ಸಾರಾಂಶ
ಶ್ರೀಕ್ಷೇತ್ರ ಕೂಡ್ಲಿ ಗ್ರಾಮದ ಕೂಡಲಿ ಶೃಂಗೇರಿ ಮಹಾ ಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿದ್ದ ಅಂದಾಜು ₹50-60 ಲಕ್ಷ ಮೌಲ್ಯದ ಸುವರ್ಣ ಪಾದುಕೆ ಹಾಗೂ ಬೆಳ್ಳಿಯ ಶ್ರೀ ಮುದ್ರೆಗಳು ಕಾಣೆ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಶ್ರೀಕ್ಷೇತ್ರ ಕೂಡ್ಲಿ ಗ್ರಾಮದ ಕೂಡಲಿ ಶೃಂಗೇರಿ ಮಹಾ ಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿದ್ದ ಅಂದಾಜು ₹50-60 ಲಕ್ಷ ಮೌಲ್ಯದ ಸುವರ್ಣ ಪಾದುಕೆ ಹಾಗೂ ಬೆಳ್ಳಿಯ ಶ್ರೀ ಮುದ್ರೆಗಳು ಕಾಣೆ ಆಗಿರುವ ಬಗ್ಗೆ ವ್ಯವಸ್ಥಾಪಕ ರಮೇಶ್ ಹುಲುಮನಿ ಎಂಬುವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.ಕಳೆದ ಎಂಟು ತಿಂಗಳಿಂದ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮೀಜಿ ಅವರು ಹಿಂದಿನ ಚಾತುರ್ಮಾಸ್ಯ ಹಾಗೂ ನಂತರ ದಿನಗಳಲ್ಲಿ ಅನಾರೋಗ್ಯದ ನಿಮಿತ್ತವಾಗಿ ದಾವಣಗೆರೆ ಶಾಖಾ ಮಠ ಹಾಗೂ ಬೆಂಗಳೂರು ನಗರದಲ್ಲಿ ವಾಸ ಇದ್ದರು. ಈ ನಡುವೆ ಸ್ವಾಮಿಗಳ ಖಾಸಗಿ ಉಪಯೋಗದ ದಾಸ್ತಾನು ಕೊಠಡಿ ಬೀಗ ಒಡೆದಿರುವ ಬಗ್ಗೆ ತಿಳಿದು ಬಂದಿದೆ. ಮಾರನೇ ದಿನ ಮಠಕ್ಕೆ ತೆರಳಿ ಬೇರೆ ಬೀಗ ಹಾಕಿ ಖಾತ್ರಿ ಪಡಿಸಿಕೊಂಡು ಬರಲಾಗಿದೆ.
ಈ ಕಳೆದ ಎಂಟು ತಿಂಗಳಿಂದ ಶ್ರೀಗಳು ದಾವಣಗೆರೆಯ ಶಾಖಾ ಮಠದಲ್ಲಿ ಇದ್ದಿದ್ದರಿಂದ ಮಠದಲ್ಲಿನ ಯಾವುದೇ ಆಗು ಹೋಗುವ ವಿಚಾರ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ನಂತರ ಚಾತುರ್ಮಾಸ್ಯ ಕಾರ್ಯಕ್ರಮ ನಿಮಿತ್ತ ಜು.20ರಂದು ಶ್ರೀಗಳು ಮಠಕ್ಕೆ ಬಂದು ವಾಸ್ತವ್ಯ ಇರುತ್ತಾರೆ. ಈ ವೇಳೆ ಶ್ರೀ ಶಾರದಾಂಬೆ ದೇವಸ್ಥಾನದ ಹುಂಡಿ ತೆಗೆದು ಕಾಣಿಕೆ ಹಣ ಬ್ಯಾಂಕಿಗೆ ಪಾವತಿ ಮಾಡಲು ಸಮಯ ಮೀರಿದ್ದರಿಂದ ಸದರಿ ಹಣವನ್ನು ಬೀರುವಿನಲ್ಲಿ ಇಡುವಂತೆ ಹೇಳಿ ತಮ್ಮ ಬಳಿಯಿದ್ದ ಬೀರು ಬೀಗ ಕೊಟ್ಟರು. ಆದರೆ ಆ ಬೀಗದ ಕೈಯಿಂದ ಬೀರು ತೆರೆಯಲು ಆಗಲಿಲ್ಲ. ಮಠದ ಅರ್ಚಕರಾದ ದತ್ತಾತ್ರಿ ಶಾಸ್ತ್ರಿಯವರು ಈ ಬೀಗದ ಕೈನಿಂದ ಬೀರು ಬೀಗ ಬರುತ್ತದೆ ತೆಗೆಯಿರಿ ಎಂದು ತಮ್ಮ ಬಳಿ ಇದ್ದ ಬೀಗದ ಕೈಅನ್ನು ಕೊಟ್ಟಿದ್ದಾರೆ. ಆ ಬೀಗದ ಕೈಯಿಂದ ಬೀರು ಬೀಗ ತೆಗೆದು ಹಣ ಇಟ್ಟು ಬೀಗ ಹಾಕಿದೆವು. ಆಗ ಶ್ರೀಗಳಿಗೆ ಸಂಶಯ ಬಂದು ಉಳಿದೆರಡು ಬೀರುವಿನ ಬೀಗ ತೆಗೆಸಿ ನೋಡಿದಾಗ ಬೀರು ನಲ್ಲಿ ಇಟ್ಟಿದ್ದ ಪಾದುಕೆಗಳು ಹಾಗೂ ಬೆಳ್ಳಿಯ ಶ್ರೀ ಮುದ್ರೆಗಳು ಕಾಣೆ ಆಗಿರುತ್ತವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.