ಬಾಲ್ಯ ವಿವಾಹ ತಡೆಗಟ್ಟಲು ಸಾರ್ವಜನಿಕರು ಸಹಕರಿಸಿ: ನಲಿನ್ ಅತುಲ್

| Published : May 25 2024, 12:45 AM IST

ಬಾಲ್ಯ ವಿವಾಹ ತಡೆಗಟ್ಟಲು ಸಾರ್ವಜನಿಕರು ಸಹಕರಿಸಿ: ನಲಿನ್ ಅತುಲ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಲ್ಯವಿವಾಹ ಪ್ರಕರಣಗಳ ತನಿಖೆ ಅಥವಾ ವಿಚಾರಣೆ ಸಂದರ್ಭದಲ್ಲಿ ಬಾಲಕಿಗೆ ಸಂಬಂಧಿಸಿದ ಶಾಲಾ ದಾಖಲಾತಿ ಒದಗಿಸುವುದು ಶಾಲಾ ಮುಖ್ಯೋಪಾಧ್ಯಾಯರ ಕರ್ತವ್ಯ. ದಾಖಲಾತಿ ಒದಗಿಸದ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ ವಹಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಕೊಪ್ಪಳ: ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ಮಾಹಿತಿ ನೀಡುವ ಮೂಲಕ ಸಕರಿಸಬೇಕು. ಬಾಲ್ಯವಿವಾಹ ಪ್ರಕರಣಗಳ ತನಿಖೆ ಅಥವಾ ವಿಚಾರಣೆ ಸಂದರ್ಭದಲ್ಲಿ ಬಾಲಕಿಗೆ ಸಂಬಂಧಿಸಿದ ಶಾಲಾ ದಾಖಲಾತಿ ಒದಗಿಸುವುದು ಶಾಲಾ ಮುಖ್ಯೋಪಾಧ್ಯಾಯರ ಕರ್ತವ್ಯ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಲಿಕೆ ಟ್ರಸ್ಟ್ ಹಾಗೂ ಕೆ.ಎಚ್.ಪಿ.ಟಿ. ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಾಖಲಾತಿ ಒದಗಿಸದ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ ವಹಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಎಷ್ಟೆಲ್ಲ ಜಾಗೃತಿ ಕಾರ್ಯಕ್ರಮಗಳು, ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡಿದಾಗ್ಯೂ ಬಾಲ್ಯವಿವಾಹ ಪ್ರಕರಣಗಳು ದಾಖಲಾಗುತ್ತಿವೆ. ಮುಂಚಿತವಾಗಿ ಮಾಹಿತಿ ದೊರೆತ ಪ್ರಕರಣಗಳಲ್ಲಿ ಬಾಲಕಿಯನ್ನು ರಕ್ಷಿಸಲು ಅವಕಾಶವಿರುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಸಾಕ್ಷಿ ಸಿಗುವುದಿಲ್ಲ. ಇದರಿಂದ ಬಾಲಕಿಯ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಶೈಕ್ಷಣಿಕವಾಗಿಯೂ ಬಾಲಕಿ ವಂಚಿತವಾಗುವ ಸಾಧ್ಯತೆ ಇರುತ್ತದೆ. ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಬಾಲ್ಯವಿವಾಹ ಪ್ರಕರಣಗಳಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯಿಂದ ಹಾಗೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಇಂತಹ ಪ್ರಕರಣಗಳಲ್ಲಿ ಬಾಲಕಿಯ ವಯಸ್ಸಿನ ದೃಢೀಕರಣಕ್ಕೆ ಶಾಲಾ ದಾಖಲಾತಿಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಮಾತನಾಡಿ, ವಿಶೇಷ ಪಾಲನಾ ಯೋಜನೆಯಡಿ ಅರ್ಹ ಮಗುವಿಗೆ ವೈದ್ಯಕೀಯ, ಪೌಷ್ಟಿಕ ಆಹಾರ, ಶಿಕ್ಷಣ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಲು ಕುಟುಂಬಕ್ಕೆ ಪೂರಕವಾಗಿ ₹1000ಗಳ ಆರ್ಥಿಕ ನೆರವನ್ನು ಮಗುವಿಗೆ 18 ವರ್ಷ ಪೂರ್ಣಗೊಳ್ಳುವ ವರೆಗೆ ಪ್ರತಿ ತಿಂಗಳು ಒದಗಿಸಲಾಗುತ್ತದೆ. ಈ ಯೋಜನೆಯಡಿ 2023-24ನೇ ಸಾಲಿನಲ್ಲಿ 931 ಮಕ್ಕಳನ್ನು ಗುರುತಿಸಿ, ಡಿಬಿಟಿ ಮುಖಾಂತರ ಅನುದಾನ ಬಿಡುಗಡೆ ಮಾಡಲಾಗಿದೆ. 2024-25ನೇ ಸಾಲಿನಲ್ಲಿ 915 ಮಕ್ಕಳನ್ನು ಗುರುತಿಸಲಾಗಿದೆ. ಅನುದಾನ ಬೇಡಿಕೆಯನ್ನು ಪ್ರಧಾನ ಕಚೇರಿಗೆ ಸಲ್ಲಿಸಲಾಗಿದೆ. ಮಕ್ಕಳಿಗೆ ಕುಟುಂಬದ ವಾತಾವರಣದಲ್ಲಿ ಬೆಳೆಸುವುದು, ಮಕ್ಕಳು ದುಡಿಮೆಗೆ ಹೋಗುವುದನ್ನು ತಪ್ಪಿಸಲು, ಶಿಕ್ಷಣ, ವೈದ್ಯಕೀಯ, ಪೌಷ್ಟಿಕ ಆಹಾರ, ವೃತ್ತಿ ತರಬೇತಿ ಹಾಗೂ ಇತರ ಅವಶ್ಯಕತೆಗಳನ್ನು ಪೂರೈಸಲು ಮಿಷನ್ ವಾತ್ಸಲ್ಯ ಯೋಜನೆಯಡಿ ಪ್ರಾಯೋಜಕತ್ವ ಯೋಜನೆಯನ್ನು ಅನಷ್ಠಾನಗೊಳಿಸಿದೆ. ಫಲಾನುಭವಿಗೆ ಪ್ರತಿ ತಿಂಗಳು ₹4000 ಅನುದಾನ ನೀಡಲಾಗುತ್ತದೆ. ಈ ಯೋಜನೆಯಡಿ 2024-25ನೇ ಸಾಲಿನ ಏಪ್ರಿಲ್ ವರೆಗೆ 240 ಅರ್ಜಿಗಳು ಸ್ವೀಕೃತವಾಗಿದ್ದು, ಮಕ್ಕಳ ಮನೆ, ಭೇಟಿ, ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಇದರೊಂದಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಪಿಎಂ ಕೇರ್ ಫಾರ್ ಚಿಲ್ಡ್ರನ್, ಉಪಕಾರ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಾರಂಭಿಕ ಹಾಗೂ 2023-24ನೇ ಸಾಲಿನಲ್ಲಿ ದಾಖಲಾದ ಒಟ್ಟು 208 ಪೋಕ್ಸೋ ಪ್ರಕರಣಗಳಲ್ಲಿ 101 ಪ್ರಕರಣಗಳಲ್ಲಿ ಆರೋಪಿ ಖುಲಾಸೆಯಾಗಿದ್ದು, 4 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 103 ಪ್ರಕರಣಗಳು ವಿವಿಧ ಹಂತಗಳಲ್ಲಿ ಬಾಕಿ ಇವೆ. ಬಾಕಿ ಇರುವ 103 ಪ್ರಕರಣಗಳು ಹಾಗೂ 2024-25ನೇ ಸಾಲಿನ ಏಪ್ರಿಲ್ ತಿಂಗಳ ವರೆಗೆ ದಾಖಲಾದ ಒಟ್ಟು 106 ಪ್ರಕರಣಗಳಲ್ಲಿ 6ರಲ್ಲಿ ಆರೋಪಿ ಖುಲಾಸೆಯಾಗಿದ್ದು, ಇನ್ನೂ 100 ಪ್ರಕರಣಗಳು ವಿವಿಧ ಹಂತಗಳಲ್ಲಿ ಬಾಕಿ ಇವೆ ಎಂದು ಮಾಹಿತಿ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಪ್ರಕಾಶ, ನಿರೂಪಣಾಧಿಕಾರಿ ಗಂಗಪ್ಪ, ಯುನಿಸೆಫ್‌ನ ಹರೀಶ್ ಜೋಗಿ ಉಪಸ್ಥಿತರಿದ್ದರು.