ಸಾರಾಂಶ
ಕೊಪ್ಪಳ: ಗವಿಮಠದ ಇತಿಹಾಸ ನಾನು ಕೇಳಿದ್ದೆ. ಜಾತ್ರೆಗೆ ಬರುವ ಆಸೆ ಬಹಳ ದಿನಗಳದ್ದು. ಗವಿಸಿದ್ದೇಶ್ವರ ಜಾತ್ರೆ ರಾಜ್ಯದ ಬಹುದೊಡ್ಡ ಜಾತ್ರೆಯಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಬಣ್ಣಿಸಿದರು.ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸಿದ ವೇಳೆ ತಾಲೂಕಿನ ಕಿಡದಳ್ ಗ್ರಾಮದ ಶಾರದಾ ಇಂಟರ್‌ನ್ಯಾಷನಲ್ ಸ್ಕೂಲ್ ನಲ್ಲಿ ಮಾತನಾಡಿದ ಡಿಸಿಎಂ, ಈ ಭಾಗದ ನಾಯಕರು ಜಾತ್ರೆಗೆ ಬರಲು ಬಹಳ ಒತ್ತಾಯ ಮಾಡಿದರು. ಹೀಗಾಗಿ ನಾನು ಗವಿಸಿದ್ದೇಶ್ವರ ಜಾತ್ರೆಗೆ ಬಂದಿದ್ದೇನೆ. ಗವಿಶ್ರೀಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಕ್ರಾಂತಿ ನಡೆಯುತ್ತಿದೆ. ಶ್ರೀಗಳಿಂದ ಕೊಪ್ಪಳದಲ್ಲಿ ಬಹಳ ಬದಲಾವಣೆ ಆಗುತ್ತಿದೆ. ಈ ಭಾಗದ ಜನಕ್ಕೆ ಗವಿ ಶ್ರೀಗಳು ಶಕ್ತಿ ತುಂಬಿದ್ದಾರೆ. ಸರ್ಕಾರದಿಂದಲೂ ಮಠಕ್ಕೆ ಶಕ್ತಿ ತುಂಬಲು ಬಂದಿದ್ದೇನೆ ಎಂದರು.ಜನರ ಭಾವನೆ, ನಂಬಿಕೆ ಜೊತೆಗೆ ಇದ್ದೇನೆ. ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಬದ್ಧ ಇದೆ. ಆಂಧ್ರಪ್ರದೇಶ, ತೆಲಂಗಾಣ ಸಿಎಂಗಳಿಗೆ ಪತ್ರ ಬರೆದಿದ್ದೇನೆ. ಮೂರು ರಾಜ್ಯದ ಸಚಿವರು ತೀರ್ಮಾನಕ್ಕೆ ಬರೋಣ ಎಂದಿದ್ದಾರೆ. ತೆಲಂಗಾಣ ರಾಜ್ಯದವರು ಎಲೆಕ್ಷನ್ ಬ್ಯುಸಿಯಲ್ಲಿ ಇದ್ದಾರೆ. ಹೀಗಾಗಿ ನಮಗೆ ಎರಡೂ ರಾಜ್ಯದವರು ಸಮಯ ಕೊಟ್ಟಿಲ್ಲ. ಸುಖಾಸುಮ್ಮನೆ 30 ಟಿಎಂಸಿ ನೀರು ಕಳೆದುಕೊಳ್ಳುತ್ತಿದ್ದೇವೆ. ಇದು ನಮ್ಮ ರಾಜ್ಯಕ್ಕೆ ದೊಡ್ಡ ನಷ್ಟ. ಸಮಾನಾಂತರ ಜಲಾಶಯ ಕಟ್ಟಬೇಕು ಅನ್ನುವುದು ಬಹಳ ದಿನದ ಕನಸು. ಬಹಳ ವರ್ಷದಿಂದ ಸಾವಿರಾರು ಜನರು ಹೋರಾಟ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಅಧಿವೇಶನದಲ್ಲಿ ಮಾತಾಡಿದ್ದಾರೆ ಎಂದರು.ಶೆಟ್ಟರ್ ಸೋತರೂ ಸ್ಥಾನಮಾನ ಕೊಟ್ಟಿದ್ದೆವು: ಬಿಜೆಪಿಯವರಿಂದಾದ ಅನ್ಯಾಯದಿಂದ ಶೆಟ್ಟರ್ ಕಾಂಗ್ರೆಸ್ಸಿಗೆ ಬಂದಿದ್ದರು. ಕಾಂಗ್ರೆಸ್ ನಿಂದ ಟಿಕೆಟ್ ಕೊಟ್ಟಿದ್ದೆವು, ಗೆಲ್ಲುತ್ತಾರೆ ಅಂದುಕೊಂಡಿದ್ದೆವು. ಶೆಟ್ಟರ್ ಬಹಳ ಅಂತರದಿಂದ ಸೋತರು. ಮಾಜಿ ಸಿಎಂ ಬಂದ್ರು ಅಂತ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಮಾಡಿದ್ದೆವು. ಬಿಜೆಪಿ ಬಗ್ಗೆ ಆಡಿದ ಮಾತು ನುಡಿದಂತಹ ನುಡಿಮುತ್ತು ಗಮನಿಸಿ ಎಂಎಲ್‌ಸಿ ಮಾಡಿದೆವು. ಆದರೆ ಅವರು ಪಕ್ಷ ಬಿಟ್ಟು ಬಿಜೆಪಿಗೆ ಹೋದರು ಎಂದರು.ರಾಜಕಾರಣ ಯಾವಾಗಲೂ ನಿಂತ ನೀರಲ್ಲ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗ್ತಾರೆ ಬರ್ತಾರೆ. ಹೋಗೋದು, ಬರೋದು ಕಾಮನ್ ವಿಚಾರ ಎಂದರು.ಮಲ್ಲಿಕಾರ್ಜುನ ಖರ್ಗೆ ನಮಗೆ ಕಿವಿಮಾತು ಹೇಳಿದ್ದಾರೆ. ಯಾರೇ ಪಕ್ಷಕ್ಕೆ ಬರುವಾಗ ಪೂರ್ವಾಪರ ತಿಳಿದುಕೊಂಡು ಸೇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ ಎಂದರು.ಬಿಜೆಪಿ ಸರ್ಕಾರದಲ್ಲಿ ಗವಿಮಠಕ್ಕೆ ₹10 ಕೋಟಿ ಮಂಜೂರು ವಿಚಾರವಾಗಿ, ಮಂಜೂರು ಆದ ಹಣವನ್ನು ಕಾಂಗ್ರೆಸ್ ತಡೆ ಹಿಡಿದಿದೆ ಎಂದು ಮಾತಾಡೋದು ಮುಖ್ಯ ಅಲ್ಲ. ಜೋಬಲ್ಲಿ ದುಡ್ಡು ಬಂದ್ರೆ ಮಾತಾಡಬೇಕು. ಐದು ಗ್ಯಾರಂಟಿ ಕೊಟ್ಟಿದ್ದೇನೆ. ಜನರಿಗೆ ಉಪಯೋಗ ಆಗುತ್ತಿದೆ. ಬಿಜೆಪಿಯವರು ಆದೇಶ ಮಾಡಿದ್ದಾರೆಯೇ ಹೊರತು ಮಠಕ್ಕೆ ಹಣ ಕೊಟ್ಟಿಲ್ಲ ಎಂದರು.ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಬಹಳ ಮಂದಿ ಬೇಡ ಅಂದಿದ್ದಾರೆ. ಬೇಡ ಅಂದವರನ್ನು ಕರೆಸಿ ಮಾತಾಡಿ ಸರಿ ಮಾಡುತ್ತೇವೆ. ವಿಜಯಾನಂದ ಕಾಶಪ್ಪನವರಗೆ ನಿಯಮಬಾಹಿರ ಅಧ್ಯಕ್ಷ ಸ್ಥಾನ ಘೋಷಣೆ ಮಾಡಿದ್ದ ಹಿನ್ನೆಲೆ ಬಹಿರಂಗ ಅಸಮಾಧಾನ ಹೊರಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಇದನ್ನು ಪರಿಶೀಲಿಸಿ ಸರಿ ಮಾಡುತ್ತೇವೆ ಎಂದರು.ಶಾಸಕ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಮುಚ್ಚಬೇಕು ಎಂಬ ವಿಚಾರಕ್ಕೆ ಅರಣ್ಯ ಇಲಾಖೆ, ಪೊಲ್ಯೂಷನ್ ಬೋರ್ಡ್ ನೋಡಿಕೊಳ್ಳುತ್ತದೆ. ಶಾಸಕ ಯತ್ನಾಳ್ ಮೇಲೆ ನಮಗೆ ದ್ವೇಷ ಇಲ್ಲ ಎಂದು ಡಿಕೆಶಿ ಹೇಳಿದರು.