ಸಾರಾಂಶ
ಪಿಎಸ್ಸೈ ಆಗಿದ್ದ ಪರಶುರಾಮ್ ಶಂಕಾಸ್ಪದ ಸಾವಿನ ಪ್ರಕರಣ ಹೊಸ ತಿರುವು ಪಡೆಯುತ್ತಿದೆ. ಘಟನೆಯ ದಿನದಂದು ಅವರ ಮೊಬೈಲ್‌ಗಳ ಜೊತೆಯಿದ್ದ ಎರಡು ಮಾತ್ರೆಗಳು ಯಾವವು ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಯಾದಗಿರಿ : ಪಿಎಸ್ಸೈ ಆಗಿದ್ದ ಪರಶುರಾಮ್ ಶಂಕಾಸ್ಪದ ಸಾವಿನ ಪ್ರಕರಣ ಹೊಸ ತಿರುವು ಪಡೆಯುತ್ತಿದೆ. ಘಟನೆಯ ದಿನದಂದು ಅವರ ಮೊಬೈಲ್‌ಗಳ ಜೊತೆಯಿದ್ದ ಎರಡು ಮಾತ್ರೆಗಳು ಯಾವವು ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಪರಶುರಾಮ್ ಮೃತಪಟ್ಟ ದಿನದಂದು ರಾತ್ರಿ ಅವರು ಬಳಸುತ್ತಿದ್ದ ಮೊಬೈಲ್‌ಗಳನ್ನು ಸಂಬಂಧಿಕರಿಗೆ ನೀಡಲಾಗಿತ್ತು. ಈ ಮೊಬೈಲ್‌ಗಳ ಜೊತೆ ಕರ್ಚೀಫಿನಲ್ಲಿ ಕಟ್ಟಿಡಲಾಗಿದ್ದ ಎರಡು ಮಾತ್ರೆಗಳ ಪೈಕಿ ಉಳಿದ ಒಂದನ್ನು ಹಾಗೆಯೇ ಕಟ್ಟಿ ನೀಡಲಾಗಿತ್ತು. ಇದು ಯಾವ ಮಾತ್ರೆ ? ಯಾತಕ್ಕಾಗಿ ಇದನ್ನು ಉಪಯೋಗಿಸಲಾಗುತ್ತದೆ? ಎರಡು ಮಾತ್ರೆಗಳನ್ನು ಒಂದನ್ನು ಅವರು ಸೇವಿಸಿದ್ದರೆ? ಎಂಬ ಅನೇಕ ಪ್ರಶ್ನೆಗಳು ಕೇಳಿಬರುತ್ತಿವೆ.
ಅವಧಿಪೂರ್ವ ವರ್ಗಾವಣೆಯಿಂದಾಗಿ ಖಿನ್ನತೆಗೊಳಗಾಗಿದ್ದರೆನ್ನಲಾದ ಪರಶುರಾಮ್ ಮನೆಯಲ್ಲಿ ಮಲಗಿದ್ದಾಗ ಮೃತಪಟ್ಟಿದ್ದರು. ಈ ಸಾವು ಅನುಮಾನಾಸ್ಪದ ಎಂದು ಪತ್ನಿ, ತಂದೆ ಹಾಗೂ ಕುಟುಂಬಸ್ಥರು ಸೇರಿದಂತೆ ಸಂಘಟನೆಗಳ ಆರೋಪಿಸಿದ್ದವು.
ವರ್ಗಾವಣೆ ತಡೆಗೆ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಪುತ್ರ ಸನ್ನೀಗೌಡ 30 ಲಕ್ಷ ರು.ಗಳ ಲಂಚ ಕೇಳಿದ್ದ ಒತ್ತಡದಿಂದಾಗಿ ಅವರು ಮೃತಪಟ್ಟಿದ್ದಾರೆ ಎಂಬ ಆರೋಪಗಳು ಹಾಗೂ ಪ್ರತಿಭಟನೆಗಳ ನಂತರ ವಿರುದ್ಧ ದೂರು ದಾಖಲಿಸಲಾಗಿತ್ತು. ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.
ಆ.4 ರಿಂದ ತನಿಖೆಗಿಳಿದಿರುವ ಸಿಐಡಿ ಅಧಿಕಾರಿಗಳ ತಂಡ ಕಳೆದ ಈಗಾಗಲೇ ಸ್ಥಳ ಮಹಜರು ನಡೆಸಿದೆ. ಪರಶುರಾಮ್ ಮನೆಯಲ್ಲಿ 7.33 ಲಕ್ಷ ರು.ಗಳ ನಗದು ಹಣ, ಕೆಂಪು ಡೈರಿ, ಶಾಸಕರ ಹೆಸರಿನಲ್ಲಿದ್ದ ಖಾಲಿ ಲೆಟರ್ ಹೆಡ್ ಸೇರಿದಂತೆ ಅಲ್ಲಿನ ಕೆಲವು ವಸ್ತುಗಳ ವಶಪಡಿಸಿಕೊಂಡಿದೆ. ಅವುಗಳಲ್ಲಿ ಈ ಮಾತ್ರೆ ಇದೆಯೇ ಅನ್ನೋದು ವಿಶೇಷ.
- ಶಾಸಕರ ಆಸೆ ಆಕಾಂಕ್ಷೆಗಳ ತೀರಿಸಲಿಕ್ಕಾಗದು..!
ಯಾದಗಿರಿಯಲ್ಲಿ ನಡೆದ ಪ್ರಗತಿಪರ ಸಂಘಟನೆಗಳ ಪ್ರತಿಭಟನೆಯಲ್ಲಿ ಪರಶುರಾಮ್ ಸಹೋದರ ಹನುಮಂತ ಶಾಸಕರ ವಿರುದ್ಧ ಗಂಭೀರವಾಗಿ ಆರೋಪಿಸಿದರು. ವರ್ಷಕ್ಕೂ ಮೊದಲೇ ವರ್ಗಾವಣೆಯ ಯಾಕಾಯ್ತು ಎಂದು ತಮ್ಮ (ಪರಶುರಾಮ್)ನನ್ನು ಕೇಳಿದ್ದಾಗ, ಶಾಸಕರ ಆಸೆ- ಆಕಾಂಕ್ಷೆಗಳನ್ನು ನನ್ನಿಂದ ಪೂರೈಸಲು ಆಗಲಿಲ್ಲ ಎಂದು ಬೇಜಾರು ವ್ಯಕ್ತಪಡಿಸಿದ್ದರು ಎಂದು ಪ್ರತಿಭಟನೆಯ ವೇಳೆ ಅಂದು ತಮ್ಮ ಜೊತೆಗಾಡಿದ್ದ ಮಾತುಗಳನ್ನು ಪ್ರತಿಭಟನೆಯ ವೇಳೆ ತಿಳಿಸಿದರು.
ತನಿಖೆ ಸಿಬಿಐಗೆ ವಹಿಸಿ : ಛಲುವಾದಿ ನಾರಾಯಣಸ್ವಾಮಿ
ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ಪರಿಷತ್ ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣಸ್ವಾಮಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಆ.14 ರಂದು ಪತ್ರ ಬರೆದಿದ್ದಾರೆ. ಪರಶುರಾಮ್ ಅವರ ಸಾವಿನಲ್ಲಿ ಶಂಕೆ ವ್ಯಕ್ತವಾಗಿದೆ. ಸಿಐಡಿ ತನಿಖೆ ನಡೆಸುತ್ತಿದೆಯಾದರೂ, ಆರೋಪಿ ಶಾಸಕ ಚೆನ್ನಾರೆಡ್ಡಿ ಅವರು ಸಿಎಂ ಹಾಗೂ ಗೃಹಸಚಿವರನ್ನು ಭೇಟಿ ಮಾಡುತ್ತಿರುವುದು ತನಿಖೆಯ ಮೇಲೆ ಅನುಮಾನ ಮೂಡಿಸಿದೆ. ಈ ಕಾರಣಕ್ಕೆ, ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕ ತನಿಖೆಗೆ ಸಿಬಿಐಗೆ ವಹಿಸುವಂತೆ ಛಲುವಾದಿ ನಾರಾಯಣಸ್ವಾಮಿ ಕೋರಿದ್ದಾರೆ.