ಹೋಟೆಲ್ ಉದ್ಯಮದಿಂದ ಅತಿ ಹೆಚ್ಚು ಉದ್ಯೋಗ ಸೃಷ್ಟಿ

| Published : Jul 29 2024, 12:47 AM IST

ಸಾರಾಂಶ

ಶಿವಮೊಗ್ಗ ನಗರದ ಮಥುರಾ ಪಾರಡೈಸ್ ರಜತೋತ್ಸವ ಸಂಭ್ರಮಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಪಾರಡೈಸ್ ಮಾಲೀಕ ಎನ್.ಗೋಪಿನಾಥ್ ಹಾಗೂ ಡಾ. ಲಕ್ಷ್ಮೀದೇವಿ ಗೋಪಿನಾಥ್‌ಗೆ ರಜತೋತ್ಸವ ಸಮಿತಿಯಿಂದ ಸನ್ಮಾನಿಸಲಾಯಿತು.

ಕನ್ನಪ್ರಭ ವಾರ್ತೆ ಶಿವಮೊಗ್ಗ

ಹೋಟೆಲ್ ಉದ್ಯಮ ಒಂದು ಪ್ರಯಾಸಕರ ವ್ಯವಹಾರ. ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಅವಕಾಶ ಸೃಷ್ಟಿಸುವ ಉದ್ಯಮ ಹೋಟೆಲ್ ಕ್ಷೇತ್ರ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದರು.

ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಥುರಾ ಪಾರಡೈಸ್ ರಜತೋತ್ಸವ ಸಂಭ್ರಮಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಪಡೆದವರು, ಪಡೆಯದೇ ಇರುವವರು ಸೇರಿ ಎಲ್ಲ ವರ್ಗದವರಿಗೂ ವಸತಿ, ಊಟದ ಜತೆಗೆ ಸಂಬಳ ನೀಡುವ ಉದ್ಯಮ ಹೋಟೆಲ್ ಆಗಿದೆ ಎಂದು ಅಭಿಪ್ರಾಯಪಟ್ಟರು.

ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಮಥುರಾ ಹೋಟೆಲ್ ವ್ಯಾಪಾರ ವಹಿವಾಟಿನ ಜತೆಯಲ್ಲಿ ಸಮಾಜಮುಖಿ ವೇದಿಕೆಗಳಿಗೆ ಹೆಚ್ಚಿನ ಅವಕಾಶ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, 25 ವರ್ಷಗಳ ಹಿಂದೆ ಶಿವಮೊಗ್ಗದ ಸಣ್ಣ ನಗರದಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಉತ್ತಮ ಹೋಟೆಲ್ ಮತ್ತು ವಸತಿಗೃಹ ಪ್ರಾರಂಭಿಸುವ ಧೈರ್ಯವನ್ನು ಗೋಪಿನಾಥ್ ಮಾಡಿದ್ದರು, ಇಂದು ಸಮಾಜಮುಖಿ ಕಾರ್ಯಕ್ರಮಗಳಿಗೆ ಸಹಕಾರಿಯಾಗುತ್ತಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಮಥುರಾ ಗೋಪಿನಾಥ್ ಅವರು ಒಬ್ಬ ದೂರದರ್ಶಿ. ನನ್ನ ಕನಸಿನ ಶಿವಮೊಗ್ಗ ಎಂಬ ಸಂಸ್ಥೆ ರೂಪಿಸಿ ಹಲವಾರು ಉತ್ತಮ ಯೋಜನೆ ಸಾಕಾರಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

ರಜತೋತ್ಸವ ಸಮಿತಿ ಅಧ್ಯಕ್ಷ ವಸಂತ ಹೋಬಳಿದಾರ್ ಮಾತನಾಡಿ, ಪ್ರತಿಯೊಬ್ಬ ಉದ್ಯಮಿ ತನ್ನ ಉದ್ಯಮದ ಜತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಿದಲ್ಲಿ ಎಲ್ಲ ಸಮುದಾಯಗಳು, ನಗರಗಳು ಉತ್ತಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಉತ್ಸವದ ಕಾರ್ಯವನ್ನು 50ವಿವಿಧ ಸಂಘ ಸಂಸ್ಥೆಗಳು ನೇತೃತ್ವ ವಹಿಸಿರುವುದು ಮಥುರಾ ಗೋಪಿನಾಥ್ ಅವರ ಬಗ್ಗೆ ಇರುವ ಅಭಿಮಾನವಾಗಿದೆ. ಕಾರ್ಯಕ್ರಮ ಸಮಾಜದಲ್ಲಿ ಸೇವೆ ಕಾರ್ಯಕ್ಕೆ ನಾಂದಿ ಹಾಡಿ ಹಲವರ ಮನ ಪರಿವರ್ತನೆ ಮಾಡಲಿದೆ ಎಂದು ತಿಳಿಸಿದರು.

ರಜತ ಮಹೋತ್ಸವ ವರ್ಷದ ಸಂಭ್ರಮಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲೆ 80 ಪ್ರವಾಸಿ ತಾಣಗಳನ್ನು ಸರ್ಕಾರ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿ ಅನುಷ್ಠಾನ ಮಾಡಲು ಪ್ರಯತ್ನಿಸಲಾಗುವುದು ಎಂದು‌ ವಿವರಿಸಿದರು.

ಮಥುರಾ ಪಾರಡೈಸ್ ಮಾಲೀಕ ಎನ್.ಗೋಪಿನಾಥ್ ಹಾಗೂ ಡಾ. ಲಕ್ಷ್ಮೀದೇವಿ ಗೋಪಿನಾಥ್ ಅವರಿಗೆ ರಜತೋತ್ಸವ ಸಮಿತಿಯಿಂದ ಸನ್ಮಾನಿಸಲಾಯಿತು. ಜಿ.ವಿಜಯಕುಮಾರ್, ವಿಜೇಂದ್ರ, ನಾಗಭೂಷಣ್, ಕೃಷ್ಣಾನಂದ, ಎನ್.ರಾಜೇಂದ್ರ, ಮೋಹನ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.