್ತಮ ಫಸಲನ್ನು ಪಡೆಯಬಹುದು. ಒಮ್ಮೆ ಮಳೆ, ಒಮ್ಮೆ ಬಿಸಿಲು, ಒಮ್ಮೆ ನಗು, ಒಮ್ಮೆ ಅಳು ಇದುವೇ ನಮ್ಮ ಜೀವನ ಅದೇ ಶ್ರಾವಣ ಎಂದು ಕವಿಯು ಶ್ರಾವಣವನ್ನು ಅತ್ಯಂತ ಅರ್ಥಪೂರ್ಣವಾಗಿ ವರ್ಣಿಸಿದ್ದಾನೆ ಎಂದು ತಿಳಿಸಿದರು.
ದೂರದೃಷ್ಟಿಯ ಫಲ:ನೀಲಕಠಸ್ವಾಮಿ ಮಠದ ವಿದ್ವಾನ್ ಶ್ರೀ ಸಿದ್ಧಮಲ್ಲ ಸ್ವಾಮೀಜಿ ಮಾತನಾಡಿ, ಸುತ್ತೂರು ಶ್ರೀಮಠದಲ್ಲಿ ರಾಜೇಂದ್ರ ಶ್ರೀಗಳ ಕಾಲದಿಂದಲೂ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನವನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ನಾವು ಆಗಲೂ ಪ್ರವಚನ ಕೇಳಲು ಬರುತ್ತಿದ್ದೆವು. ದೇಶಿಕೇಂದ್ರ ಜಗದ್ಗುರುಗಳವರ ದೂರದೃಷ್ಟಿಯ ಫಲವಾಗಿ ಇಂದು ಶ್ರೀಮಠದಲ್ಲಿ ಇಂತಹ ಅನೇಕ ವೈಶಿಷ್ಟ್ಯಪೂರ್ಣವಾದ ಕಾರ್ಯಕ್ರಮಗಳು ನಡೆಯುತ್ತಿವೆ. ಇಂತಹ ಮೊಬೈಲ್ ಯುಗದಲ್ಲೂ ಅನೇಕ ಜನರು ಆಗಮಿಸಿ ಮಾಸಪೂರ್ತಿ ಒಳ್ಳೆಯ ವಿಚಾರಗಳನ್ನು ಆಲಿಸಿರುವಿರಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಹುಲಿಯೂರು ದುರ್ಗದ ಶ್ರೀ ಸಿದ್ಧಲಿಂಗ ಶಿವಾನಂದ ಸ್ವಾಮೀಜಿ ಮಾತನಾಡಿ, ದಾರಿ ತಪ್ಪುತ್ತಿರುವ ಮನುಷ್ಯ ನೈತಿಕ ಮಾರ್ಗದಲ್ಲಿ ನಡೆಯಲು ಶ್ರೀಗಳು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಶ್ರಾವಣ ಮಾಸದ ಪೂಜಾನುಷ್ಠಾನದಿಂದ ಸೃಷ್ಟಿಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ. ಗುರುಗಳು ಮಾಡುವ ಅನುಷ್ಠಾನದ ಫಲ ಸಾರ್ವತ್ರಿಕವಾಗಿ ಎಲ್ಲರಿಗೂ ಲಭ್ಯವಾಗುತ್ತದೆ. ಭಕ್ತಿಯಿಂದ ಬದುಕಿನಲ್ಲಿ ಏನನ್ನಾದರೂ ಸಾಧಿಸಬಹುದು ಎಂದರು.ಹೊಸಮಠ ಮತ್ತು ಕುದೇರು ಮಠದ ಕಿರಿಯ ಶ್ರೀಗಳು, ಜಲಜಾಕ್ಷಿ, ಉಮಾ ನಾಗೇಶ್ ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ವಿದುಷಿ ಧರಿತ್ರಿ ಆನಂದರಾವ್ ಅವರು ಕಾವ್ಯ ವಾಚನ ಮಾಡಿದರು. ವಿದುಷಿ ಎಂ.ವಿ. ಶುಭಾ ರಾಘವೇಂದ್ರ, ವಿದುಷಿ ವಸಂತ ವೆಂಕಟೇಶ ಇದ್ದರು.
ಪ್ರವಚನ ಆಲಿಸಿ ಉತ್ತಮ ಪ್ರಬಂಧ ರಚಿಸಿದವರಿಗೆ ಬಹುಮಾನ ವಿತರಿಸಲಾಯಿತು. ಯು.ಎಸ್. ಬಸವರಾಜು, ಕೆ.ಎನ್. ರವಿಶಂಕರ್ ಮತ್ತು ಕುಟುಂಬದವರು ಸೇವಾರ್ಥ ನೆರವೇರಿಸಿದರು. ಜೆಎಸ್ಎಸ್ ಲಲಿತಕಲಾ ವೃಂದದವರು ಪ್ರಾರ್ಥಿಸಿದರು. ಪ್ರೊ. ಮೊರಬದ ಮಲ್ಲಿಕಾರ್ಜುನ ಸ್ವಾಗತಿಸಿದರು. ಮಲ್ಲಿನಾಥ ಶಿವಾಚಾರ್ಯ ಸ್ವಾಮಿ ವಂದಿಸಿದರು. ಕುಮಾರಸ್ವಾಮಿ ವಿರಕ್ತಮಠ ನಿರೂಪಿಸಿದರು.