ಸಾರಾಂಶ
ದಾವಣಗೆರೆ: ಗ್ರಾಮೀಣ ಪರಿಸರದ ಅನೇಕ ವೈವಿಧ್ಯಮಯ ಜೀವನಶೈಲಿ ಬಿಂಬಿಸುವ ಮತ್ತು ಮಕ್ಕಳಿಗೆ ಗ್ರಾಮೀಣ ಕಲೆ, ಸಂಸ್ಕೃತಿಯನ್ನು ದೃಶ್ಯದ ಮೂಲಕ ಪರಿಚಯಿಸುವ ಥೀಮ್ ಪಾರ್ಕ್ ಮತ್ತು ಗ್ರೀಕ್ ಶೈಲಿಯ ಕಲಾತ್ಮಕ ಬಯಲು ರಂಗ ಮಂದಿರಗಳನ್ನು ಡಿ.1ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸುವುದಾಗಿ ದಾವಣಗೆರೆ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ತಿಳಿಸಿದರು.
ನಗರದ ದಾವಣಗೆರೆ ವಿಶ್ವ ವಿದ್ಯಾನಿಲಯದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಸ್ಮಾರ್ಟ್ ಸಿಟಿ ವಿಭಾಗದಿಂದ ನಿರ್ಮಿಸಿರುವ ಗ್ರಾಮೀಣ ಬದುಕಿನ ಸೊಗಡನು ಪ್ರತಿಬಿಂಬಿಸುವ ಥೀಮ್ ಪಾರ್ಕ್ ಮತ್ತು ಆಕರ್ಷನಿಯೋ ಗ್ರೀಕ್ ಶೈಲಿಯ ಬಯಲು ರಂಗ ಮಂದಿರದ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಥೀಮ್ ಪಾರ್ಕ್ ಮತ್ತು ಆಕರ್ಷಕ ಬಯಲು ರಂಗ ಮಂದಿರ ಜಿಲ್ಲಾ ಕೇಂದ್ರದ ಮತ್ತೊಂದು ಆಕರ್ಷಣೀಯ ತಾಣವಾಗಲಿವೆ ಎಂದರು.ಫೈನ್ಆರ್ಟ್ಸ್ ಕಾಲೇಜು ಆವರಣದ ಥೀಮ್ ಪಾರ್ಕ್, ಬಯಲು ರಂಗ ಮಂದಿರವನ್ನು ಡಿ.1ರಿಂದ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ನಗರ, ಜಿಲ್ಲೆಯ ಏಕೈಕ ಆಕರ್ಷಣೀಯ ಕಲಾಕೇಂದ್ರ ಥೀಮ್ ಪಾರ್ಕ್ ಮತ್ತು ಬಯಲುರಂಗ ಮಂದಿರಗಳು ಮಧ್ಯ ಕರ್ನಾಟಕದ ಏಕೈಕ ಆಕರ್ಷಣೆಯ ಕಲಾ ಕೇಂದ್ರವಾಗಿ ಇನ್ನು ಗಮನ ಸೆಳೆಯಲಿದೆ ಎಂದು ಹೇಳಿದರು.
ದಾವಣಗೆರೆ ನಗರ, ಜಿಲ್ಲೆಯಲ್ಲಿ ಕಲೆಯನ್ನು ಪ್ರಚುರಪಡಿಸುವುದು, ವಿದ್ಯಾರ್ಥಿ, ಯುವ ಜನರು, ಸಾರ್ವಜನಿಕರಲ್ಲಿ ಕಲಾಸಕ್ತಿ ಬೆಳೆಸುವ ಉದ್ದೇಶವಿದೆ. ಕಲೆಯ ಮೂಲಕ ಸಮಾಜದಲ್ಲಿ ಮನರಂಜನೆ ಮೂಡಿಸುವುದು, ಕಲಾಭಿರುಚಿ ಮೂಡಿಸುವುದು, ಆರೋಗ್ಯಕರ ವಾತಾವರಣ ನಿರ್ಮಾಣ, ಗ್ರಾಮೀಣ ಜೀವನದ ಸಾಂಸ್ಕೃತಿಕ ಮೌಲ್ಯ ಸಂರಕ್ಷಿಸಿ, ಉತ್ತೇಜಿಸುವುದು, ವಿನಾಶದಂಚಿನಲ್ಲಿರುವ ಸಾಂಪ್ರಾದಾಯಿಕ ಮೌಲ್ಯಗಳನ್ನು ಪ್ರದರ್ಶಿಸುವ ಉದ್ದೇಶವಿದೆ ಎಂದು ಅವರು ವಿವರಿಸಿದರು.ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಸಂತೋಷಪಡಿಸಲು ವಿಶಿಷ್ಟ ವಿನ್ಯಾಸಯದ ಕಲೆಗಳನ್ನು ರೂಪಿಸಲಾಗುವುದು. ನೈಜ, ಸೂಪರ್ ರಿಯಾಲಿಸ್ಟಿಕ್, ಆಧುನಿಕ ಮತ್ತು ಸಮಕಾಲೀನ ಶೈಲಿಯ ಶಿಲ್ಪಕಲೆಯ ಬಗ್ಗೆ ಜನ ಸಾಮಾನ್ಯರಿಗೆ ಶಿಕ್ಷಣ ನೀಡುವುದು, ಆಧುನಿಕತೆಯ ಒತ್ತಡದ ಜಂಜಾಟದ ಮಧ್ಯೆ ನೆಮ್ಮದಿಯ ವಾತಾವರಣ ಕಲ್ಪಿಸುವಂತಹ ಸದುದ್ದೇಶದ ಥೀಮ್ ಪಾರ್ಕ್ ಇದಾಗಿರುತ್ತದೆ. ಹೆಚ್ಚು ಹೆಚ್ಚು ಜನರು ಥೀಮ್ ಪಾರ್ಕ್‌ಗೆ ಭೇಟಿ ನೀಡಬೇಕೆಂಬ ಉದ್ದೇಶವಿದೆ ಎಂದರು.
ವಿದ್ಯಾರ್ಥಿಗಳಿಗೆ ಮನರಂಜನೆ ಜೊತೆಗೆ ಸಾಂಪ್ರಾದಾಯಿಕ ಕೃಷಿ, ಇತರೆ ಹಳ್ಳಿಗಾಡಿನ ವೃತ್ತಿಗಳನ್ನು ಕಲೆ ಮತ್ತು ವಾಸ್ತು ಶಿಲ್ಪದ ರೂಪಗಳ ಮೂಲಕ ಪ್ರದರ್ಶಿಸಿ, ಗ್ರಾಮೀಣ ಪರಿಸರದ ಪರಿಚಯ ಮಾಡಿಕೊಡುವ ಪ್ರಯತ್ನ ಇಲ್ಲಿ ಆಗಿದೆ. ಕಲೆಯ ಮೂಲಕ ನಾಡಿನ ಗ್ರಾಮೀಣ ಜೀವನ ಪರಿಚಯವನ್ನು ಇಲ್ಲಿ ಸಂಯೋಜಿಸಲಾಗಿದೆ. ಮುಂದಿನ ಪೀಳಿಗೆಗೆ ದೊರಕಲಾಗದ ಅಕ್ಷರಗಳಲ್ಲಿ ತಿಳಿಸಲಾಗದ ಜೀವನ ಶೈಲಿ, ಆಟ, ಪಾಠ, ಆಚಾರ, ವೃತ್ತಿ, ವ್ಯವಹಾರ, ವಿಚಾರ, ಜನಪದರ ಬದುಕಿನ ವೈಖರಿಯನ್ನು ಸೃಜನಾತ್ಮಕ ಕಲಾಕೃತಿಗಳು ಇಲ್ಲಿ ವಿವರಿಸುತ್ತವೆ ಎಂದು ಮಾಹಿತಿ ನೀಡಿದರು.ಗ್ರಾಮೀಣ ಬದುಕನ್ನು ಮತ್ತೆ ಕಟ್ಟುವ ಪ್ರಯತ್ನ ಇದಾಗಿದೆ. ಫೈನ್ ಆರ್ಟ್ಸ್ ಕಾಲೇಜಿನ ಆವರಣದಲ್ಲಿ ಒಟ್ಟು 2-3 ಎಕರ ಜಾಗದಲ್ಲಿ ಥೀಮ್ ಪಾರ್ಕ್ ಮತ್ತು ಬಯಲು ರಂಗ ಮಂದಿರ ವಿನ್ಯಾಸಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕಲಾ ಗ್ಯಾಲರಿ, ಥೀಮ್ ಗಾರ್ಡನ್, ಕಲಾಕೃತಿಗಳ ವಸ್ತು ಸಂಗ್ರಹಾಲಯ, ಚಿತ್ರ ಕಲೆಗಳ ಪ್ರದರ್ಶನದ ವ್ಯವಸ್ಥೆ ಮಾಡುವ ಆಲೋಚನೆ ಇದೆ. ಯೋಜನೆಯಲ್ಲಿ ಆದಾಯದ ಉದ್ದೇಶವಿಲ್ಲವಾದರೂ, ನಿರ್ವಹಣೆಗಾಗಿ ಕನಿಷ್ಠ ಪ್ರವೇಶ ಶುಲ್ಕವನ್ನು ಮಾತ್ರವೇ ನಿಗದಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಥೀಮ್ ಪಾರ್ಕ್ ಮತ್ತು ಬಯಲು ರಂಗ ಮಂದಿರದ ಸ್ವಚ್ಛತೆ, ವಿದ್ಯುತ್ ಮತ್ತಿತರೆ ನಿರ್ವಹಣೆ ವೆಚ್ಚಕ್ಕಾಗಿ 10ನೇ ತರಗತಿ ಒಳಗಿನ ಮಕ್ಕಳಿಗೆ 10 ರು., ಸಾಮಾನ್ಯರಿಗೆ 20 ರು.ಗಳ ಪ್ರವೇಶ ಶುಲ್ಕ ಮಾತ್ರ ನಿಗದಿಪಡಿಸಿದೆ. ಬಯಲು ರಂಗ ಮಂದಿರವನ್ನು ಕಲಾ ತಂಡಗಳಿಗೆ 10 ಸಾವಿರ ರು.ಗೆ ಹಾಗೂ ವಾಣಿಜ್ಯಿಕ ಕಾರ್ಯಕ್ರಮಗಳಿಗೆ 20 ಸಾವಿರ ರು.ಗಳಿಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಲೇಜು ಪ್ರಾಚಾರ್ಯ ಡಾ.ಜೈರಾಜ ಎಂ.ಚಿಕ್ಕಪಾಟೀಲ, ಸತೀಶ ವಲ್ಲೇಪುರೆ, ದಾವಿವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಶಿವಕುಮಾರ ಕಣಸೋಗಿ, ಹಿರಿಯ ರಂಗಕರ್ಮಿಗಳಾದ ಬಾ.ಮ.ಬಸವರಾಜಯ್ಯ, ಎಸ್.ಎಸ್.ಸಿದ್ದರಾಜು, ಹಿರಿಯ ಕಲಾವಿದರಾದ ಎ.ಮಹಲಿಂಗಪ್ಪ ಇತರರು ಇದ್ದರು.