ಸಾರಾಂಶ
- ತಾವರಕೆರೆ ಮಹಿಳೆಗೆ ಹಲ್ಲೆ ಸಂಬಂಧ ಈವರೆಗೆ 8 ಆರೋಪಿಗಳ ಬಂಧನ - ಮಕ್ಕಳಿಗೆ ಮದರಸಾಗಳಿಗೆ ಕಳಿಸುವ ಬದಲು ಶಾಲೆಗಳಿಗೆ ಕಳಿಸಲು ಮನವರಿಕೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರನ್ನು ಅಮಾನುಷವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ವಯಂಪ್ರೇರಿತವಾಗಿ ಸುಮೊಟೋ ಕೇಸ್ ದಾಖಲು ಮಾಡಲಾಗಿದೆ ಎಂದು ಆಯೋಗದ ಸದಸ್ಯೆ ಡಾ.ಅರ್ಚನಾ ಮಜುಂದಾರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12ರಿಂದ 14 ಜನ ಮೌಲ್ವಿಗಳು, ವ್ಯಕ್ತಿಗಳು ವಿದ್ಯುತ್ ಕೇಬಲ್, ಕಲ್ಲು, ಪೈಪ್, ಕೋಲಿನಿಂದ ಮಹಿಳೆಯೊಬ್ಬರನ್ನು ಅಮಾನುಷವಾಗಿ ಹೊಡೆಯುತ್ತಿರುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಇದನ್ನು ಆಧರಿಸಿ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿತ್ತು ಎಂದರು.ಜಿಲ್ಲಾ ಪೊಲೀಸ್ ಅಧೀಕ್ಷಕರು ಉತ್ತಮವಾಗಿ ತನಿಖೆ ಮಾಡಿ, ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತಷ್ಟು ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ಆಯೋಗಕ್ಕೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆದಿದ್ದ ಘಟನಾ ಸ್ಥಳಕ್ಕೆ ತಾವು ಸೋಮವಾರ ಭೇಟಿ ನೀಡಿದ್ದ ವೇಳೆ ಸುಮಾರು 600-700 ಮಹಿಳೆಯರು ಅಲ್ಲಿ ಸೇರಿದ್ದರು. ಸರ್ಕಾರದ ಸೌಲಭ್ಯಗಳು, ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು, ಸ್ವಾವಲಂಬನೆ ಸಾಧಿಸುವಂತೆ ಮತ್ತು ಮಕ್ಕಳಿಗೆ ಮದರಸಾಗಳಿಗೆ ಕಳಿಸುವ ಬದಲು ಶಾಲೆಗಳಿಗೆ ಕಳಿಸಿ, ಉತ್ತಮ ಶಿಕ್ಷಣ ಕೊಡಿಸುವಂತೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಡಾ.ಅರ್ಚನಾ ತಿಳಿಸಿದರು.- - -
(ಬಾಕ್ಸ್) * ದೇಶದಲ್ಲಿ ಸಾವಿರ ತಾಯಂದಿರಲ್ಲಿ 7 ಬಾಲ ತಾಯಂದಿರು!- ಕರ್ನಾಟಕದಲ್ಲಿ ಪ್ರಕರಣಗಳ ಹೆಚ್ಚಳ ಆತಂಕಕಾರಿ: ಡಾ.ಅರ್ಚನಾ ಮಜುಂದಾರ್ ಕಳವಳ ಕನ್ನಡಪ್ರಭ ವಾರ್ತೆ ದಾವಣಗೆರೆ ದೇಶದಲ್ಲಿ ಪ್ರತಿ 1 ಸಾವಿರ ತಾಯಂದಿರಲ್ಲಿ 7 ಬಾಲ ತಾಯಂದಿರು ಪತ್ತೆಯಾದರೆ, ಕರ್ನಾಟಕದಲ್ಲಿ ಇದರ ಪ್ರಮಾಣ ಹೆಚ್ಚಾಗಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಡಾ.ಅರ್ಚನಾ ಮಜುಂದಾರ್ ಹೇಳಿದರು.
ನಗರದ ಜಿಲ್ಲಾಸ್ಪತ್ರೆ ಆವರಣದ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಸೋಮವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಾಲ ತಾಯಂದಿರ ಪ್ರಕರಣಗಳ ಪ್ರಮಾಣ ಹೆಚ್ಚಾಗಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.ಪೋಕ್ಸೋ ಪ್ರಕರಣ ಜೊತೆಗೆ ಬಾಲಕಿಯರು ಗರ್ಭಿಣಿ ಆಗುತ್ತಿರುವುದು ಈ ಭಾಗದಲ್ಲಿ ಹೆಚ್ಚಾಗಿ ವರದಿಯಾಗುತ್ತಿದೆ. ಹಾಗಾಗಿ, ಇಲ್ಲಿನ ವೈದ್ಯಾಧಿಕಾರಿಗಳು, ಸಿಬ್ಬಂದಿ, ಆಶಾ ಇನ್ನಿತರೆ ಕಾರ್ಯಕರ್ತರನ್ನು ಬಳಸಿಕೊಂಡು, ಬಾಲ್ಯವಿವಾಹ, ಹದಿಹರೆಯದಲ್ಲಿ ಗರ್ಭಿಣಿ ಆಗುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವ, ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಬಾಲ್ಯ ವಿವಾಹ ಮತ್ತು ಬಾಲ್ಯದಲ್ಲಿ ಗರ್ಭ ಧರಿಸುವುದರಿಂದ ಅಂತಹ ಮಗುವಿನ ಮೇಲಾಗುವ ದುಷ್ಪರಿಣಾಮ ಹಾಗೂ 18 ವರ್ಷ ಮೇಲ್ಪಟ್ಟು ಮದುವೆ ಆಗುವುದರಿಂದ ಏನು ಪ್ರಯೋಜನ ಎಂಬ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯಕ್ರಮದಲ್ಲಿ ಸೇರಿಸುವಂತೆ ಪ್ರಧಾನಿ ಮೋದಿ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಸಖಿ ಒನ್ ಸ್ಟಾಪ್ ಸೆಂಟರ್:ಸಾಮಾನ್ಯವಾಗಿ ಪುರುಷರಷ್ಟೇ ಮಹಿಳೆಯರಿಗೂ ಅಧಿಕಾರ, ಅವಕಾಶ ಇದ್ದರೂ ಮನೆಯಿಂದ ಹೊರಬಿದ್ದರೆ ನಮ್ಮನ್ನು ಸಾಕುವವರು ಯಾರು? ಎಲ್ಲಿ ವಾಸ ಮಾಡಬೇಕೆಂಬ ಕಾರಣದಿಂದ ಎಷ್ಟೇ ದೌರ್ಜನ್ಯ ನಡೆದರೂ ಮಹಿಳೆಯರು ಎಲ್ಲವನ್ನೂ ಸಹಿಸಿಕೊಂಡಿರುತ್ತಾರೆ. ಸಾಮಾನ್ಯವಾಗಿ ಹೀಗೆ ಎಲ್ಲ ಕಡೆಯಲ್ಲೂ ಮಹಿಳೆಯರ ಮೇಲೆ ಶೋಷಣೆ, ದೌರ್ಜನ್ಯ ನಡೆಯುತ್ತಿದೆ. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ಥರಿಗಾಗಿಯೇ ಸಖಿ ಒನ್ ಸ್ಟಾಪ್ ಸೆಂಟರ್ ಇದೆ ಎಂದು ವಿವರಿಸಿದರು.
ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ.ನಾಗೇಂದ್ರಪ್ಪ, ಸಖಿ ಒನ್ ಸ್ಟಾಪ್ ಕೇಂದ್ರದ ಸಿಬ್ಬಂದಿ ಇದ್ದರು.- - -
ಕೋಟ್ ನೊಂದ ಮಹಿಳೆಯರ ಆಪ್ತ ಸಮಾಲೋಚನೆ ನಡೆಸಿ, ಸ್ವಾವಲಂಬಿಯಾಗಿಸಿ, ಪುನರ್ವಸತಿ ಕಲ್ಪಿಸುವ ಕೆಲಸವನ್ನು ಸಖಿ ಒನ್ ಸ್ಟಾಪ್ ಸೆಂಟರ್ ಮಾಡುತ್ತಿದೆ. ಹಾಗಾಗಿ, ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ಥೆಯರು ಇಂತಹ ಕೇಂದ್ರಗಳ ಸದುಪಯೋಗ ಪಡೆಯಬೇಕು- ಡಾ.ಅರ್ಚನಾ ಮಜುಂದಾರ್, ಆಯೋಗ ಸದಸ್ಯೆ
- - --28ಕೆಡಿವಿಜಿ8:
ದಾವಣಗೆರೆ ಜಿಲ್ಲಾಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಡಾ.ಅರ್ಚನಾ ಮಜುಂದಾರ್ ಅವರು ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಭೇಟಿ ನೀಡಿ, ಅಧಿಕಾರಿಗಳು, ಸಿಬ್ಬಂದಿಯಿಂದ ಮಾಹಿತಿ ಪಡೆದರು.