ಸಾರಾಂಶ
ಬೆಂಗಳೂರು : ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟುವ ನದಿಗಳಿಂದ ಕುಡಿಯುವ ನೀರು ಪಡೆಯುತ್ತಿರುವ ನಗರ ಹಾಗೂ ಪಟ್ಟಣಗಳಲ್ಲಿ ಹಸಿರು ಸೆಸ್ ವಿಧಿಸಲು ಅರಣ್ಯ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಲು ಮುಂದಾಗಿದೆ.
ಪಶ್ಚಿಮಘಟ್ಟ ಅರಣ್ಯ ಪ್ರದೇಶದಿಂದಲೇ ತುಂಗಾ-ಭದ್ರಾ, ಕಾವೇರಿ, ಕೃಷ್ಣಾ, ಮಲಪ್ರಭ, ಘಟಪ್ರಭ, ಹೇಮಾವತಿ ಸೇರಿದಂತೆ 15ಕ್ಕೂ ಹೆಚ್ಚಿನ ನದಿಗಳು ಉಗಮವಾಗುತ್ತವೆ. ಈ ನದಿಗಳ ನೀರನ್ನು ಬೆಂಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು, ಬೆಳಗಾವಿ, ಬಳ್ಳಾರಿ ಸೇರಿದಂತೆ ಬಹುತೇಕ ಜಿಲ್ಲೆಗಳ ನಗರ ಮತ್ತು ಪಟ್ಟಣಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಪೂರೈಸಲಾಗುತ್ತಿದೆ.
ಈ ಜಿಲ್ಲೆಗಳ ನಗರ ಮತ್ತು ಪಟ್ಟಣಗಳಲ್ಲಿ ಸ್ಥಳೀಯ ಜಲಮಂಡಳಿಯಿಂದ ನೀರಿನ ಸಂಪರ್ಕ ಪಡೆದವರಿಗೆ ನೀರಿನ ಬಿಲ್‌ನಲ್ಲಿ ಹಸಿರು ಸೆಸ್ ವಿಧಿಸುವ ಕುರಿತಂತೆ ಪ್ರಸ್ತಾವನೆ ಸಿದ್ಧಪಡಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ. ಅದರಂತೆ ಕಾರ್ಯಪ್ರವೃತ್ತರಾಗಿರುವ ಇಲಾಖೆ ಅಧಿಕಾರಿಗಳು 7 ದಿನಗಳಲ್ಲಿ ಪ್ರಸ್ತಾವನೆ ಸಿದ್ಧಪಡಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸಲ್ಲಿಸಲಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
2-3 ರು. ವಿಧಿಸುವ ಸಾಧ್ಯತೆ:
ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹಸಿರು ಸೆಸ್ ವಿಧಿಸುವ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆ. ಹಸಿರು ಸೆಸ್ ರೂಪದಲ್ಲಿ ಎಷ್ಟು ಮೊತ್ತವನ್ನು ವಿಧಿಸಬಹುದು ಎಂಬುದೂ ಸೇರಿದಂತೆ ಇನ್ನಿತರ ವಿಚಾರಗಳ ಕುರಿತಂತೆ ಚರ್ಚಿಸಲಾಗುತ್ತಿದೆ. ಸದ್ಯದ ಮಾಹಿತಿಯಂತೆ, ಪ್ರತಿ ನೀರಿನ ಬಿಲ್ ಮೇಲೆ 2ರಿಂದ 3 ರು. ಹಸಿರು ಸೆಸ್ ವಿಧಿಸುವ ಸಾಧ್ಯತೆಗಳಿವೆ. ಅಷ್ಟು ಮೊತ್ತದ ಹಸಿರು ಸೆಸ್ ಸಂಗ್ರಹಿಸಿದರೆ ವಾರ್ಷಿಕ 60ರಿಂದ 80 ಕೋಟಿ ರು.ವರೆಗೆ ಹಸಿರು ಸೆಸ್ ಸಂಗ್ರಹಿಸಬಹುದು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಂದಾಜಾಗಿದೆ.
ಹೀಗೆ ಸಂಗ್ರಹವಾಗುವ ಹಸಿರು ಸೆಸ್ ಮೊತ್ತವನ್ನು ಕಾರ್ಪಸ್ ಫಂಡ್ ರೂಪದಲ್ಲಿ ಸಂಗ್ರಹಿಸಿಟ್ಟು, ಅರಣ್ಯ ಅಭಿವೃದ್ಧಿ ಸೇರಿದಂತೆ ಮತ್ತಿತರ ಕಾರ್ಯಕ್ಕೆ ಬಳಸುವುದು ಅರಣ್ಯ ಇಲಾಖೆ ಉದ್ದೇಶವಾಗಿದೆ. ಪ್ರಮುಖವಾಗಿ ಅರಣ್ಯ ಅಭಿವೃದ್ಧಿ, ವೃಕ್ಷ ಸಂವರ್ಧನೆ, ಅರಣ್ಯದಂಚಿನ ರೈತರಿಂದ ಭೂಮಿ ಖರೀದಿ, ವನ್ಯಜೀವಿ-ಮಾನವ ಸಂಘರ್ಷ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆಯಂತಹ ಕಾರ್ಯಗಳಿಗೆ ಬಳಸಬಹುದಾಗಿದೆ. ಅದರ ಜತೆಗೆ ಪಶ್ಚಿಮಘಟ್ಟದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನೂ ಹೊಂದಲಾಗಿದೆ.
ಪಶ್ಚಿಮಘಟ್ಟ ಅರಣ್ಯ ಪ್ರದೇಶದ ನದಿಗಳ ನೀರು ಬಳಸುವ ಬಳಕೆದಾರರಿಂದ ಹಸಿರು ಸೆಸ್ ರೂಪದಲ್ಲಿ 2 ರಿಂದ 3 ರು. ಪಡೆಯುವ ಉದ್ದೇಶವಿದೆ. ಆ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆ ಮತ್ತು ಪಶ್ಚಿಮಘಟ್ಟದ ಮಹತ್ವದ ಅರಿವು ಮೂಡಿಸಬಹುದಾಗಿದೆ. ಹಸಿರು ಸೆಸ್ ರೂಪದಲ್ಲಿ ಸಂಗ್ರಹವಾಗುವ ಹಣವನ್ನು ಅರಣ್ಯ ಅಭಿವೃದ್ಧಿ ಸೇರಿದಂತೆ ಮತ್ತಿತರ ಕಾರ್ಯಕ್ಕೆ ಬಳಸಲಾಗುತ್ತದೆ.
- ಈಶ್ವರ್ ಖಂಡ್ರೆ, ಅರಣ್ಯ ಸಚಿವ.