ಸಾರಾಂಶ
ಮಕ್ಕಳು ಪಾಠ, ಅಭ್ಯಾಸಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೂ ನೀಡಿದರೆ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಲಿದೆ.
ಚಿತ್ರದುರ್ಗ: ಪಠ್ಯದಷ್ಟೆ ಕ್ರೀಡೆಯೂ ಮುಖ್ಯವಾಗಿರುವುದರಿಂದ ಮಕ್ಕಳು ಕ್ರೀಡಾಸಕ್ತಿ ಬೆಳೆಸಿಕೊಳ್ಳುವಂತೆ ಶಾಸಕ ಟಿ.ರಘುಮೂರ್ತಿ ಕ್ರೀಡಾಪಟುಗಳಿಗೆ ಸಲಹೆ ಮಾಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ, ಎಚ್‌ಪಿಸಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟ ಹಾಗೂ ವಿವಿ ತಂಡದ ಆಯ್ಕೆ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು 134 ಕಾಲೇಜುಗಳ 800 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿ. ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಚಳ್ಳಕೆರೆ ಹೆಚ್.ಪಿಸಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಆರ್.ರಂಗಪ್ಪ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಮುಖ್ಯ. ವಿದ್ಯಾರ್ಥಿಗಳು ಮೊಬೈಲ್‍ನಲ್ಲಿ ತಲ್ಲೀನರಾಗುವುದೇ ಕ್ರೀಡೆ ಎಂದುಕೊಂಡಂತಿದೆ. ಹಾಗಾಗಿ ಕ್ರೀಡಾ ಮನೋಭಾವ ಕಡಿಮೆಯಾಗುತ್ತಿದೆ. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪುರುಷರ ವಿಭಾಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಹೊನ್ನಾಳಿಯ ಎಸ್.ಎಂಎಸ್ ಪ್ರಥಮ ದರ್ಜೆ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು. ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ತಂಡ ತನ್ನದಾಗಿಸಿಕೊಂಡಿತು.ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಕ್ರೀಡಾಧಿಕಾರಿ ಡಾ.ವೀರಪ್ಪ, ಕ್ರೀಡಾಕೂಟದ ಕಾರ್ಯದರ್ಶಿ ಎಚ್.ತಿಪ್ಪೇಸ್ವಾಮಿ, ರಾಷ್ಟ್ರ ಮಟ್ಟದ ತೀರ್ಪುಗಾರ ಅರುಣ್, ಅನಿಲ್ ಕುಮಾರ್, ಗಂಗಾಧರ್, ಡಾ.ವೀರೇಂದ್ರ, ಡಾ.ಪಾಪಣ್ಣ, ರಘುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ಇತಿಹಾಸ ಉಪನ್ಯಾಸಕಿ ಜಯಮ್ಮ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.