ತಾಪಮಾನ ಏರಿಕೆ ತಗ್ಗಿಸಲು ಸರ್ಕಾರ ಅಗತ್ಯ ಕ್ರಮ: ಪರಿಸರವಾದಿ ಆರ್.ಪಿ.ವೆಂಕಟೇಶ್ ಮೂರ್ತಿ

| Published : Mar 26 2024, 01:00 AM IST

ತಾಪಮಾನ ಏರಿಕೆ ತಗ್ಗಿಸಲು ಸರ್ಕಾರ ಅಗತ್ಯ ಕ್ರಮ: ಪರಿಸರವಾದಿ ಆರ್.ಪಿ.ವೆಂಕಟೇಶ್ ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ ಭವನದಲ್ಲಿ ಹಸಿರು ಭೂಮಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ರಿಯ ಪತ್ರಕರ್ತ ಹಾಗೂ ಪರಿಸರವಾದಿ ಆರ್.ಪಿ.ವೆಂಕಟೇಶ್ ಮೂರ್ತಿ ಮಾತನಾಡಿದರು.

ಹಸಿರು ಭೂಮಿ ಪ್ರತಿಷ್ಠಾನದಿಂದ ಕಾರ್ಯಾಗಾರ । ಪರಿಸರ ಸಂರಕ್ಷಣೆಗಾಗಿ ಹಲವು ನಿರ್ಣಯ

ಕನ್ನಡಪ್ರಭ ವಾರ್ತೆ ಹಾಸನ

ಕೈಗಾರಿಕಾ ಕ್ರಾಂತಿಯ ನಂತರ ಜಾಗತಿಕ ತಾಪಮಾನ ೧.೫ ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ದು, ಮುಂದೆ ಹೆಚ್ಚಾಗದಂತೆ ತಡೆಯಬೇಕು. ೨೦೩೦ರ ವೇಳೆಗೆ ಶೇಕಡ ೫೦ ರಷ್ಟು ಹಸಿರು ಮನೆ ಅನಿಲಗಳನ್ನು ಕಡಿಮೆ ಮಾಡಿ, ೨೦೫೦ರ ವೇಳೆಗೆ ಶೂನ್ಯ ಪ್ರಮಾಣಕ್ಕೆ ಇಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಪರಿಸರವಾದಿ ಆರ್.ಪಿ.ವೆಂಕಟೇಶ್ ಮೂರ್ತಿ ಹೇಳಿದರು.

ನಗರದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ ಭವನದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಹಾಸನ ಹಾಗೂ ಪರಿಸರಕ್ಕಾಗಿ ನಾವು ಬಳಗ ಹಾಸನ ಆಶ್ರಯದಲ್ಲಿ ಜಿಲ್ಲೆಯ ಪರಿಸರ ಕಾರ್ಯಕರ್ತರ ಸಂಘಟನೆಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಇಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

೨೦೧೫ರಲ್ಲಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಜಗತ್ತಿನ ೧೯೫ ರಾಷ್ಟ್ರಗಳು ಒಟ್ಟು ಸೇರಿ ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಹೆಚ್ಚಳ ಕುರಿತು ಚರ್ಚಿಸಿ ತೆಗೆದುಕೊಂಡಿರುವ ನಿರ್ಣಯವನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಒತ್ತಾಯ ಮಾಡಲಾಗುವುದು. ೨೧೦೦ರ ವೇಳೆಗೆ ಭೂಮಿಯ ತಾಪಮಾನ ನಾಲ್ಕರಿಂದ ಎಂಟು ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಬಹುದು, ಆಗ ಭೂಮಿಯ ಮೇಲ್ಪದರ ವಣಗಿ ಸಸ್ಯ ರಾಶಿ ಒಣಗಿ ಹೋಗುತ್ತದೆ. ಕಾಡುಗಳು ಕಾಳ್ಗಿಚ್ಚಿನಿಂದ ಭಸ್ಮವಾಗುವ ಸಾಧ್ಯತೆ ಹೆಚ್ಚುತ್ತದೆ, ವ್ಯವಸಾಯ ಅಸಾಧ್ಯವಾಗುತ್ತದೆ, ಆಹಾರದ ಅಹಾಕಾರವಾಗಿ ಎಲ್ಲೆಡೆ ಭಯಾನಕ ಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ತುರ್ತು ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೃಷಿಯಲ್ಲಿ ಅತಿ ಹೆಚ್ಚು ರಾಸಾಯನಿಕಗಳ ಬಳಕೆಯನ್ನು ಸರ್ಕಾರ ನಿಯಂತ್ರಣ ಮಾಡಬೇಕು. ಕಳೆನಾಶಕವನ್ನು ಯಾವುದೇ ಕಾರಣಕ್ಕೂ ರೈತರು ಬಳಸದಂತೆ ಜಾಗೃತಿ ಮೂಡಿಸಬೇಕು. ರೈತರು ಮಣ್ಣಿನ ತೇವಾಂಶ ಆರದಂತೆ ತಮ್ಮ ಜಮೀನಿಗೆ ಹೊದಿಕೆ ನಿರ್ಮಾಣ ಮಾಡಿಕೊಳ್ಳಲು ಜಾಗೃತವಾಗುವಂತೆ ವಿನಂತಿ ಮಾಡಬೇಕು. ಆಧುನಿಕ ಯುಗದ ಆವಿಷ್ಕಾರವಾದ ಪ್ಲಾಸ್ಟಿಕ್‌ ಪರಿಸರಕ್ಕೆ ನಿರಂತರ ಹಾನಿ ಮಾಡುತ್ತಿದ್ದು, ಈಗಾಗಲೇ ಭೂಮಿ ಮತ್ತು ಜಲಮೂಲಗಳಿಗೆ ಸೇರಿ ಆತಂಕ ಉಂಟು ಮಾಡಿದೆ, ಸರ್ಕಾರ ಕೂಡಲೇ ಇದಕ್ಕೆ ನಿಯಂತ್ರಣ ಹೇರಿ ಪ್ಲಾಸ್ಟಿಕ್‌ಗೆ ಪರ್ಯಾಯವನ್ನು ಹುಡುಕಬೇಕು. ಒಂದು ಮರ ಕಡಿಯ ಬೇಕಾದರೂ ಸಾವಿರ ಬಾರಿ ಯೋಚಿಸಬೇಕು. ನದಿ ಪಾತ್ರಗಳಲ್ಲಿರುವ ಗ್ರಾಮದ ಜನರು ತಮ್ಮ ಗ್ರಾಮ ಹಂತದಲ್ಲಿ ನದಿ ಸಂರಕ್ಷಣಾ ಸಮಿತಿಗಳನ್ನು ರಚಿಸಿಕೊಂಡು ನದಿಯ ಸ್ವಚ್ಛತೆ ಹಾಗೂ ನದಿ ಪಾತ್ರವನ್ನು ಸಂರಕ್ಷಿಸಬೇಕು. ಅವೈಜ್ಞಾನಿಕ ಆಕೆಶಿಯ, ನೀಲಗಿರಿ ಮರಗಳನ್ನು ಹಂತ ಹಂತವಾಗಿ ತೆಗೆದು ಸ್ಥಳೀಯ ಪ್ರಭೇದದ ವೈವಿಧ್ಯಮಯ ಮರಗಳನ್ನು ಬೆಳೆಸಬೇಕು ಎಂದು ಹೇಳಿದರು.

ಕಾರ್ಯಗಾರದಲ್ಲಿ ಮುಖ್ಯವಾಗಿ ಯಗಚಿ ನದಿ ಹಾಗೂ ಹೇಮಾವತಿ ನದಿಗಳು ಪಟ್ಟಣಗಳ ಕಲುಷಿತ ನೀರಿನಿಂದ ಮಲಿನಗೊಳ್ಳುತ್ತಿರುವ ಬಗ್ಗೆ ಚರ್ಚಿಸಿ, ತಕ್ಷಣವೇ ಈ ಎರಡು ನದಿಗಳ ಮಾಲಿನ್ಯವನ್ನು ತಡೆದು ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ದೊರಕುವವರಿಗೆ ಹೋರಾಟ ಮಾಡಲು ನದಿ ಸಂರಕ್ಷಣಾ ಹೋರಾಟ ಸಮಿತಿ ನಿರ್ಣಯ ತೆಗೆದುಕೊಂಡಿತು. ಇದೇ ವೇಳೆ ಬೆಳಗಾವಿಯ ಕಣಕುಂಬಿಯಲ್ಲಿ ನಡೆದ ರಾಜ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಪುರುಷೋತ್ತಮ, ಹರಿಪ್ರಸಾದ್, ದಯಾನಂದ ಸ್ವಾಮಿ, ರಾಮಕೃಷ್ಣ, ಬಾಲರಾಜು, ಮಂಜೇಗೌಡ, ಶಾಂತರಾಜ್ ಅರಸು, ಮೋಹನ್ ಮಟ್ಟನವಿಲೆ ಅಭಿಪ್ರಾಯಗಳನ್ನು ಹಂಚಿಕೊಂಡರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಾವಯವ ಕೃಷಿಕ ಹರಿಹರಹಳ್ಳಿಯ ವಿ.ಪಿ. ಹೆಗಡೆ, ಹಾಗೂ ಪರಿಸರವಾದಿ ಚ.ನಾ. ಅಶೋಕ್, ಶಿವಶಂಕರಪ್ಪ, ಜಾವಗಲ್ ಶಿವಾನಂದ, ವೆಂಕಟೇಗೌಡ, ಅಪ್ಪಾಜಿಗೌಡ, ಅಹಮದ್ ಹಗರೆ, ಗಿರಿಜಾಂಬಿಕಾ,ಟಿ ಪಿ ಮಂಜುನಾಥ್, ಮುಂತಾದವರು ಉಪಸ್ಥಿತರಿದ್ದರು.

ಹಾಸನ ಜಿಲ್ಲೆಯ ಪರಿಸರ ಕಾರ್ಯಕರ್ತರ ಸಂಘಟನೆಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಪರಿಸರವಾದಿ ಆರ್.ಪಿ.ವೆಂಕಟೇಶ್ ಮೂರ್ತಿ ಉದ್ಘಾಟಿಸುತ್ತಿರುವುದು.