ಸಾರಾಂಶ
- 333 ಸೆಂ.ಮೀ. ಎತ್ತರ, 66 ಸೆಂ.ಮೀ. ಅಗಲವಿರುವ ಕಂಬ: ಡಾ. ಶೇಜೇಶ್ವರ ಆರ್. ಮಾಹಿತಿ - - - ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ಬಿಳಸನೂರು ಗ್ರಾಮದಲ್ಲಿ ವಿಶೇಷ ಗರುಡನಂದಿಗಂಬ ಶಾಸನ ಪತ್ತೆಯಾಗಿದೆ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಂಪಿ ನಿರ್ದೇಶಕ ಡಾ. ಶೇಜೇಶ್ವರ ಆರ್. ತಿಳಿಸಿದ್ದಾರೆ.ಇದೊಂದು ದತ್ತಿ ನಿಮಿತ್ತ ನಿರ್ಮಿಸಿದ ಕಂಬವಾಗಿದೆ. ಶಾಸನದಲ್ಲಿ ದತ್ತಿಯ ವಿವರಗಳನ್ನು ಕೊಡಲಾಗಿದೆ. ಶಿಷ್ಟ್ ಶಿಲೆಯಲ್ಲಿ ನಿರ್ಮಿತವಾದ ಈ ಕಂಬದ ಮೇಲ್ಭಾಗದಲ್ಲಿ ಪಶ್ಚಿಮ ಅಭಿಮುಖವಾಗಿ ನಂದಿಯ ವಿಗ್ರಹವನ್ನು ಹಾಗೂ ದಕ್ಷಿಣಾಭಿಮುಖವಾಗಿ ಅಂಜಲಿಮುದ್ರಾ ಭಂಗಿಯ ಗರುಡಶಿಲ್ಪವನ್ನು ಕೆತ್ತಲಾಗಿದೆ. ಈ ಕಂಬವು 333 ಸೆಂಟಿ ಮೀಟರ್ ಎತ್ತರ ಹಾಗೂ 66 ಸೆಂಟಿ ಮೀಟರ್ ಅಗಲವಿದೆ. ಕಂಬದ ಉತ್ತರ ಮುಖದ ಸಮತಟ್ಟಿನಲ್ಲಿ 10 ಸಾಲಿನ ಕನ್ನಡ ಲಿಪಿಯ ಸಂಸ್ಕೃತ ಶಾಸನವಿದೆ. ಈ ಶಾಸನ ಹರಿಹರದೆಳೆಗಳು ಎಂಬ ಪುಸ್ತಕದಲ್ಲಿ ಅಸ್ಪಷ್ಟವಾಗಿದೆ ಎಂದು ಗುರುತಿಸಿದ್ದಾರೆ.
ಈ ಇತಿಹಾಸದ ಕುರುಹನ್ನು ಶುಚಿಗೊಳಿಸಿದಾಗ 10 ಸಾಲಿನ ಸ್ಪಷ್ಟ ಶಾಸನ ದೊರೆತಿದೆ. ಶಾಸನವು ಮೂರು ಸಂಸ್ಕೃತ ಶ್ಲೋಕಗಳಿಂದ ಕೂಡಿದೆ. ಆರಂಭದಲ್ಲಿ ಹರಿಹರದ ಆರಾಧ್ಯದೈವ ಹರಿಹರೇಶ್ವರನನ್ನು ಸ್ತುತಿಸಲಾಗಿದೆ. ಇದೇ ಶ್ಲೋಕ ಮುಂದುವರಿದು, ಸುರಾಸುರರಿಂದ ಕೀರ್ತಿತನಾದ ಗಣಪತಿಯನ್ನು ಗುಣಗಾನಿಸುತ್ತದೆ. ಎರಡನೆಯ ಶ್ಲೋಕವು ವಿಷ್ಣುವಿನ ವರಹ ಅವತಾರವನ್ನು ಉಲ್ಲೇಖಿಸುತ್ತಿದ್ದು, ವರಾಹಸ್ವಾಮಿಯು ತನ್ನ ಕೋರೆಯಲ್ಲಿ ಭೂದೇವಿಯನ್ನು ನಭದತ್ತ ಎತ್ತಿಹಿಡಿದ ಪರಿಯನ್ನು ಬಣ್ಣಿಸುತ್ತದೆ. ಮೂರನೆಯ ಶ್ಲೋಕವು ದೇವಗಿರಿ ಯಾದವರೆಂದೇ ಪ್ರಸಿದ್ಧರಾದ ಸೇವುಣರ ರಾಜ್ಯಭಾರವನ್ನು ಪ್ರಸ್ತಾಪಿಸುತ್ತಾ ಆ ಮನೆತನದ ಕಂಧಾರನ ಆಳ್ವಿಕೆ ಸೂಚಿಸುತ್ತದೆ ಎಂದಿದ್ದಾರೆ.ಕಂಧಾರ ಎಂಬುದು ಸೇವುಣ ಕೃಷ್ಣನಿಗಿರುವ ಇನ್ನೊಂದು ಹೆಸರು. ಈ ಕೃಷ್ಣ ಕ್ರಿ.ಶ 1247 ರಿಂದ ಕ್ರಿ.ಶ 1261 ವರೆಗೆ 14 ಪೂರ್ಣ ವರ್ಷಗಳ ಕಾಲ ರಾಜ್ಯಭಾರ ಮಾಡುತ್ತಾನೆ. ಈ ಅವಧಿಯಲ್ಲಿ ಹರಿಹರ ಪರಿಸರವೂ ಕೃಷ್ಣನ ಆಳ್ವಿಕೆಗೆ ಒಳಪಟ್ಟಿದೆ. ಸ್ಥಳೀಯವಾಗಿ ಕಾಡಭೂಪತಿ ಎಂಬ ಪ್ರಧಾನ ಆಳುತ್ತಿದ್ದ. ಈ ಕಾಡಭೂಪ ‘ಹರಿಹರ’ ಮತ್ತು ‘ಬೆಳುಚೂರು’ (ಈಗಿನ ಬಿಳಸನೂರು) ಗ್ರಾಮಗಳನ್ನು ಸೌಮ್ಯ ಸಂವತ್ಸರದಲ್ಲಿ ಅಂದರೆ ಕ್ರಿ.ಶ. 1249 ರಲ್ಲಿ ದಾನವಿತ್ತನು ಎಂದು ಶ್ಲೋಕದಲ್ಲಿ ಹೇಳಲಾಗಿದೆ.
ದಾನವನ್ನು ಎಲ್ಲಿಗೆ ಕೊಟ್ಟ ಎಂದು ಶಾಸನದಲ್ಲಿ ಹೇಳಲಾಗಿಲ್ಲ. ಇದು ಧರ್ಮ ಸಮನ್ವಯ ಕಂಭ. ಹರಿ ಮತ್ತು ಹರ ಅವತಾರವಾದ ಹರಿಹರೇಶ್ವರ ದೈವವು ಒಂದು ಧರ್ಮಸಮಾಗದ ದೇವರಾಗಿದೆ. ಶೈವ ಹಾಗೂ ವೈಷ್ಣವ ಸಮಯಗಳು ಒಂದೇ ಎಂಬಂತೆ ಸಾರಲು ಈ ಅವತಾರವಾಗಿದೆ. ಅಂತೆಯೇ ವಿಷ್ಣುವಾಹನವಾದ ಗರುಡವನ್ನು ಹಾಗೂ ಶಿವನ ವಾಹನವಾದ ನಂದಿಯನ್ನು ಒಟ್ಟೊಟ್ಟಿಗೆ ಸಮೀಕರಿಸಿ, ಕಂಬವನ್ನು ಕೆತ್ತುವ ಸಂಪ್ರದಾಯ ತುಂಗಭದ್ರಾ ನದಿ ಎಡ ಹಾಗೂ ಬಲದಂಡೆ ಊರುಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ.ರಾಣೆಬೆನ್ನೂರು ತಾಲೂಕಿನ ಗುಡ್ಡದಹೊಸಳ್ಳಿ, ಹಿರೇಕೆರೂರು ತಾಲೂಕಿನ ಕೋಡ ಗ್ರಾಮದಲ್ಲಿ ಇದೇ ತರಹದ ಗರುಡನಂದಿಗಂಭಗಳು ಕಂಡುಬರುತ್ತವೆ. ಈ ಎಲ್ಲ ಕಂಭಗಳಿಗಿಂತ ವಿಶೇಷ ಹಾಗೂ ಶಾಸನಯುಕ್ತವಾದ ಗರುಡನಂದಿಗಂಭ ಬಿಳಸನೂರಿನದು. ಈ ಕಂಬಗಳು ಕರ್ನಾಟಕದಲ್ಲಿಯೇ ವಿಶೇಷವಾದುದು ಎಂದು ಡಾ.ಶೇಜೇಶ್ವರ ಆರ್. ವಿವರಿಸಿದ್ದಾರೆ.
ಕೇತ್ರ ಕಾರ್ಯದಲ್ಲಿ ನೆರವಾದ ಪ್ರಾಧ್ಯಾಪಕ ತಿಪ್ಪೇಶ್, ಡಾ.ರವಿಕುಮಾರ ಕೆ. ನವಲಗುಂದ, ಬಿಳಸನೂರಿನ ಗ್ರಾಮಸ್ಥರು, ಶಾಸನ ಓದುವಲ್ಲಿ ಸಹಕರಿಸಿದ ಶಾಸನತಜ್ಞರಾದ ಡಾ.ಶ್ರೀನಿವಾಸ ಪಾಡಿಗಾರ, ಡಾ.ಜಗದೀಶ್ ಅವರಿಗೆ ಹಂಪಿ ನಿರ್ದೇಶಕ ಡಾ.ಶೇಜೇಶ್ವರ ಆರ್. ಧನ್ಯವಾದಗಳನ್ನು ಅರ್ಪಿಸಿದ್ದಾರೆ.- - - -29ಎಚ್‍ಆರ್‍ಆರ್4:
-29ಎಚ್‍ಆರ್‍ಆರ್4ಎ: