ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಖಾಸಗಿ ಕ್ಲಿನಿಕ್‌ಗಳ ವ್ಯಾಮೋಹ

| Published : Oct 19 2025, 01:00 AM IST

ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಖಾಸಗಿ ಕ್ಲಿನಿಕ್‌ಗಳ ವ್ಯಾಮೋಹ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗ ಹೃದಯಾಘಾತದ ಇಂಜೆಕ್ಷನ್ ನೀಡಲು ವೈದ್ಯರಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಹಳ್ಳ ಹಿಡಿಸಲು ಹಿರಿಯೂರು ಸರ್ಕಾರಿ ವೈದ್ಯರೇ ಪಣ ತೊಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಆರೋಪಿಸಿದರು.

ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗ ಶನಿವಾರ ಸರ್ಕಾರಿ ಆಸ್ಪತ್ರೆಯ ಹೃದಯ ಸಂಬಂಧಿ ಚಿಕಿತ್ಸೆ ಅವ್ಯವಸ್ಥೆ ವಿರೋಧಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿ ಮಾತನಾಡಿ ಅವರು, ಹೆಸರಿಗಷ್ಟೇ ಇದು ಸರ್ಕಾರಿ ಆಸ್ಪತ್ರೆ. ಇಲ್ಲಿನ ಚಿಕಿತ್ಸೆಗಳು ಬಡವರಿಗೆ ಸಿಗುವುದಿಲ್ಲ. ಇಲ್ಲಿ ಕೆಲಸ ನಿರ್ವಹಿಸುವ ವೈದ್ಯರು ಅವರವೇ ಕ್ಲಿನಿಕ್, ಆಸ್ಪತ್ರೆಗಳಲ್ಲಿ ಸದಾ ಸಿಗುತ್ತಾರೆ. 3 ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುವ ತಜ್ಞ ವೈದ್ಯರು ನಾಮಕಾವಸ್ಥೆಗೆ ಸರ್ಕಾರಿ ಆಸ್ಪತ್ರೆಗೆ ಬಂದು ಹೆಚ್ಚಿನ ಸಮಯವನ್ನು ತಮ್ಮ ಖಾಸಗಿ ಕ್ಲಿನಿಕ್ ನಲ್ಲಿ ಕಳೆಯುತ್ತಾರೆ. ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯಾಘಾತದಂತಹ ತುರ್ತು ಸನ್ನಿವೇಶಗಳಲ್ಲಿ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಹೆಸರಿನಲ್ಲಿ ಸುಮಾರು 40 ರಿಂದ 50 ಸಾವಿರ ಬೆಲೆಬಾಳುವ ಟೆನೆಕ್ಟ್ ಪ್ಲಸ್ ಎನ್ನುವ ಇಂಜೆಕ್ಷನ್ ಕೊಡಬೇಕೆಂಬ ಸರ್ಕಾರದ ಯೋಜನೆ ಇದೆ.

ಈ ಇಂಜೆಕ್ಷನ್‌ನಿಂದ ಹೆಪ್ಪುಗಟ್ಟಿರುವ ರಕ್ತ ತೆಳುವಾಗಿ ರೋಗಿ ಹೆಚ್ಚಿನ ಚಿಕಿತ್ಸೆ ಪಡೆಯಲು ದೂರದೂರಿಗೆ ಪ್ರಯಾಣ ಮಾಡಲು ಅನುಕೂಲವಾಗಿ ಸಾವಿನಿಂದ ಪಾರಾಗುತ್ತಾನೆ. ಆದರೆ ಹಿರಿಯೂರು ತಾಲೂಕಿನಲ್ಲಿ ಇದನ್ನು ಹೃದಯಾಘಾತದಂತಹ ಸನ್ನಿವೇಶಗಳಲ್ಲಿ ಬಳಸಬೇಕೆಂದರೆ ಇದಕ್ಕೆ ನುರಿತ ವೈದ್ಯರು, ಸಿಬ್ಬಂದಿ ಹಾಗೂ ಐಸಿಯು ಸಲಕರಣೆಗಳು ಲಭ್ಯವಿಲ್ಲ ಎಂದು ಆಡಳಿತ ವೈದ್ಯಾಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ತಾಲೂಕು ಆಸ್ಪತ್ರೆಯಲ್ಲಿ ಐಸಿಯು ಇದೆ. 14 ರಿಂದ 15 ಜನ ವೈದ್ಯರಿದ್ದಾರೆ. ಸ್ಟಾಪ್ ನರ್ಸ್ ಇತರೆ ಸಿಬ್ಬಂದಿ ವರ್ಗದವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಹಾಗೂ ಜನನಿ ಸುರಕ್ಷಾ ಯೋಜನೆಯಲ್ಲಿ ಹಣ ಲಭ್ಯವಿದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ವೈದ್ಯರು ತಯಾರಿಲ್ಲ. ತಮ್ಮ ಖಾಸಗಿ ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆ. ಸರ್ಕಾರ ಇಂತಹ ಜೀವ ಉಳಿಸುವ ಇಂಜೆಕ್ಷನ್ ಒದಗಿಸಿ ಅದನ್ನು ಬಳಸುವ ಸೌಲಭ್ಯ ಒದಗಿಸದೇ ಇರುವುದು ದುರಂತ. ಇದೇ ಇಂಜೆಕ್ಷನ್‌ ಅನ್ನು ಹಿರಿಯೂರಿನ ಖಾಸಗಿ ವೈದ್ಯರ ಬಳಿ 50 ಸಾವಿರಕ್ಕೂ ಹೆಚ್ಚು ಹಣ ಕೊಟ್ಟು ಜೀವ ಉಳಿಸಿಕೊಳ್ಳಬೇಕಾದ ಸನ್ನಿವೇಶ ಇದೆ. ಅಲ್ಲದೆ ವೈದ್ಯರ ಸುರಕ್ಷತಾ ಕಾಯ್ದೆಯನ್ನು ಗುರಾಣಿಯನ್ನಾಗಿ ಬಳಸಿಕೊಂಡು ಪ್ರಶ್ನೆ ಮಾಡುವವರನ್ನು ಹತ್ತಿಕ್ಕುವ ಕೆಲಸವನ್ನು ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆ ಎನ್ನುವುದು ರೋಗಿಗಳನ್ನು ಸಂಪರ್ಕಿಸಿ ತಮ್ಮ ಖಾಸಗಿ ಕ್ಲಿನಿಕ್ಕಿಗೆ ವರ್ಗಾವಣೆ ಮಾಡಿಕೊಳ್ಳುವ ಮಧ್ಯವರ್ತಿ ಕೇಂದ್ರವಾಗಿದೆ ಎಂದರು.

ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಅಧ್ಯಕ್ಷ ಆಲೂರು ಚೇತನ್ ಮಾತನಾಡಿ, ಸರ್ಕಾರಿ ವೈದ್ಯರು ಸಾರ್ವಜನಿಕರ ಆರೋಗ್ಯ ಕಾಪಾಡಬೇಕು. ಅದು ಬಿಟ್ಟು ಖಾಸಗಿ ಕ್ಲಿನಿಕ್‌ನಲ್ಲಿ ಹಣ ಮಾಡುವ ಹಾಗಿದ್ದರೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಡಬೇಕು ಎಂದರು.

ಈ ವೇಳೆ ನಿವೃತ್ತ ಪೌರ ಸೇವಾ ನೌಕರರ ಸಂಘದ ರಾಜ್ಯಾಧ್ಯಕ್ಷ ನಾರಾಯಣಚಾರ್, ಡಿಸಿಸಿ ನಿರ್ದೇಶಕ ಮಂಜುನಾಥ್ ಮಾಳಿಗೆ, ಕಾತ್ರಿಕೇನಹಳ್ಳಿ ರಂಗನಾಥ್, ಕೆಜಿ ಎಚ್.ಗೌಡ, ಕೆಕೆ.ಹಟ್ಟಿ ಜಯಪ್ರಕಾಶ್, ಚಮನ್ ಷರೀಫ್ ಮುಂತಾದವರು ಹಾಜರಿದ್ದರು.