ವೈದ್ಯರ ಪ್ರೀತಿ ಮಾತಿನಿಂದ ಅರ್ಧ ಕಾಯಿಲೆ ಗುಣಮುಖ: ಶಾಸಕ ತಮ್ಮಯ್ಯ

| Published : Oct 14 2025, 01:00 AM IST

ವೈದ್ಯರ ಪ್ರೀತಿ ಮಾತಿನಿಂದ ಅರ್ಧ ಕಾಯಿಲೆ ಗುಣಮುಖ: ಶಾಸಕ ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ವೈದ್ಯರ ಪ್ರೀತಿಯ ಮಾತಿಗೆ ರೋಗಿಯ ಅರ್ಧ ಕಾಯಿಲೆ ಗುಣಮುಖವಾಗವ ಶಕ್ತಿಯಿದೆ. ಈ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ನಲ್ಲಿ ವೈದ್ಯ ಸಿಬ್ಬಂದಿಯಿಂದ ಸೇವೆ ದೊರೆಯುವಂತಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಉಪ್ಪಳ್ಳಿ ಬಡಾವಣೆಯಲ್ಲಿ ನಮ್ಮ ಕ್ಲಿನಿಕ್‌ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವೈದ್ಯರ ಪ್ರೀತಿಯ ಮಾತಿಗೆ ರೋಗಿಯ ಅರ್ಧ ಕಾಯಿಲೆ ಗುಣಮುಖವಾಗವ ಶಕ್ತಿಯಿದೆ. ಈ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ನಲ್ಲಿ ವೈದ್ಯ ಸಿಬ್ಬಂದಿಯಿಂದ ಸೇವೆ ದೊರೆಯುವಂತಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ನಮ್ಮ ಕ್ಲಿನಿಕ್‌ನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಜನರ ಬದುಕು ಮತ್ತು ಕಷ್ಟ ನಿವಾರಿಸಲು ಮೊದಲ ಆದ್ಯತೆ ನೀಡಿ ನಂತರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ ವೈದ್ಯರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ರೋಗಿ ಚಿಕಿತ್ಸೆ ಬಯಸಿ ಬಂದರೆ ನಗು ನಗುತ ಮಾತನಾಡಿಸಿ ಸೂಕ್ತ ಚಿಕಿತ್ಸೆ ಕೊಡಬೇಕು. ವೈದ್ಯರ ಪ್ರೀತಿ ಮಾತಿಗೆ ರೋಗಿಯ ಕಾಯಿಲೆ ಅರ್ಧ ಗುಣಮುಖವಾಗುವ ಶಕ್ತಿಯಿದೆ. ಜನರ ಆಶೋತ್ತರಗಳಿಗೆ ತಕ್ಕಂತೆ ನಡೆದುಕೊಂಡು ಇಲ್ಲಿಂದ ವರ್ಗಾವಣೆ ಯಾಗಿ ಹೋದರೂ ಜನ ಮತ್ತೆ ಮತ್ತೆ ವೈದ್ಯರನ್ನು ನೆನಪಿಸಿಕೊಳ್ಳುವಂತೆ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ.ಅಶ್ವತ್‌ಬಾಬು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 12 ನಮ್ಮ ಕ್ಲಿನಿಕ್‌ಗಳಿವೆ. ಅವುಗಳಲ್ಲಿ 4 ನಮ್ಮ ಚಿಕ್ಕಮಗಳೂರು ನಗರದಲ್ಲೇ ಮಂಜೂರಾಗಿವೆ. ಒಂದು ನರಿಗುಡ್ಡನಹಳ್ಳಿ ವೃತ್ತ, ಕೆಂಪನಹಳ್ಳಿ, 3ನೆಯದು ಉಪ್ಪಳ್ಳಿಯಲ್ಲಿ ಪ್ರಾರಂಭವಾಗುತ್ತಿದೆ. ಇನ್ನೊಂದು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದೇವೆ. ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ 4 ನೇ ನಮ್ಮ ಕ್ಲಿನಿಕ್‌ನ್ನು ತೆರೆಯಲಿದ್ದೇವೆ ಎಂದು ಹೇಳಿದರು.ನಗರದಲ್ಲಿ 2 ನಗರ ಆರೋಗ್ಯ ಕೇಂದ್ರ ಮತ್ತು 4 ನಮ್ಮ ಕ್ಲಿನಿಕ್‌ಗಳಿವೆ. ಸಾರ್ವಜನಿಕರಿಗೆ ತಮ್ಮ ಮನೆ ಬಳಿಯಲ್ಲೇ ಚಿಕಿತ್ಸೆ ಸಿಗಬೇಕು. ಶೀತ,ಕೆಮ್ಮು, ಜ್ವರ ಮತ್ತಿತರೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ದೊಡ್ಡಾಸ್ಪತ್ರೆಗೆ ಹೋಗುವುದನ್ನು ತಪ್ಪಿಸಲು ನಮ್ಮ ಸರಕಾರ ಈ ಯೋಜನೆ ರೂಪಿಸಿದೆ. ಬೆಳಗ್ಗೆ 9.30 ರಿಂದ 4.30 ರವರೆಗೆ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತವೆ. ವೈದ್ಯ ಸಿಬ್ಬಂದಿ ಇರುತ್ತಾರೆ. ಪ್ರತಿ ದಿನವೂ ಕ್ಲಿನಿಕ್‌ ತೆರೆದಿರುತ್ತದೆ. ಇಲ್ಲಿ ಎಲ್ಲ ತರಹದ ಬೇಸಿಕ್ ಪ್ರಯೋಗ ಉಚಿತವಾಗಿ ದೊರೆ ಯುತ್ತದೆ. ಬಿಪಿ, ಶುಗರ್, ರಕ್ತ ಪರೀಕ್ಷೆ ಉಚಿತವಾಗಿ ಮಾಡಲಾಗುವುದು. ಅಗತ್ಯ ವಿದ್ದಲ್ಲಿ ಉನ್ನತ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಾಗುವುದು. ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ನಮ್ಮ ಕ್ಲಿನಿಕ್‌ ಉದ್ಘಾಟನೆ ಸಂತೋಷದ ವಿಚಾರ, ಈ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರೇ ಇದ್ದು ಆಸ್ಪತ್ರೆಯ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸಿಡಿಎ ಅಧ್ಯಕ್ಷ ನಯಾಜ್‌ ಅಹಮದ್, ಸ್ಥಳೀಯ ನಗರಸಭೆ ಸದಸ್ಯರು, ವೈದ್ಯ, ಸಿಬ್ಬಂದಿ ಉಪಸ್ಥಿತರಿದ್ದರು. 13 ಕೆಸಿಕೆಎಂ 3ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ ಸೋಮವಾರ ನಮ್ಮ ಕ್ಲಿನಿಕ್‌ ಅನ್ನು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್‌, ಡಾ.ಅಶ್ವತ್‌ಬಾಬು ಇದ್ದರು.