ಹರ್ ಘರ ತಿರಂಗಾ, ಹಳಿಯಾಳದಲ್ಲಿ ವಾಕ್‌ಥಾನ್‌ಗೆ ಚಾಲನೆ

| Published : Aug 15 2024, 01:54 AM IST

ಸಾರಾಂಶ

ಹಳಿಯಾಳ ತಾಲೂಕಾಡಳಿತ ಸೌಧದ ಮೈದಾನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಹರ ಘರ ತಿರಂಗಾ ಅಭಿಯಾನದ ನಿಮಿತ್ತ ತಾಲೂಕಾಡಳಿತ ಆಯೋಜಿಸಿದ ವಾಕ್ ಥಾನ್-ಜಾಗೃತಿ ನಡಿಗೆ ಜಾಥಾಕ್ಕೆ ಶಾಸಕ ಆರ್‌.ವಿ. ದೇಶಪಾಂಡೆ ಚಾಲನೆ ನೀಡಿದರು.

ಹಳಿಯಾಳ: ದೇಶದ ಬಗ್ಗೆ ಅಭಿಮಾನ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ದೇಶಪ್ರೇಮ, ರಾಷ್ಟ್ರಪ್ರೇಮ ಇದು ಕೇವಲ ರಾಷ್ಟ್ರೀಯ ಹಬ್ಬಗಳಿಗೆ ಸೀಮಿತವಾಗಿರದೇ ಬದುಕಿನುದ್ದಕ್ಕೂ ನಮ್ಮಲ್ಲಿರಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಬುಧವಾರ ಬೆಳಗ್ಗೆ ತಾಲೂಕಾಡಳಿತ ಸೌಧದ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಹರ ಘರ ತಿರಂಗಾ ಅಭಿಯಾನದ ನಿಮಿತ್ತ ತಾಲೂಕಾಡಳಿತ ಆಯೋಜಿಸಿದ ವಾಕ್ ಥಾನ್-ಜಾಗೃತಿ ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮಲ್ಲಿ ಸ್ವಾತಂತ್ರ್ಯದ ಮಹತ್ವ, ಅದರ ಪಾವಿತ್ರ್ಯತೆ ಮೌಲ್ಯದ ಅರಿವಿನ ಕೊರತೆಯನ್ನು ನಾವು ಕಾಣುತ್ತಿದ್ದೇವೆ. ಸ್ವಾತಂತ್ರ್ಯ ಪಡೆಯಲು ನಮ್ಮ ಹೋರಾಟಗಾರರು ನಡೆಸಿದ ಹೋರಾಟ, ಬಲಿದಾನ, ಪ್ರಾಣತ್ಯಾಗಗಳನ್ನು ನಾವು ಸರಿಯಾಗಿ ಅವಲೋಕಿಸಿ ಅರಿಯಬೇಕು. ಸ್ವಾತಂತ್ರ್ಯಕ್ಕಾಗಿ ನಮ್ಮ ಹುತಾತ್ಮರು ಮಾಡಿದ ತ್ಯಾಗ ಫಲಪ್ರದವಾಗಬೇಕಾದರೆ ದೇಶವನ್ನು ಸಮೃದ್ಧಿಯತ್ತ, ಅಭಿವೃದ್ಧಿಯತ್ತ ಸಾಗಿಸಲು ಸರ್ವರೂ ಕೈಜೋಡಿಸಬೇಕು ಎಂದರು.

ತಾಪಂ ಇಒ ಪರಶುರಾಮ ಘಸ್ತೆ ಅವರು ಹರ್‌ ಘರ್ ತಿರಂಗಾ ಅಭಿಯಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ಆನಂತರ ವಾಕ್‌ಥಾನ್ ಪಟ್ಟಣದ ಮುಖ್ಯಬೀದಿಗಳಲ್ಲಿ ಸಾಗಿತು.

ತಹಸೀಲ್ದಾರ್‌ ಪ್ರವೀಣ ಹುಚ್ಚಣ್ಣನವರ, ಬಿಇಒ ಪ್ರಮೋದ ಮಹಾಲೆ, ಕೃಷಿ ಸಹಾಯಕ ನಿರ್ದೇಶಕ ಪಿಐ ಮಾನೆ, ಪಿಎಸ್ಐ ವಿನೋದ ರೆಡ್ಡಿ, ಸಿಡಿಪಿಒ ಡಾ. ಲಕ್ಷ್ಮೀದೇವಿ, ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಭಟ್ಕಳದಲ್ಲಿ ಹರ್ ಘರ್ ತಿರಂಗಾ ಬೈಕ್ ರ‍್ಯಾಲಿ:

ಭಟ್ಕಳ ತಾಲೂಕು ಆಡಳಿತದ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನೌಕರರ ಬೈಕ್ ರ‍್ಯಾಲಿ ನಡೆಯಿತು.ತಾಲೂಕು ಆಡಳಿತ ಸೌಧದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ತಹಸೀಲ್ದಾರ್ ನಾಗರಾಜ ನಾಯ್ಕಡ ಅವರು, ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ವಿವಿಧ ಇಲಾಖೆ ನೌಕರರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಬೈಕ್ ರ‍್ಯಾಲಿ ನಡೆಸಿ ಜಾಗೃತಿ ಮೂಡಿಸಲಾಗುತ್ತದೆ. ಆ. 14ರಂದು ಹರ್ ಘರ್ ತಿರಂಗಾದ ಅಭಿಯಾನದ ಅಂಗವಾಗಿ ಜಾಥಾ ಏರ್ಪಡಿಸಲಾಗಿದೆ. ತಾಲೂಕಿನಲ್ಲಿ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.ಬೈಕ್ ರ‍್ಯಾಲಿ ತಾಲೂಕು ಆಡಳಿತ ಸೌಧದಿಂದ ಹೊರಟು ಪಟ್ಟಣದ ವಿವಿಧ ರಸ್ತೆಯಲ್ಲಿ ಸಂಚರಿಸಿ ಸಂಶುದ್ದೀನ್ ವೃತ್ತದ ಮೂಲಕ ತಾಲೂಕು ಆಡಳಿತ ಸೌಧಕ್ಕೆ ವಾಪಸ್ ಆಗಮಿಸಿತು. ಕಂದಾಯ, ತಾಪಂ., ಪುರಸಭೆ, ಜಾಲಿ ಪಪಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.