ಗಮಕ ಕಲೆ ಪುರಾಣ ಕಾವ್ಯಗಳನ್ನು ಜನರಿಗೆ ತಲುಪಿಸುವ ಶ್ರೇಷ್ಠ ಮಾಧ್ಯಮ: ಎಂ.ಎನ್. ಹೆಗಡೆ

| Published : Jan 20 2025, 01:34 AM IST

ಗಮಕ ಕಲೆ ಪುರಾಣ ಕಾವ್ಯಗಳನ್ನು ಜನರಿಗೆ ತಲುಪಿಸುವ ಶ್ರೇಷ್ಠ ಮಾಧ್ಯಮ: ಎಂ.ಎನ್. ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಜಿಲ್ಲೆಯಲ್ಲಿ ಗಮಕ ಕಲೆ ಪ್ರಚಲಿತವಿಲ್ಲ. ಅದಕ್ಕೆ ಪ್ರಭಾವಿ ಕಲೆಯಾದ ಯಕ್ಷಗಾನವೂ ಕಾರಣವಿರಬಹುದು ಎಂದು ಎಂ.ಎನ್. ಹೆಗಡೆ ಹಳವಳ್ಳಿ ಹೇಳಿದರು.

ಯಲ್ಲಾಪುರ: ಪುರಾಣ ಕಾವ್ಯಗಳನ್ನು ಜನರಿಗೆ ತಲುಪಿಸುವ ಒಂದು ಶ್ರೇಷ್ಠ ಮಾಧ್ಯಮ ಗಮಕ ಕಲೆಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕರೂ, ಯಕ್ಷಗಾನ ಅರ್ಥಧಾರಿಗಳೂ ಆದ ಎಂ.ಎನ್. ಹೆಗಡೆ ಹಳವಳ್ಳಿ ಹೇಳಿದರು.

ಶನಿವಾರ ಶಿರಸಿ ರಸ್ತೆಯಲ್ಲಿರುವ ಸಂಸ್ಕೃತಿ ನಿವಾಸದ ಸಭಾಭವನದಲ್ಲಿ ಕರ್ನಾಟಕ ಗಮಕಕಲಾ ಪರಿಷತ್ ಉತ್ತರ ಕನ್ನಡ, ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ ಯಲ್ಲಾಪುರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕುಮಾರವ್ಯಾಸ ಜಯಂತಿ ಅಂಗವಾಗಿ ನಡೆಸಲಾದ ಗಮಕ ವಾಚನ, ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗದುಗಿನ ವೀರನಾರಾಯಣನ ಭಕ್ತನಾದ ನಾರಣಪ್ಪ ಕೃಷ್ಣ ಕಥೆಯ ಮೂಲಕ ಕುಮಾರವ್ಯಾಸನೆಂದೇ ಪ್ರಖ್ಯಾತಿ ಹೊಂದಿ, ಅದ್ಭುತವಾದ ಷಟ್ಪದಿ ಕಾವ್ಯವನ್ನು ರಚಿಸಿ, ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾನೆ. ಅವನ ಕಾವ್ಯವನ್ನು ಮನೆಮನೆಯಲ್ಲಿ ಪ್ರಸ್ತುತಪಡಿಸುವ ಒಂದು ಪರಂಪರೆ ಬೆಳೆಯುವಂತಾಗಬೇಕು. ಹಿಂದೆ ಮನೆಮನೆಗಳಲ್ಲಿ ಪುರಾಣ ಪ್ರವಚನಗಳು ನಡೆಯುತ್ತಿದ್ದವು ಎಂದು ಸ್ಮರಿಸಿದರು.

ನಮ್ಮ ಜಿಲ್ಲೆಯಲ್ಲಿ ಗಮಕ ಕಲೆ ಪ್ರಚಲಿತವಿಲ್ಲ. ಅದಕ್ಕೆ ಪ್ರಭಾವಿ ಕಲೆಯಾದ ಯಕ್ಷಗಾನವೂ ಕಾರಣವಿರಬಹುದು. ಶಿವಮೊಗ್ಗ ಜಿಲ್ಲೆಯ ಹೊಸಳ್ಳಿ ಮುತ್ತೂರು ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿರುವುದನ್ನು ಗಮನಿಸಿದ್ದೇವೆ ಎಂದರು.

ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಕರೆದು ಗೌರವಿಸಲ್ಪಡುವ ಕುಮಾರವ್ಯಾಸ ದೊಡ್ಡ ತಪಸ್ಸಿನ ಮೂಲಕ ಇಂತಹ ಕೃತಿಯನ್ನು ಕನ್ನಡಕ್ಕೆ ನೀಡಿದ್ದಾನೆ. ಕುಮಾರವ್ಯಾಸನಂತಹ ಕವಿಗಳು ದೊರೆಯುವುದು ಅಪರೂಪ. ಅಂತಹ ಕಾವ್ಯವನ್ನು ಇಂದು ೧೦ ಜನ ಮಾತೆಯರೆಲ್ಲ ಸೇರಿ ಇಲ್ಲಿ ಸುಂದರವಾಗಿ ಅದರಲ್ಲೂ ಪ್ರಪ್ರಥಮವಾಗಿ ಕಾರ್ಯಕ್ರಮ ನಡೆಸಿಕೊಟ್ಟಿರುವುದು ಯಲ್ಲಾಪುರದ ಇತಿಹಾಸದಲ್ಲಿ ದಾಖಲೆ ಎನ್ನಬಹುದಾಗಿದೆ. ಅದರಲ್ಲೂ ತಾಳ್ಮೆ ಎನ್ನುವ ಶಬ್ದಕ್ಕೆ ಪರ್ಯಾಯವಾದ ಮಾತೆಯರು ಸಮಾಜದ ಯುವಜನಾಂಗದವರಿಗೆ ಈ ಪರಂಪರೆ ಮುಂದುವರೆಸಿಕೊಂಡು ಹೋಗುವ ಹೊಣೆ ನಿಭಾಯಿಸುತ್ತಿದ್ದಾರೆ ಎಂದರು.

ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ ಅಧ್ಯಕ್ಷತೆ ವಹಿಸಿದ್ದರು.

ರವೀಂದ್ರ ನಗರದ ಆದರ್ಶ ಮಹಿಳಾ ಮಂಡಳಿ ಅಧ್ಯಕ್ಷೆ ಶಾಂತಲಾ ಹೆಗಡೆ, ಮಾತೃ ಮಂಡಳಿ ಪ್ರಮುಖರಾದ ಮಹಾದೇವಿ ಭಟ್ಟ ಸಾಂದರ್ಭಿಕ ಮಾತನಾಡಿದರು. ಶ್ರೀಯಾ ಪ್ರಕಾಶ ಭಟ್ಟ ಪ್ರಾರ್ಥಿಸಿದಳು. ಸಂಧ್ಯಾ ಗುಮ್ಮಾನಿ ನಿರ್ವಹಿಸಿದರು. ಅಶ್ವಿನಿ ಗಾಂವ್ಕರ ಮಣ್ಕುಳಿ ವಂದಿಸಿದರು.

ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾ ಶಂಕರ ಮಾರ್ಗದರ್ಶನದಲ್ಲಿ ವಾಚನಕಾರರಾಗಿ ಗಾಯತ್ರಿ ಗಣಪತಿ ಬೋಳಗುಡ್ಡೆ, ಸರೋಜಾ ಪ್ರಶಾಂತ ಹೆಗಡೆ, ಲಕ್ಷ್ಮೀ ಶಂಕರ ಭಟ್ಟ, ಆಶಾ ರವಿ ಬಗನಗದ್ದೆ, ಅಂಬಿಕಾ ಭಟ್ಟ ಸುಂದರವಾಗಿ ಕುಮಾರವ್ಯಾಸ ಭಾರತದ ಸುಭದ್ರಾ ಕಲ್ಯಾಣ ಮತ್ತು ಜರಾಸಂದ ಭಾಗದ ಆಯ್ದ ಪದ್ಯಗಳನ್ನು ಪ್ರಸ್ತುತಪಡಿಸಿದರು. ವ್ಯಾಖ್ಯಾನಕಾರರಾಗಿ ಜಾಹ್ನವಿ ಎಸ್. ಮಣ್ಮನೆ, ರಚನಾ ಹೆಗಡೆ, ವಿಜಯಶ್ರೀ ಹೆಗಡೆ, ಸಂಧ್ಯಾ ಕೊಂಡದಕುಳಿ, ಮಮತಾ ಪ್ರಕಾಶ ಸಮರ್ಥವಾಗಿ ವ್ಯಾಖ್ಯಾನಿಸಿದರು.