ಸಿದ್ದು ಘೋಷಿಸಿದ ಗಜೇಂದ್ರಗಡ ತಾಲೂಕಿಗೆ ಬೇಕಿದೆ ಹಲವು ಸೌಲಭ್ಯ

| Published : Feb 16 2024, 01:48 AM IST

ಸಿದ್ದು ಘೋಷಿಸಿದ ಗಜೇಂದ್ರಗಡ ತಾಲೂಕಿಗೆ ಬೇಕಿದೆ ಹಲವು ಸೌಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಗಜೇಂದ್ರಗಡ ತಾಲೂಕು ಕೇಂದ್ರವಾಗಬೇಕು ಎಂದು ಮೂರುವರೆ ದಶಕಗಳ ಕಾಲ ಹೋರಾಟ ನಡೆದಿತ್ತು. ಈ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತಾಲೂಕು ಕೇಂದ್ರ ಘೋಷಿಸಿದರು. ಆದರೆ ತಾಲೂಕು ಕೇಂದ್ರವಾದ ಮೇಲೆ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ಆಗದಿರುವುದು ಜನರಲ್ಲಿ ಬೇಸರ ಮೂಡಿಸಿದೆ.

ಎಸ್.ಎಂ. ಸೈಯದ್

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಗಜೇಂದ್ರಗಡ ತಾಲೂಕು ಕೇಂದ್ರವಾಗಬೇಕು ಎಂದು ಮೂರುವರೆ ದಶಕಗಳ ಕಾಲ ಹೋರಾಟ ನಡೆದಿತ್ತು. ಈ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತಾಲೂಕು ಕೇಂದ್ರ ಘೋಷಿಸಿದರು. ಆದರೆ ತಾಲೂಕು ಕೇಂದ್ರವಾದ ಮೇಲೆ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ಆಗದಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಐದು ವರ್ಷಗಳಲ್ಲಿ ಎಲ್ಲ ತಾಲೂಕು ಮಟ್ಟದ ಕಚೇರಿಗಳು ಆರಂಭವಾಗಿಲ್ಲ. ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವರೇ ಎಂದು ಜನ ಕಾಯುತ್ತಿದ್ದಾರೆ.ಗಜೇಂದ್ರಗಡ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ೪೨ ಗ್ರಾಮಗಳಿವೆ. ಎರಡು ಹೋಬಳಿ ಕ್ಷೇತ್ರಗಳಿವೆ. ೧೩ ಗ್ರಾಪಂ, ೧ ಪುರಸಭೆ, ೧ ಪಪಂ ಮತ್ತು ತಹಸೀಲ್ದಾರ್ ಕಚೇರಿ, ಉಪನೋಂದಣಿ ಕಾರ್ಯಾಲಯ, ಉಪ ಖಜಾನೆ, ಕೇಂದ್ರ ಸರ್ಕಾರದ ೧ ಅಂಚೆ ಕಚೇರಿ, ತಾಪಂ ಕಾರ್ಯಾಲಯ ಕಾರ್ಯ ನಿರ್ವಹಿಸುತ್ತಿವೆ. ೨೦೧೧ರಲ್ಲಿ ನಡೆದ ಜನಗಣತಿ ಆಧಾರದ ಮೇಲೆ ಒಟ್ಟು ಪುರುಷರು ೮೫,೬೮೭, ಮಹಿಳೆಯರು ೮೫,೧೭೮ ಜನಸಂಖ್ಯೆಯನ್ನು ಹೊಂದಿದೆ. ಸರ್ಕಾರಿ ಹಾಗೂ ಅನುದಾನಿತ ಮತ್ತು ಅನುದಾನಿತ ರಹಿತ ೧೨೭ ಪ್ರಾಥಮಿಕ ಶಾಲೆಗಳು, ೨೯ ಪ್ರೌಢಶಾಲೆಗಳು, ೧೩ ಪದವಿ ಪೂರ್ವ ಕಾಲೇಜುಗಳು, ೪ ಪ್ರಥಮ ದರ್ಜೆ ಕಾಲೇಜು, ೩ ಉಪ ಅಂಚೆ ಕಚೇರಿಗಳು, ೧೨೦ ಅಂಗನವಾಡಿ ಕೇಂದ್ರಗಳು, ೧೧ ಬ್ಯಾಂಕ್‌ಗಳು, ೧ ಕೃಷಿ ಉತ್ಪನ್ನ ಮಾರುಕಟ್ಟೆ, ೩ ಪಶು ವೈದ್ಯಕೀಯ ಆಸ್ಪತ್ರೆ, ೫ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.

ಅಗತ್ಯ ಕಚೇರಿಗಳು:ಪಟ್ಟಣದಲ್ಲಿ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ಜತೆಗೆ ಮಿನಿವಿಧಾನ ಸೌಧ ನಿರ್ಮಾಣವಾಗಬೇಕಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಕಚೇರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ನೀರಾವರಿ, ಸಣ್ಣ ನೀರಾವರಿ ಇಲಾಖೆ, ೧೦೦ ಹಾಸಿಗೆಯ ತಾಲೂಕು ಆಸ್ಪತ್ರೆ, ಸಿಪಿಐ ಕಚೇರಿ, ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಪಶು ಸಂಗೋಪನಾಧಿಕಾರಿಗಳ ಕಚೇರಿಗಳು ಆರಂಭಗೊಳ್ಳಬೇಕಿದೆ.ಕ್ರೀಡಾಂಗಣ ನಿರ್ಮಾಣ: ವಾಣಿಜ್ಯ ನಗರಿಯಾಗಿರುವ ಗಜೇಂದ್ರಗಡ ಪಟ್ಟಣದಲ್ಲಿ ತಾಲೂಕು ಮಟ್ಟದ ಆಸ್ಪತ್ರೆ ನಿರ್ಮಾಣವಾಗಬೇಕಿದೆ. ಪ್ರಸೂತಿ ಸಂದರ್ಭದಲ್ಲಿ ಮರಣ ಹೊಂದುವ ಮಹಿಳೆಯರ ಪ್ರಕರಣಗಳು ತಾಲೂಕಿನಲ್ಲಿ ಹೆಚ್ಚು ದಾಖಲಾಗುತ್ತಿದೆ. ಪಟ್ಟಣದಲ್ಲಿನ ಸಮುದಾಯ ಆಸ್ಪತ್ರೆಯು ೩೫ ಹಾಸಿಗೆಯದ್ದಾಗಿದ್ದು, ವೈದ್ಯರ ಕೊರತೆಯಿಂದಾಗಿ ಹೆರಿಗೆ, ಸಣ್ಣಪುಟ್ಟ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಅಥವಾ ನೆರೆಯ ತಾಲೂಕು ಕೇಂದ್ರಗಳ ಆಸ್ಪತ್ರೆಗಳಿಗೆ ರೋಗಿಗಳು ಹೋಗುವ ಪರಿಸ್ಥಿತಿ ಇದೆ. ಸಮುದಾಯ ಆಸ್ಪತ್ರೆ ೧೦೦ ಹಾಸಿಗೆ ತಾಲೂಕು ಆಸ್ಪತ್ರೆಯಾಗಿಸಲು ಬಜೆಟ್‌ನಲ್ಲಿ ಹಸಿರು ನಿಶಾನೆ ಸಿಗಬೇಕಿದೆ. ಇತ್ತ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಒತ್ತಡವಿದ್ದು, ಶಾಸಕ ಜಿ.ಎಸ್. ಪಾಟೀಲ ಕೆಲವು ಕಾರ್ಯಕ್ರಮಗಳಲ್ಲಿ ಕ್ರೀಡಾಂಗಣ ನಿರ್ಮಿಸುವ ಭರವಸೆ ನೀಡಿದ್ದರು. ಹೀಗಾಗಿ ಬಜೆಟ್‌ನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಸಿಗಲಿದೆಯಾ ಎಂಬ ಆಸೆ ಚಿಗುರಿದೆ. ಇತ್ತ ಗಜೇಂದ್ರಗಡ ಭಾಗದ ಕೆರೆಗಳನ್ನು ತುಂಬಿಸಲು ಶಾಸಕರು ಕ್ರಿಯಾ ಯೋಜನೆ ಕಳುಹಿಸಿದ್ದಾಗಿ ಹೇಳಿದ್ದಾರೆ. ಬಜೆಟ್‌ನಲ್ಲಿ ಕೆರೆಗಳನ್ನು ತುಂಬಿಸಲು ಅನುದಾನ ಬಿಡುಗಡೆ ಆಗಬಹುದೇ ಎಂಬುದು ಜನರ ಆಸೆ. ಜತೆಗೆ ನ್ಯಾಯಾಲಯ ಕಟ್ಟಡ ನಿರ್ಮಾಣ ಮತ್ತು ಕಾಯಂ ನ್ಯಾಯಾಲಯ ಆರಂಭ, ಪಟ್ಟಣ, ಕಾಲಕಾಲೇಶ್ವರ, ಸೂಡಿ, ಇಟಗಿ ಸೇರಿ ಇತರ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಬಜೆಟ್‌ನಲ್ಲಿ ಅನುಮೋದನೆ ಸಿಗಲಿದೆಯಾ ಎಂಬ ಪ್ರಶ್ನೆಗಳಿಗೆ ಬಜೆಟ್‌ನಲ್ಲಿ ಉತ್ತರ ಸಿಗಬೇಕಿದೆ.ಗಜೇಂದ್ರಗಡ ಪಟ್ಟಣವು ತಾಲೂಕು ಕೇಂದ್ರವಾಗಿ ೫ ವರ್ಷಗಳು ಗತಿಸುತ್ತಾ ಬಂದಿವೆ. ಆದರೆ ಪಟ್ಟಣದಲ್ಲಿ ತಾಲೂಕು ಮಟ್ಟದ ಎಲ್ಲ ಕಚೇರಿಗಳು ಇನ್ನೂ ಆರಂಭವಾಗದೇ ಇರುವುದು ವಿಪರ್ಯಾಸ. ಇನ್ನಾದರೂ ಸರ್ಕಾರಗಳು ಪಟ್ಟಣವನ್ನು ಹೆಸರಿಗಷ್ಟೇ ತಾಲೂಕು ಕೇಂದ್ರಕ್ಕೆ ಸೀಮಿತಗೊಳಿಸದೆ ಕಚೇರಿಗಳನ್ನು ಆರಂಭಿಸುವ ಮೂಲಕ ಅಧಿಕೃತ ತಾಲೂಕು ಕೇಂದ್ರವನ್ನಾಗಿಸಲಿ ಮುಖಂಡ ಗಣೇಶ ಗುಗಲೋತ್ತರ ಹೇಳುತ್ತಾರೆ.

ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಕೆರೆಗಳನ್ನು ತುಂಬಿಸುವ ಮೂಲಕ ಈ ಭಾಗದಲ್ಲಿ ನೀರಾವರಿಗೆ ಆದ್ಯತೆ ನೀಡುವ ಜತೆಗೆ ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿದರೆ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ವರ್ತಕ ನಾಗರಾಜ ಸವದಿ ಹೇಳುತ್ತಾರೆ.